ಇಡೀ ರಾಜ್ಯದ ಜನರ ಒಲವು ಜೆಡಿಎಸ್ ಮೇಲಿದೆ

| Published : Jul 16 2025, 12:45 AM IST

ಸಾರಾಂಶ

ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜ‌ನರಿಗೆ ತಲುಪುತ್ತಿಲ್ಲ. ಕನ್ನಡಿಗರಿಗೆ ತೆರಿಗೆ ಮೂಲಕ ಕತ್ತರಿ ಹಾಕಿ ದುಡ್ಡು ಹಾಕುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಜೆಡಿಎಸ್ ಪಕ್ಷ ಬರೀ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿಲ್ಲ. ಇಡೀ ರಾಜ್ಯದ ಜನರ ಒಲವು ಜೆಡಿಎಸ್ ಮೇಲಿದೆ. ಮುಂಬರುವ ವಿಧಾನಸಭೆಯಲ್ಲಿ ಮಂಡ್ಯ, ಮ್ಯೆಸೂರು, ಬೆಂಗಳೂರು ಭಾಗದಲ್ಲಿ ಶಾಸಕರು ಆಯ್ಕೆಯಾಗುತ್ತಾರೆ. ಹಾಗೆಯೇ ವಿಜಯಪುರ ಜಿಲ್ಲೆಯಲ್ಲಿ ಕೂಡ ಆಯ್ಕೆ ಮಾಡಬೇಕೆಂದು ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮನವಿ ಮಾಡಿದರು.ವಿಜಯಪುರ ಜಿಲ್ಲೆಯ ಬ.ಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಎಂ.ಜಿ.ಕೋರಿ ಡಾ.ಬಿ.ಜಿ ಬ್ಯಾಕೋಡ ಪ.ಪೂ. ಮಹಾವಿದ್ಯಾಲಯದಲ್ಲಿ ಮಂಗಳವಾರ ಸಂಜೆ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬರೀ ಕಾಗದದಲ್ಲಿ ಅಭಿವೃದ್ಧಿಯಾಗುತ್ತಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಘೋಷಣೆ ಮಾಡಿದ್ದಾರೆ. ಅದು ಅನುಷ್ಠಾನಗೊಳ್ಳಬೇಕು ಎಂದರು.

ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜ‌ನರಿಗೆ ತಲುಪುತ್ತಿಲ್ಲ. ಕನ್ನಡಿಗರಿಗೆ ತೆರಿಗೆ ಮೂಲಕ ಕತ್ತರಿ ಹಾಕಿ ದುಡ್ಡು ಹಾಕುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಉಪ ಚುನಾವಣೆಯಲ್ಲಿ, ಎಂಪಿ ಚುನಾವಣೆಯಲ್ಲಿ ದುಡ್ಡು ಹಾಕಿದರು. ಮುಂದೆ ಟಿಪಿ, ಜಿಪಂ ಚುನಾವಣೆಯಲ್ಲಿ ಹಾಕಬಹುದು. ಕಾಂಗ್ರೆಸ್ ಪಕ್ಷದ ಶಾಸಕರೇ ಅಸಹಾಯಕತೆ ಹೊರಹಾಕುತ್ತಿದ್ದಾರೆ. ಬಿ.ಆರ್.ಪಾಟೀಲ ಶಾಸಕರಿಗೆ ಆಶ್ರಯ ಮನೆಗಳನ್ನು ರದ್ದು ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ತಂದಿರುವುದು ತಪ್ಪಲ್ಲ. ಆದರೆ ರಾಜ್ಯದ ಬಜೆಟ್‌ ಆರ್ಥಿಕ ಪರಿಸ್ಥಿತಿ ಏನಿದೆ ಎಂಬುದು ಅರಿತುಕೊಂಡು ನಡೆಯಿರಿ. ನಿಮಗೆ ಶ್ವೇತಪತ್ರ ಹೊರಡಿಸಲು ಸಾಧ್ಯವೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ವಾಸ್ತವ ಪರಿಸ್ಥಿತಿ ತೆರೆದಿಡಲಿ ಎಂದು ಸವಾಲು ಹಾಕಿದರು.

