ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಭಾಗದಲ್ಲಿ ಭಾರೀ ಮಳೆ ಸುರಿದಿದ್ದರಿಂದ ಫಲ್ಗುಣಿ ನದಿ ಪ್ರವಾಹ ಉಕ್ಕೇರಿ ಬೆಳ್ತಂಗಡಿ, ಬಂಟ್ವಾಳ, ಮಂಗಳೂರಿನ ನದಿ ಪಾತ್ರದ ಪ್ರದೇಶಗಳು ಜಲಾವೃತಗೊಂಡು ಮನೆ, ಅಂಗಡಿಗಳು, ದೇವಾಲಯ, ಮಠ, ಮದುವೆ ಹಾಲ್‌ಗಳಿಗೆ ನೀರು ನುಗ್ಗಿ ಈ ಭಾಗದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗುರುಪುರ ಪ್ರದೇಶವಂತೂ ಪ್ರವಾಹದಿಂದ ಅಕ್ಷರಶಃ ನಲುಗಿಹೋಗಿದೆ.ಎರಡು ದಿನಗಳ ಹಿಂದೆ ನೇತ್ರಾವತಿ ನದಿ ಪ್ರವಾಹದ ಅಬ್ಬರ ಇದ್ದರೆ, ಗುರುವಾರ ಫಲ್ಗುಣಿ ನದಿ ತನ್ನ ಪ್ರತಾಪ ತೋರಿತ್ತು. ಅದೃಷ್ಟವಶಾತ್ ನೇತ್ರಾವತಿ ನದಿ ಅಪಾಯದ ಮಟ್ಟದಿಂದ ಕೆಳಗೆ ಹರಿಯುತ್ತಿತ್ತು.ತತ್ತರಿಸಿದ ಗುರಪುರ, ಪಡುಶೆಡ್ಡೆ:
ಬೆಳ್ತಂಗಡಿ ಭಾಗದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಮುಂಜಾನೆಯಿಂದಲೇ ಗುರುಪುರ ನದಿ ಪ್ರವಾಹರೂಪಿಯಾಗಿತ್ತು. ಪ್ರವಾಹ ಮಟ್ಟ ಏರುತ್ತಲೇ ಹೋಗಿ ಗುರುಪುರ ಆಸುಪಾಸಿನ ಪ್ರದೇಶಗಳ ಜನರು ಅಕ್ಷರಶಃ ನಲುಗಿಹೋಗಿದ್ದರು. ನದಿ ಇಕ್ಕೆಲಗಳ ನೂರಾರು ಎಕರೆ ಪ್ರದೇಶ ಪ್ರವಾಹದಿಂದ ಜಲಾವೃತಗೊಂಡಿದ್ದು, ಹಲವು ಮನೆಗಳಿಗೆ ನೀರು ನುಗ್ಗಿತ್ತು. ಪಡುಶೆಡ್ಡೆ ಎಂಬಲ್ಲಿ 20ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದರಿಂದ ಜನರನ್ನು ದೋಣಿ ಮತ್ತಿತರ ವ್ಯವಸ್ಥೆಯ ಮೂಲಕ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು. ದಿನವಿಡಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಜನರ ರಕ್ಷಣೆಯಲ್ಲಿ ತೊಡಗಿತ್ತು.ಮಠ, ದೇವಾಲಯ ಜಲಾವೃತ:ಗುರುಪುರದ ವಜ್ರದೇಹಿ ಮಠದ ಆವರಣಕ್ಕೆ ಭಾರೀ ನೀರು ನುಗ್ಗಿದ್ದು, ಗೋಶಾಲೆಯಲ್ಲಿದ್ದ ಗೋವುಗಳನ್ನು ಎತ್ತರದ ಪ್ರದೇಶಕ್ಕೆ ಕೊಂಡೊಯ್ದು ರಕ್ಷಿಸಲಾಯಿತು. ಇಲ್ಲಿನ ಮದುವೆ ಹಾಲ್ ಸೇರಿದಂತೆ ಮನೆಗಳು ಕೂಡ ಜಲಾವೃತಗೊಂಡಿದ್ದವು. ಮನೆ ಮಂದಿ ತಮ್ಮ ಅಮೂಲ್ಯ ವಸ್ತುಗಳನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟರು. ವಾಮಂಜೂರಿನ ಶ್ರೀ ಅಮೃತೇಶ್ವರ ದೇವಾಲಯ ಸಂಪೂರ್ಣ ಜಲಾವೃತಗೊಂಡಿದ್ದು, ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರವಾಹ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.ಉಳಾಯಿಬೆಟ್ಟು ರಸ್ತೆ ಬಂದ್!:
