ಶಿವಾಜಿ ಮಹಾರಾಜರ ಫ್ಲೆಕ್ಸ್‌ ತೆರವಿನಿಂದ ಜಿಲ್ಲೆ ಜನತೆಗೆ ಆಘಾತ: ಶಿವಕುಮಾರ

| Published : Aug 31 2025, 01:08 AM IST

ಶಿವಾಜಿ ಮಹಾರಾಜರ ಫ್ಲೆಕ್ಸ್‌ ತೆರವಿನಿಂದ ಜಿಲ್ಲೆ ಜನತೆಗೆ ಆಘಾತ: ಶಿವಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಗಣೇಶೋತ್ಸವ ಹಿನ್ನೆಲೆ ಅಳವಡಿಸಿದ್ದ ಶಿವಾಜಿ ಮಹಾರಾಜರ ಫ್ಲೆಕ್ಸ್ ತೆರವುಗೊಳಿಸಿದ ಪೊಲೀಸರ ಕ್ರಮವನ್ನು ಛತ್ರಪತಿ ಶಿವಾಜಿ ಮಹಾರಾಜ್‌ ಅಭಿಮಾನಿ ಬಳಗ ತೀವ್ರವಾಗಿ ಖಂಡಿಸಿದೆ.

- ಪೊಲೀಸರ ನಡೆಯಿಂದ ಛತ್ರಪತಿ ಶಿವಾಜಿ ಇತಿಹಾಸಕ್ಕೆ ಅವಮಾನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಾರ್ವಜನಿಕ ಗಣೇಶೋತ್ಸವ ಹಿನ್ನೆಲೆ ಅಳವಡಿಸಿದ್ದ ಶಿವಾಜಿ ಮಹಾರಾಜರ ಫ್ಲೆಕ್ಸ್ ತೆರವುಗೊಳಿಸಿದ ಪೊಲೀಸರ ಕ್ರಮವನ್ನು ಛತ್ರಪತಿ ಶಿವಾಜಿ ಮಹಾರಾಜ್‌ ಅಭಿಮಾನಿ ಬಳಗ ತೀವ್ರವಾಗಿ ಖಂಡಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಮುಖಂಡ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಅವರು, ಮಟ್ಟಿಕಲ್ಲು ಬಳಿ ಸ್ವಾತಂತ್ರ್ಯ ವೀರ ಸಾವರ್ಕರ್ ಯುವಕರ ಬಳಗ ಗಣೇಶೋತ್ಸವ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ವಧಿಸುವ ಫ್ಲೆಕ್ಸ್‌ ಅಳವಡಿಸಿದ್ದರು. ಅದನ್ನು ಪೊಲೀಸರು ತೆರವು ಮಾಡಿದ್ದು ಸರಿಯಲ್ಲ. ಇದರಿಂದ ಜಿಲ್ಲೆ ಜನರಿಗೆ ತೀವ್ರ ಆಘಾತವಾಗಿದೆ ಎಂದರು.

ಫ್ಲೆಕ್ಸ್ ತೆರವು ವಿಚಾರದಲ್ಲಿ ಪೊಲೀಸರ ನಡೆ ಇತಿಹಾಸ ಹಾಗೂ ಶೌರ್ಯದ ಪ್ರತೀಕವಾದ ಶಿವಾಜಿ ಮಹಾರಾಜರ ಚಿತ್ರಕ್ಕೆ ಮಾಡಿದ ಅವಮಾನವಾಗಿದೆ. ಹಳೆ ದಾವಣಗೆರೆಯಿಂದ ಮಾಗಾನಹಳ್ಳಿ ಕಡೆ ಹೋಗುವ ಮಾರ್ಗದ ವೃತ್ತವೊಂದರಲ್ಲಿ ಟಿಪ್ಪು ಸುಲ್ತಾನನ ದೊಡ್ಡ ಫ್ಲೆಕ್ಸ್ ಹಾಕಿದ್ದಾರೆ. ಇದರಿಂದ ಇನ್ನೊಂದು ಕೋಮಿನ ಶಾಂತಿಗೆ ಧಕ್ಕೆ ಆಗುವುದಿಲ್ಲವೇ? ಛತ್ರಪತಿ ಶಿವಾಜಿ ಅಫ್ಜಲ್ ಖಾನ್ ವಧೆ ಮಾಡಿರುವ ಚಿತ್ರ ಪ್ರಚೋದನೆಯದ್ದಲ್ಲ, ಅದು ನಮಗೆ ಪ್ರೇರಣಾದಾಯಕ. ಅದು ವಿವಾದ ಸೃಷ್ಟಿಸುವ ಚಿತ್ರವಲ್ಲ, ನಮ್ಮ ನೆಲದ ಶೌರ್ಯ, ಇತಿಹಾಸ ಸಾರುವ ಚಿತ್ರ ಎಂಬುದನ್ನು ಪೊಲೀಸರು ಅರಿಯಬೇಕು. ಫ್ಲೆಕ್ಸ್ ತೆರವುಗೊಳಿಸುವ ಮೂಲಕ ಪೊಲೀಸರು ತಪ್ಪು ಮಾಡಿದ್ದಾರೆ ಎಂದರು.