೨೦ ತಿಂಗಳಲ್ಲಿ ಕುಮಾರಸ್ವಾಮಿ ಅವರು ಜನಪರ ಆಡಳಿತ ನಡೆಸಿದರು. ೨೦೧೮ರಲ್ಲಿ‌ ಮತ್ತೆ ಸಿಎಂ ಆದಾಗಲು ರೈತ ಪರ ಕೆಲಸ ಮಾಡಿ ₹೨೫ ಸಾವಿರ ಕೋಟಿ ಸಾಲಮನ್ನಾ ಮಾಡಿದರು. ಜನರೊಂದಿಗೆ ಜನತಾದಳ ಕಾರ್ಯಕ್ರಮ ರಾಜ್ಯದಲ್ಲಿ ವಿವಿಧೆಡೆ ೫೦ ಲಕ್ಷ ನೋಂದಣಿ ಮಾಡಿ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿದೆ ಎಂದು ಹೇಳಿದರು.

ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆ ಅಭಿವೃದ್ಧಿ ಶೂನ್ಯವಾಗಿದೆ. ಬಸವರಾಜ ರಾಯರೆಡ್ಡಿ ಅವರು ಕೂಡ ಗ್ಯಾರಂಟಿ ಯೋಜನೆ ವಿರುದ್ಧ ಧ್ವನಿ ಎತ್ತಿದ್ದರು ಎಂದ ಅವರು, ಅಭಿವೃದ್ಧಿಗೆ ಅನುದಾನ ಕಡಿಮೆ ಬರುತ್ತಿದೆ. ಆದ್ದರಿಂದ ಅವಶ್ಯಕತೆವಿದ್ದಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಪಕ್ಷ ಅಭಿವೃದ್ಧಿ ಪಕ್ಷವಾಗಿದೆ. ಎನ್‌ಡಿಎ ನೇತೃತ್ವದ ಸರ್ಕಾರ ಬಂದರೆ ಆಲಮಟ್ಟಿ ಡ್ಯಾಂ ೫೨೪ ಎತ್ತರ ಮಾಡಿ ಜಿಲ್ಲೆಯ ಸಂಪೂರ್ಣ ನೀರಾವರಿ ಮಾಡುತ್ತೇವೆ ಎಂದರು. ಮುಂದಿನ ಬಾರಿ ನೂರಕ್ಕೆ ನೂರರಷ್ಠು ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದ ಶಾಸಕರು, ತಾಲೂಕಿನಲ್ಲಿ ೧ ಲಕ್ಷ ಜನರನ್ನು ಜೆಡಿಎಸ್ ನೋಂದಾಯಿಸುವ ಭರವಸೆ ನೀಡಿದರು.

ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಆಲಮಟ್ಟಿ ಡ್ಯಾಂ ಕಟ್ಟಿದ್ದರು. ಆದರೆ ಅದರ ನೀರು ಕಾಲುವೆಗೆ ಬರಲಿಕ್ಕೆ ಕಾರಣವೇ ಮಾಜಿ ಪಿ.ಎಂ ದೇವೇಗೌಡರು‌ ಎಂದ ಅವರು, ಎಲ್ಲ ಭಾಗದ ನೀರಾವರಿ ಯೋಜನೆಗಳಿಗೆ ಒತ್ತು‌ನೀಡಿದ್ದರೆಂದರು. ಗ್ಯಾರಂಟಿ ಕೊಟ್ಟಿದ್ದೇವೆ ನುಡಿದಂತೆ ನಡಿದ್ದೇವೆ. ವಿದ್ಯುತ್ ಫ್ರೀ ಎಂದು ಹೇಳಿದ ಕಾಂಗ್ರೆಸ್ ವಿದ್ಯುತ್ ಬಿಲ್‌ ಹೆಚ್ಚಳ ಮಾಡಿದೆ. ಬಾಂಡ್‌ ಪೇಪರ್ ದರ ಹೆಚ್ಚಳ ಮಾಡಿದೆ. ಫ್ರೀ, ಫ್ರೀ, ಫ್ರೀ ಎಂದು ದರ ಹೆಚ್ಚಿಸುವುದು ನ್ಯಾಯವೇ?. ಕಾಯಕವೇ ಕೈಲಾಸ ಎಂಬ‌ ಬಸವಣ್ಣನವರ ತತ್ವದ ವಿರುದ್ಧ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯಿಂದ ಹಲವಾರು ಶಾಸಕರಿಗೆ‌ ಅಭಿವೃದ್ಧಿಗೆ ಹಣವಿಲ್ಲದ ಪರಸ್ಥಿತಿ‌ ಬಂದಿದೆ. ಕಾಂಗ್ರೆಸ್‌ ಪಕ್ಷದಲ್ಲಿ‌ ನಾಯಕರಿಲ್ಲ. ಈಗೀನ ಸಿಎಂ ಸಿದ್ದರಾಮಯ್ಯ ‌ಸೇರಿದಂತೆ ಹಲವಾರು ಸಚಿವರು‌ ಜನತಾದಳ ಪಕ್ಷದವರೆಯಾಗಿದ್ದಾರೆ‌ ಎಂದರು.

