ಸಾರಾಂಶ
ಬಾಳೆಹೊನ್ನೂರು : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಮಾತ್ರವಲ್ಲದೇ ರಾಷ್ಟ್ರದಲ್ಲಿಯೇ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ ಎಂದು ಶಾಸಕ, ಕೆಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಮತದಾರರು ಗಂಭೀರ ಯೋಚಿಸಿ ಮತ ನೀಡುವ ಕಾಲಘಟ್ಟದಲ್ಲಿದ್ದು, ಪ್ರಮುಖವಾಗಿ ಬದುಕು ಮತ್ತು ಸತ್ಯ ಹೇಳುವ ಮೂಲಕ ನುಡಿದಂತೆ ನಡೆದ ಸರ್ಕಾರ ಹಾಗೂ ಇನ್ನೊಂದು ಕಡೆ ಸುಳ್ಳು ಭರವಸೆ ನೀಡಿ ಕಳೆದ 10 ವರ್ಷಗಳಿಂದ ಏನನ್ನೂ ಅನುಷ್ಠಾನಗೊಳಿಸದ ಸರ್ಕಾರದ ನಡುವಿನ ಚುನಾವಣೆಯಾಗಿದೆ ಎಂದರು.ಕಾಂಗ್ರೆಸ್ ಈ ಬಾರಿ ಬದುಕನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದು, ಕೇಂದ್ರದ ಇಂದಿನ ಬೆಲೆ ಏರಿಕೆ, ಆರ್ಥಿಕ ನೀತಿಗಳ ಪರಿಣಾಮ ಜನ ಜರ್ಜರಿತರಾಗಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಯುವಕರಿಗೆ ಉದ್ಯೋಗ ದೊರೆಯುತ್ತಿಲ್ಲ. ಕಾಂಗ್ರೆಸ್ ಜನರಿಗೆ ಮೂಲಭೂತ ಸೌಕರ್ಯ ನೀಡಲು ಪ್ರಯತ್ನಿಸುತ್ತಿದ್ದರೆ ಬಿಜೆಪಿ ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತಿ ಬಹುಸಂಖ್ಯಾತರನ್ನು ಒಲೈಸುವ ತಂತ್ರಗಾರಿಕೆ ಮಾಡಿ ಹಿಂದುತ್ವದ ಆಧಾರದ ಮೇಲೆ ಮತ ಕೇಳಲುಹೊರಟಿದೆ ಎಂದು ಟೀಕಿಸಿದರು.
ಬಿಜೆಪಿ ಚುನಾವಣೆ ಪೂರ್ವದಲ್ಲಿ ಹೇಳಿದಂತೆ 2 ಕೋಟಿ ಉದ್ಯೋಗ ನೀಡುವಲ್ಲಿ, ರೈತರ ಆದಾಯ ದ್ವಿಗುಣಗೊಳಿಸುವಲ್ಲಿ, ಗಡಿ ರಕ್ಷಣೆ ವಿಚಾರದಲ್ಲಿ ವಿಫಲವಾಗಿದ್ದು, ರಾಜ್ಯಕ್ಕೆ ಭೀಕರ ಬರಗಾಲ ಬಂದರೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ತೆರಿಗೆ ಸಮರ್ಪಕವಾಗಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ನ್ಯಾಯಾಲಯ ಸಹ ಕೇಂದ್ರಕ್ಕೆ ಛೀಮಾರಿ ಹಾಕಿ ರಾಜ್ಯದ ಪಾಲನ್ನು ಕೊಡಲು ಹೇಳಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಚುನಾವಣೆ ನಡೆದ ರಾಜ್ಯಗಳಲ್ಲಿ ಈಗಾಗಲೇ ಬಿಜೆಪಿ ವಿರುದ್ಧ ಮತದಾನೋತ್ತರ, ಮತದಾನ ಪೂರ್ವ ಸಮೀಕ್ಷೆಗಳು ಹೊರಬಂದಿದೆ. ರಾಜ್ಯದಲ್ಲೂ ಕಾಂಗ್ರೆಸ್ ಪರ ಒಲವನ್ನು ಮತದಾರರು ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಕಳೆದ ವರ್ಷ ಜಾರಿಗೊಳಿಸಿದ ಭಾಗ್ಯಗಳು ಜನರ, ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸಲು ನೀಡಿ ದ್ದಾಗಿದ್ದು, ಭಾಗ್ಯಗಳ ಬಗ್ಗೆ ಟೀಕೆ ಮಾಡಿದ ಬಿಜೆಪಿ, ಜೆಡಿಎಸ್ ಅವುಗಳನ್ನು ಪಡೆದಿಲ್ಲವೇ ಎಂದು ಪ್ರಶ್ನಿಸಿದರು. ಮಹಿಳೆಯರಿಗೆ ನೀಡಿದ ಭಾಗ್ಯದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಖಂಡನೀಯ ಎಂದರು.
