ಉತ್ತರಕನ್ನಡ ಜಿಲ್ಲೆಯ ಜನತೆಯದ್ದು ಹೋರಾಟದ ಬದುಕು; ಈಗ ಕೇಣಿ ಜನತೆಯ ಸರದಿ

| Published : Aug 24 2025, 02:00 AM IST

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸದಾ ಒಂದೊಂದು ಯೋಜನೆ ಜಾರಿಯಾಗುತ್ತಲೇ ಇದೆ.

ವಸಂತಕುಮಾರ್ ಕತಗಾಲ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸದಾ ಒಂದೊಂದು ಯೋಜನೆ ಜಾರಿಯಾಗುತ್ತಲೇ ಇದೆ. ಮಾರಕ ಯೋಜನೆಗಳು ಬಂದಾಗ ಜನತೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟದಲ್ಲಿ ತೊಡಗುವುದು ಅನಿವಾರ್ಯ. ಹೀಗೆ ಜಿಲ್ಲೆಯ ಜನತೆ ಹೋರಾಡಿದ್ದಾರೆ; ಹೋರಾಡುತ್ತಿದ್ದಾರೆ. ಹೋರಾಟ ಜಿಲ್ಲೆಯ ಜನತೆಯ ಪಾಲಿಗೆ ನಿರಂತರವಾಗಿದೆ. ಈಗ ಹೋರಾಟದ ಸರದಿ ಉದ್ದೇಶಿತ ಕೇಣಿ ಬಂದರು ವಿರುದ್ಧ.

ಶರಾವತಿ ಟೇಲರೇಸ್, ಕೈಗಾ ಅಣು ವಿದ್ಯುತ್ ಸ್ಥಾವರ, ಸುಪಾ ಜಲ ವಿದ್ಯುತ್ ಯೋಜನೆ, ಸೀಬರ್ಡ್‌ ನೌಕಾನೆಲೆ, ರನ್ ಆಫ್ ದ ರಿವರ್ ಯೋಜನೆ, ತದಡಿ ಬಾರ್ಜ್‌ ಮೌಂಟೆಡ್ ವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ, ಚತುಷ್ಪಥ ಹೆದ್ದಾರಿ, ಹೊನ್ನಾವರ ಬಂದರು... ಹೀಗೆ ಹತ್ತಾರು ಯೋಜನೆಗಳು ಜಿಲ್ಲೆಗೆ ಬಂದಿವೆ. ಕೆಲವು ಯೋಜನೆಗಳು ಭಾರಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಲ್ಕಿತ್ತಿವೆ.

ಆದರೆ ಜಿಲ್ಲೆಯ ಒಂದಲ್ಲ ಒಂದು ಕಡೆ ಯೋಜನೆಯ ವಿರುದ್ಧ ಹೋರಾಟ ನಡೆಯುತ್ತಲೇ ಇರುವುದು ಸುಳ್ಳಲ್ಲ. ಜನತೆ ಸದಾ ಹೋರಾಟದ ಹಾದಿಯಲ್ಲೇ ಇದ್ದಾರೆ. ಈಗ ಹೊನ್ನಾವರದಲ್ಲಿ ಉದ್ದೇಶಿತ ಬಂದರು ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ಇದರೊಟ್ಟಿಗೆ ಕೇಣಿಯಲ್ಲೂ ಹೋರಾಟ ತೀವ್ರವಾಗಿದೆ.

ಕೇಣಿಯಲ್ಲಿ ₹4 ಸಾವಿರ ಕೋಟಿಗೂ ಹೆಚ್ಚು ವೆಚ್ಚದಲ್ಲಿ ವಾಣಿಜ್ಯ ಬಂದರು ನಿರ್ಮಾಣವಾಗಲಿದೆ ಎಂದು ಘೋಷಣೆಯಾದಾಗಲೇ ಕೇಣಿ, ಭಾವಿಕೇರಿ ಸುತ್ತಮುತ್ತಲಿನ ಊರಿನಲ್ಲಿ ಹೋರಾಟದ ಕಿಚ್ಚು ಹೊತ್ತಿಕೊಂಡಿತ್ತು. ಬಂದರಿನ ಜಾಗದ ಬಗ್ಗೆ ಸಮೀಕ್ಷೆಗೆ ಬಂದಾಗಲೂ ಕೇಣಿಯ ಜನತೆ ಅದರಲ್ಲೂ ಮಹಿಳೆಯರು ಸಮುದ್ರಕ್ಕೆ ಹಾರಿ ಪ್ರತಿಭಟಿಸಿದರು. ಪ್ರತಿಭಟನೆ, ಮನವಿ ನೀಡಿಕೆ... ಹೀಗೆ ವಿವಿಧ ಹಂತಗಳ ಹೋರಾಟ ಆರಂಭಿಸಿದರು.

ಅಂಕೋಲಾದಲ್ಲಿ ಶುಕ್ರವಾರ ನಡೆದ ಕೇಣಿ ವಾಣಿಜ್ಯ ಬಂದರು ಕುರಿತ ಸಾರ್ವಜನಿಕ ಅಹವಾಲು ಸಭೆ ಕೂಡ ಹೋರಾಟದ ಕಿಚ್ಚನ್ನು ತೆರೆದಿಟ್ಟಿತು. ಬಂದರು ಯೋಜನೆ ಪರವಾಗಿ ಬೆರಳೆಣಿಕೆಯಷ್ಟು ಜನರು ಮಾತನಾಡಿದ್ದು ಹೊರತು ಪಡಿಸಿದರೆ ಸಾರ್ವತ್ರಿಕವಾಗಿ ವಿರೋಧ ವ್ಯಕ್ತವಾಯಿತು. ಬಂದರು ಯೋಜನೆ ವಿರುದ್ಧ ಆಕ್ರೋಶದ ಸುರಿಮಳೆಗರೆದರು.

ಅದರಲ್ಲೂ ಕೇಣಿ, ಭಾವಿಕೇರಿ ಸುತ್ತಮುತ್ತಲಿನ ಗ್ರಾಮಸ್ಥರು ಬೃಹತ್ ಸಂಖ್ಯೆಯಲ್ಲಿ ಸೇರಿದ್ದರು. ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ರೈತರು ಹಾಗೂ ಹಾಲಕ್ಕಿ ಒಕ್ಕಲಿಗರು ಮತ್ತಿತರರ ಸಮಾಜದವರು ಭಾಗವಹಿಸಿ ಯೋಜನೆಯನ್ನು ಸಾರಾಸಗಟಾಗಿ ವಿರೋಧಿಸಿದರು.

ಯೋಜನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ನಡುವೆ ಬಂದರು ಸ್ಥಾಪನೆಯಾಗಬೇಕೆಂದು ಜನಪ್ರತಿನಿಧಿಗಳು ಹಾಗೂ ಕೆಲವರು ಪ್ರಯತ್ನಕ್ಕಿಳಿದಿದ್ದಾರೆ. ಮುಂದೇನಾಗಲಿದೆ ಎಂಬ ಕುತೂಹಲ ಈಗ ಉಂಟಾಗಿದೆ.