ಮಾಜಿ ಸಚಿವ ಹಣಮಂತಪ್ಪ ಅಲ್ಕೋಡ ಮಾತನಾಡಿ, ಕಾಂಗ್ರೆಸೇತರ ಸರ್ಕಾರ ಬಂದಾಗ ಜನಪರ ಕೆಲಸಗಳಾಗಿವೆ. ವಿ.ಪಿ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಎಲ್ಲ ವರ್ಗದ ಜನರಿಗೆ ಮೀಸಲಾತಿ ತಂದ್ದರು. ರೈತಪರ ಯೋಜನೆಗಳು ಜಾರಿಯಾಗಿರುವುದು ಮಾಜಿ ಪಿಎಂ ದೇವೇಗೌಡರು ಎಂಬುದನ್ನು ಮರೆಯಬಾರದು. ಅಲ್ಪಸಂಖ್ಯಾತರಿಗೆ‌ ಶೇ.೪ ಮಿಸಲಾತಿ ಕಲ್ಪಿಸಿದ್ದಾರೆ. ಸರ್ಕಾರ ಬಂದು ಎರಡುವರೆ ವರ್ಷ ಗತಿಸಿದರು ಕೂಡಾ ಒಬ್ಬ‌ ಶಿಕ್ಷಕರ ನೇಮಕಾತಿ‌ ಆಗಿಲ್ಲ ಎಂದರು.

ದೇವದುರ್ಗ ಶಾಸಕಿ‌ ಕರೆಮ್ಮ ನಾಯಕ ಮಾತನಾಡಿ, ಸಾಮಾನ್ಯ ವ್ಯಕ್ತಿಯು ಶಾಸಕರಾನ್ನಾಗಿ ಮಾಡುವ ಪಕ್ಷವೆಂದರೆ ಜೆಡಿಎಸ್. ಭಾಗ್ಯಗಳ ನೆಪದಲ್ಲಿ‌ ಅಭಿವೃದ್ಧಿ ಶೂನ್ಯವಾಗಿದೆ. ಇದರಿಂದ‌ ಶಾಸಕರು‌ ಅಭಿವೃದ್ಧಿ ಮಾಡುವ ಕನಸು-ನನಸಾಗುತ್ತಿಲ್ಲ. ಮುಂದಿನ‌ ಬಾರಿ ಕಾಂಗ್ರೆಸ್ ಪಕ್ಷ ದಿಕ್ಕು-ದಿವಾಳಿಯಾಗುತ್ತದೆ ಎಂದರು.

ಮಾಜಿ ಎಂಎಲ್‌ಸಿ ಬಿ‌ಜಿ ಪಾಟೀಲ, ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಹಣಮಂತಪ್ಪ ಅಲ್ಕೋಡ, ದೊಡ್ಡಪ್ಪಗೌಡ ಪಾಟೀಲ(ನರಗೋಳ), ಬಾಲರಾಜ ಗುತ್ತೆದಾರ, ಸಿ.ವಿ.ಚಂದ್ರಶೇಖರ, ಸುನಿತಾ ರಾಠೋಡ, ಶಿವಕುಮಾರ ನಾಟೀಕಾರ, ಹಣಮಂತ ಮಾವಿನಮರದ, ಗುರುರಾಜ ಹುಣಶಿಮರದ, ಸಾಹೇಬ ಗೌಡ ಪಾಟೀಲ (ಲಕ್ಕುಂಡಿ), ಸಾಯಬಣ್ಣ ಹಾಲ್ಯಾಳ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ ಸೇರಿದಂತೆ ಇತರರು ಇದ್ದರು. ಜೆಡಿಎಸ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಸ್ವಾಗತಿಸಿದರು. ಪ್ರಕಾಶ ಉಮರ್ಜಿ ನಿರೂಪಿಸಿದರು.