ಎಚ್.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ಬಹುಮತವಿಲ್ಲದಿದ್ದರೂ ರಾಜ್ಯಸಭೆಗೆ ಕಳುಹಿಸಿದ್ದು ಕಾಂಗ್ರೆಸ್. ಕುಮಾರ ಸ್ವಾಮಿ ಅವರಿಗೆ ಸೂಕ್ತ ಬೆಂಬಲವಿಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಮಾಡಲಾಗಿತ್ತು. ಜೆಡಿಎಸ್‌ನದ್ದು ಕೇವಲ ಅನುಕೂಲ ಸಿಂಧು ರಾಜಕಾರಣವಾಗಿದೆ.ಬಾಳೆಹೊನ್ನೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಖಾಂಡ್ಯ ಹೋಬಳಿ ಅಧ್ಯಕ್ಷ ಬಿ.ಸಿ.ಮಂಜುನಾಥ್, ತಾಲೂಕು ವಕ್ತಾರ ಹಿರಿಯಣ್ಣ, ಪ್ರಮುಖರಾದ ಎಂ.ಎಸ್.ಅರುಣೇಶ್, ಸುಧಾಕರ್, ದಿನೇಶ್, ಮಹೇಶ್ ಆಚಾರ್ಯ, ಹೇಮಲತಾ, ಇಬ್ರಾಹಿಂ ಶಾಫಿ, ಶಶಿಕಲಾ, ಮಹಮ್ಮದ್ ಜುಹೇಬ್, ಸುಧಾಕರ್ ವಾಟುಕೊಡಿಗೆ ಮತ್ತಿತರರು ಹಾಜರಿದ್ದರು.
ಪಹಣಿ ದರ ಹೆಚ್ಚಳ: ಚುನಾವಣೆ ಬಳಿಕ ಚರ್ಚೆ ರೈತರ ಪಹಣಿಗಳ ದರ ಹೆಚ್ಚಾಗಿದ್ದು, ಇದರಿಂದ ರೈತರಿಗೆ ತೊಂದರೆಯಾಗಿದೆ ಎಂಬ ದೂರುಗಳು ಬಂದಿದ್ದು, ಈ ಬಗ್ಗೆ ಚುನಾವಣೆ ಬಳಿಕ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಈ ಕುರಿತು ಚರ್ಚಿಸಿ ದರವನ್ನು ಪರಿಷ್ಕೃತಗೊಳಿಸುವಂತೆ ಮನವಿ ಮಾಡಲಾಗುವುದು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಜನರ ಹಣವನ್ನೇ ಜನರಿಗೆ ವಾಪಾಸ್ ನೀಡುತ್ತಿದೆ. ಅಭಿವೃದ್ಧಿಗೆ ಎಲ್ಲೂ ಸಹ ಅನುದಾನ ಕಡಿಮೆಗೊಳಿಸಿಲ್ಲ. ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗೆ ಹಣ ಮೀಸಲಿಟ್ಟಂತೆ ಅಭಿವೃದ್ಧಿ ಕಾರ್ಯಕ್ಕೂ ಅನುದಾನವಿಟ್ಟಿದೆ.ಕೇಂದ್ರ ಸರ್ಕಾರದಂತೆ ರೈತರಿಂದ ಗೊಬ್ಬರಕ್ಕೆ ಹೆಚ್ಚು ಹಣ ಪಡೆದು, ಗ್ಯಾಸ್, ಗೊಬ್ಬರ ಮತ್ತಿತರರ ಸಬ್ಸಿಡಿಗಳನ್ನು ನಿಲ್ಲಿಸಿ ಕಿಸಾನ್ ಸಮ್ಮಾನ್ ಹೆಸರಿನಲ್ಲಿ ವಾಪಾಸ್ ರೈತರಿಗೆ ಹಣ ನೀಡುತ್ತಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಹಣವನ್ನು ಈ ಮಾದರಿಯಲ್ಲಿ ನೀಡುತ್ತಿಲ್ಲ ಎಂದರು