ಉರಿಬಿಸಿಲಿನ ತಾಪಕ್ಕೆ ತತ್ತರಿಸಿದ ಜನ

| Published : Mar 29 2024, 12:46 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ೩೮ ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗುತ್ತಿರುವುದು ಸಾರ್ವಜನಿಕರನ್ನು ಮತ್ತಷ್ಟು ಕಂಗಾಲಾಗಿಸಿದೆ.

ಸಂತೋಷ ದೈವಜ್ಞ

ಮುಂಡಗೋಡ: ಉರಿಬಿಸಿಲಿನ ತಾಪಮಾನದಿಂದ ಜನರು ತತ್ತರಿಸಿದ್ದಾರೆ. ಹಿಂದೆಂದೂ ಕಾಣದ ತಾಪಮಾನ ದಾಖಲಾಗುತ್ತಿದ್ದು, ಜನರಲ್ಲಿ ದಿಗ್ಭ್ರಾಂತಿ ಮೂಡಿಸಿದೆ.

ದಿನ ಬೆಳಗಾಗಿ ಸೂರ್ಯ ಉದಯಿಸುತ್ತಿದ್ದಂತೆ ಪ್ರಾರಂಭವಾಗುವ ಬಿಸಿಲಿನ ತಾಪಮಾನ ಕ್ಷಣ ಕ್ಷಣಕ್ಕೂ ಹೆಚ್ಚುತ್ತ ಸಾಗುವ ಸೆಖೆಯಿಂದ ಜನರು ನಿಲ್ಲಲಾಗದೆ, ಕುಳಿತುಕೊಳ್ಳಲಾಗದೇ ಪರದಾಡುವಂತಹ ಸ್ಥಿತಿ ಉಂಟಾಗಿದೆ. ಮಧ್ಯಾಹ್ನದ ನಂತರವಂತೂ ಫ್ಯಾನ್‌ಗಳು ಕೂಡ ಬಿಸಿ ಗಾಳಿಯನ್ನು ಸೂಸುತ್ತವೆ. ಅಷ್ಟೊಂದು ಬಿಸಿಲಿನ ತಾಪ ಜೋರಾಗಿದೆ. ಹೊರಗೆ ತಿರುಗಾಡುವವರ ಪಾಡಂತೂ ಹೇಳತೀರದು. ಬೆವರು ಸುರಿಸುತ್ತಲೇ ತಿರುಗಾಡಬೇಕು.

ಹಿಂದೆ ಈ ಭಾಗದಲ್ಲಿ ಬೇಸಿಗೆ ವೇಳೆ ೩೪- ೩೫ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾದರೆ ಆಶ್ಚರ್ಯಪಡಬೇಕಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ೩೮ ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗುತ್ತಿರುವುದು ಸಾರ್ವಜನಿಕರನ್ನು ಮತ್ತಷ್ಟು ಕಂಗಾಲಾಗಿಸಿದೆ.

ವಿಜಯಪುರ, ಬೆಳಗಾವಿ, ಬಾಗಲಕೋಟೆ, ಬೀದರ್‌, ರಾಯಚೂರು, ಬಳ್ಳಾರಿ ಸೇರಿದಂತೆ ಬಯಲುಸೀಮೆ ಪ್ರದೇಶದಲ್ಲಿ ಮಾತ್ರ ಹೆಚ್ಚು ಉಷ್ಣಾಂಶ ಕಾಣಲಾಗುತ್ತಿತ್ತು. ಆದರೆ ಈಗ ಅರ್ಧಕ್ಕೂ ಹೆಚ್ಚು ಪ್ರದೇಶ ಅರಣ್ಯದಿಂದ ಕೂಡಿರುವ ಅರೆಮಲೆನಾಡು ಮುಂಡಗೋಡ ಭಾಗದಲ್ಲಿ ಕೂಡ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ.