ಪೊಲೀಸರ ಕಣ್ಣಿಗೆ ಟಿಪ್ಪುವಿನ ದೊಡ್ಡ ಫ್ಲೆಕ್ಸ್ ಕಾಣಿಸುವುದೇ ಇಲ್ಲವೇ? ಅರಳೀಮರ ವೃತ್ತದಲ್ಲಿ ಸಹ ರಸ್ತೆಗೆ ದೊಡ್ಡ ಪೈಪ್‌ಗಳನ್ನು ಅಳವಡಿಸಿ, ಮತಾಂಧ ಟಿಪ್ಪುವಿನ ಫ್ಲೆಕ್ಸ್ ಹಾಕಲು ತಯಾರಿ ನಡೆದಿದೆ. ಆಜಾದ್ ನಗರ ಠಾಣೆ ಅಧಿಕಾರಿ, ಸಿಬ್ಬಂದಿಗೆ ಅದೆಲ್ಲಾ ಕಾಣುವುದಿಲ್ಲವೇ ಎಂದು ಕಿಡಿಕಾರಿದರು.

ಬಳಗದ ಆರ್.ರಮೇಶ ನಾಯ್ಕ, ಬೇತೂರು ಬಸವರಾಜ, ಶಂಕರಗೌಡ ಬಿರಾದಾರ, ಬಾಲಚಂದ್ರ ಶ್ರೇಷ್ಠಿ, ಪ್ರಹ್ಲಾದ ತೇಲ್ಕರ್, ಶಿವಕುಮಾರ ದೇವರೆಡ್ಡಿ, ಶಿವಾನಂದ, ಗುರುರಾಜ, ಮಿಥುನ್ ಗಾಯಕವಾಡ್‌, ಸಂತೋಷ್, ಮಂಜುನಾಥ, ರಾಜು ಗೌಡ, ದುಗ್ಗೇಶ ಇತರರು ಇದ್ದರು.

- - -

(ಕೋಟ್‌) ಹಿಂದೂಗಳ ಹೋರಾಟ ಹಾಗೂ ಹಿಂದೂ ಪರ ಹೋರಾಟಗಾರರನ್ನು ಜಿಲ್ಲೆಯಲ್ಲಿ ಹತ್ತಿಕ್ಕುವ ಕೆಲಸ ಪೊಲೀಸರಿಂದ ಆಗುತ್ತಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ನಾವು ಛತ್ರಪತಿ ಶಿವಾಜಿ ಮಹಾರಾಜರ ಅಪ್ಪಟ ಅಭಿಮಾನಿಗಳು. ಮುಂದಿನ ದಿನಗಳಲ್ಲಿ ನಾವೂ ಫ್ಲೆಕ್ಸ್‌ಗಳನ್ನು ಹಾಕೇ ಹಾಕುತ್ತೇವೆ. ಈ ವಿಚಾರದಲ್ಲಿ ನಮ್ಮ ಹೋರಾಟ ನಿಲ್ಲದು.

- ರಾಜನಹಳ್ಳಿ ಶಿವಕುಮಾರ, ಮಾಜಿ ಅಧ್ಯಕ್ಷ, ದೂಡಾ.

- - -

-30ಕೆಡಿವಿಜಿ7.ಜೆಪಿಜಿ:

ದಾವಣಗೆರೆಯಲ್ಲಿ ಶನಿವಾರ ದೂಡಾ ಮಾಜಿ ಅಧ್ಯಕ್ಷ, ಛತ್ರಪತಿ ಶಿವಾಜಿ ಮಹಾರಾಜ ಅಭಿಮಾನಿ ಬಳಗದ ರಾಜನಹಳ್ಳಿ ಶಿವಕುಮಾರ ಮತ್ತಿತರರು ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕೊಲ್ಲುವ ಪೋಸ್ಟರ್ ಹಿಡಿದು ಸುದ್ದಿಗೋಷ್ಠಿ ನಡೆಸಿದರು.