ಇಷ್ಟಕ್ಕೇ ನಿಲ್ಲದ ಫಲ್ಗುಣಿ ಉಗ್ರರೂಪ, ಉಳಾಯಿಬೆಟ್ಟು ಸೇರಿದಂತೆ ನಾಲ್ಕೈದು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಿತ್ತು. ಈ ರಸ್ತೆ ಮೇಲೆ ನಾಲ್ಕೈದು ಅಡಿಗೂ ಎತ್ತರಕ್ಕೆ ಜಲಪ್ರವಾಹ ಹರಿದು ಸಂಜೆವರೆಗೂ ಈ ಗ್ರಾಮಗಳ ಸಂಪರ್ಕ ಕಡಿತಗೊಂಡಿತ್ತು. ರಸ್ತೆಯಲ್ಲಿ ಸಂಚರಿಸದಂತೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಪೊಳಲಿ ಭಾಗದಲ್ಲೂ ಪ್ರವಾಹದಿಂದ ಹಲವು ಮನೆಗಳಿಗೆ ಹಾನಿ ಉಂಟಾಗಿದೆ.ದ್ವೀಪವಾದ ಅಮ್ಮುಂಜೆ ಗ್ರಾಮ:
ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಬಹುತೇಕ ಜಲಾವೃತಗೊಂಡು ದ್ವೀಪದಂತಾಗಿತ್ತು. ಅಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಅವರನ್ನು ಸ್ಥಳಾಂತರಿಸಲಾಗಿದೆ. ಅಲ್ಲಿನ ದೇವಾಲಯಕ್ಕೂ ಪ್ರವಾಹ ನೀರು ಹರಿದಿತ್ತು. ಈ ಗ್ರಾಮಕ್ಕೆ ತೆರಳುವ ರಸ್ತೆ ಮೇಲೂ ಪ್ರವಾಹ ನೀರು ಹರಿದು ಸಂಪರ್ಕ ಕಡಿತಗೊಂಡಿತ್ತು.ಬೆಳ್ತಂಗಡಿ- ಮೂಡುಬಿದಿರೆ ರಾಜ್ಯ ಹೆದ್ದಾರಿ ನಡುವೆ 15ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಪೊಲೀಸರು ಹಾಗೂ ಸ್ಥಳೀಯ ಯುವಕರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಜಾನುವಾರುಗಳನ್ನು ಕೂಡ ರಕ್ಷಿಸಲಾಗಿದೆ. ನದಿ ಪ್ರವಾಹದಿಂದ ಜಿಲ್ಲೆಯ ನೂರಾರು ಎಕರೆ ಕೃಷಿ ಭೂಮಿ, ತೋಟಗಳಿಗೆ ತೀವ್ರ ಹಾನಿ ಸಂಭವಿಸಿದೆ.ಮನೆ ಕುಸಿದು ಮಹಿಳೆ ಸಾವು:
ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮೂಡುಬಿದಿರೆಯ ನೆಲ್ಲಿಕಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋರುಗುಡ್ಡೆ ಜನತಾ ಕಾಲೋನಿಯಲ್ಲಿ ಮನೆ ಕುಸಿದು 66 ವರ್ಷದ ಮಹಿಳೆ ಗೋಪಿ ಎಂಬವರು ಸಾವನ್ನಪ್ಪಿದ್ದಾರೆ. ಕುಟುಂಬದ ಇತರ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರೊಂದಿಗೆ ಏ.1ರಿಂದ ಇದುವರೆಗೆ ದಕ್ಷಿಣ ಕನ್ನಡದಲ್ಲಿ ಮಳೆಯಿಂದಾಗಿ 11 ಮಾನವ ಜೀವಗಳು ಸಾವಿಗೀಡಾದಂತಾಗಿದೆ.ಪವಾಡ ಸದೃಶ ಪಾರು:ಮಂಗಳೂರು ಹೊರವಲಯದ ಬಜಾಲ್‌ನ ಫೈಸಲ್ ನಗರದಲ್ಲಿ ಗುರುವಾರ ಮನೆಯೊಂದು ಕುಸಿದು ಬಿದ್ದಿದ್ದು, ಮಹಿಳೆ ಮತ್ತು ಆಕೆಯ ಮೊಮ್ಮಗಳು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ.
ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಲಿಂಗಪ್ಪಯ್ಯನಕಾಡಿನ ಬಿಜಾಪುರ ಕಾಲೋನಿಯಲ್ಲಿ ಮನೆ ಕುಸಿದಿದ್ದು, ಆರು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಏಳಿಂಜೆಯಲ್ಲಿ ಶಾಂಭವಿ ನದಿ ಉಕ್ಕಿ ಹರಿದು ಉಗ್ಗೆದಬೆಟ್ಟು, ಪಟ್ಟೆ-ಏಳಿಂಜೆ ಸಂಪರ್ಕ ಕಡಿತಗೊಂಡಿತ್ತು.ಬೆಳ್ತಂಗಡಿಯ ಮರೋಡಿ, ಸೋಣಂದೂರು, ದೇರಾಜೆಬೆಟ್ಟದಲ್ಲಿ ಚಿಕ್ಕ ಸೇತುವೆ ಕುಸಿದಿದೆ. ವೇಣೂರಿನ ಚರ್ಚ್ ರಸ್ತೆ ಜಲಾವೃತವಾಗಿತ್ತು. ಅಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಬಸ್‌ಗಳ ಸಂಚಾರಕ್ಕೆ ವೇಣೂರು ಪೊಲೀಸರು ನೆರವಾದರು.
ಅದ್ಯಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 25 ಮನೆಗಳು ಜಖಂಗೊಂಡಿವೆ. ಆ ಕುಟುಂಬಗಳು, 15 ಜಾನುವಾರುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ.ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ಶಿರ್ತಾಡಿಯಲ್ಲಿ ಅತಿ ಹೆಚ್ಚು 269 ಮಿ.ಮೀ. ಮಳೆಯಾಗಿದ್ದು, ಮರೋಡಿ- 264 ಮಿ.ಮೀ, ಬಳಂಜ- 250 ಮಿ.ಮೀ, ಮೇಲಂತಬೆಟ್ಟು- 205 ಮಿ.ಮೀ, ಬೆಳುವಾಯಿ- 202 ಮಿ.ಮೀ, ಲೈಲಾ- 195.5 ಮಿ.ಮೀ ಮಳೆಯಾಗಿದೆ.ಇಂದೂ ಭಾರಿ ಮಳೆ ಸಾಧ್ಯತೆ:
ಹವಾಮಾನ ಇಲಾಖೆಯು ದ.ಕ.ಕ್ಕೆ ಶುಕ್ರವಾರವೂ ರೆಡ್ ಅಲರ್ಟ್ ನೀಡಿದೆ. 30-40 ಕಿಮೀ ವೇಗದಲ್ಲಿ ಭಾರೀ ಗಾಳಿ ಜತೆಗೆ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ನೀಡಿದೆ.ದ.ಕ.: ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 2ರಂದು ಶುಕ್ರವಾರ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಎಲ್ಲ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ- ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.