ಮಲೆನಾಡು ಕೂಡ ಬಯಲುಸೀಮೆ ಪ್ರದೇಶಕ್ಕೆ ಹೊರತಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ. ಅಂತರ್ಜಲ ಕ್ಷೀಣಿಸುತ್ತ ಸಾಗಿರುವುದರಿಂದ ಭೂಮಿ ಬರಡಾಗುತ್ತಿದೆ. ಬಿಸಿಲಿನ ತಾಪಮಾನಕ್ಕೆ ಅರಣ್ಯ ಪ್ರದೇಶದ ಗಿಡ- ಮರಗಳ ಎಲೆ ಸಂಪೂರ್ಣ ಒಣಗಿ ಉದುರಿ ಬೀಳುತ್ತಿದ್ದು, ಅರಣ್ಯವೆಂಬುವುದು ಭಣಗುಡುತ್ತಿದೆ.

ಪಾನಿಯ ಹಾಗೂ ಹಣ್ಣಿನ ವ್ಯಾಪಾರ ಜೋರು: ತಾಪವನ್ನು ತಡೆಯಲಾಗದ ಜನ ತಂಪು ಪಾನಿಯದ ಮೊರೆ ಹೋಗುತ್ತಿದ್ದಾರೆ. ಬೇಸಿಗೆ ಪ್ರಾರಂಭವಾಗುವ ಮುನ್ನ ಪಟ್ಟಣದಲ್ಲಿ ಕೆಲವೇ ಕೆಲ ಸ್ಥಳಗಳಲ್ಲಿ ಮಾತ್ರ ಎಳನೀರಿನ ವ್ಯಾಪಾರ ನಡೆಯುತ್ತಿತ್ತು. ಆದರೆ ಈಗ ಪಟ್ಟಣದ ಎಲ್ಲ ಪ್ರದೇಶದಲ್ಲಿ ಎಳನೀರು ಕಾಣಸಿಗುತ್ತಿದ್ದು, ಎಳನೀರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ವ್ಯಾಪಾರ ಕೂಡ ಜೋರಾಗಿಯೇ ನಡೆಯುತ್ತಿದೆ. ಜತೆಗೆ ಕಲ್ಲಂಗಡಿ, ಕರಬೂಜ ಸೇರಿದಂತೆ ಮುಂತಾದ ಹಣ್ಣಿನ ವ್ಯಾಪಾರದ ಭರಾಟೆ ಜೋರಾಗಿದೆ.

ಜೀವಜಲದ ಕೊರತೆ: ಭೂಮಿಯಲ್ಲಿನ ಅಂತರ್ಜಲ ಮಟ್ಟ ಕುಗ್ಗಿರುವುದರಿಂದ ಕುಡಿಯುವ ನೀರಿನ ಅಭಾವ ಎದುರಾಗಿದೆ. ತಾಲೂಕಿನ ಕೆಲ ಪ್ರದೇಶಗಳಲ್ಲಿ ಬೋರ್‌ವೆಲ್ ನೀರು ಕಡಿಮೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಕೆಲವೆಡೆ ಸ್ಥಳೀಯ ಸಂಸ್ಥೆಗಳು ಬೇರೆ ಬೇರೆ ಕಡೆಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಕುಡಿಯುವ ನೀರಿನ ವ್ಯವಸ್ಥೆ: ಬಿಸಿಲಿನ ಬೇಗೆಯಿಂದ ಗಿಡ- ಮರಗಳೆಲ್ಲ ಒಣಗಿದ್ದು, ಸಣ್ಣಪುಟ್ಟ ಕೆರೆ- ಕಟ್ಟೆಗಳು ಕೂಡ ಬತ್ತಿರುವುದರಿಂದ ಕುಡಿಯಲು ನೀರು ಸಿಗದೇ ನೀರು ಆಯ್ದು ಕಾಡುಪ್ರಾಣಿಗಳು ನಾಡಿಗೆ ಬಂದು ಜೀವ ಬಿಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ಅರಣ್ಯ ಇಲಾಖೆಯವರು ಅಲ್ಲಲ್ಲಿ ನೀರಿನ ತೊಟ್ಟಿಗಳನ್ನಿಟ್ಟು ಅದರಲ್ಲಿ ನೀರು ತುಂಬಿಸಿ ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ಅನುಕೂಲ ಮಾಡಿ ಕೊಡುವಲ್ಲಿ ನಿರತರಾಗಿದ್ದಾರೆ.