ಸಾರಾಂಶ
ಜಿಲ್ಲಾ ಕಸಾಪ ಮತ್ತು ಕಾಳಿಕಾಂಬಾ ದೇವಾಲಯ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಪ್ರಪ್ರಥಮ ತತ್ವಪದಗಾರರ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಅಜ್ಜಂಪುರ18ನೇ ಶತಮಾನದಲ್ಲಿ ಮಹಾರಾಜರ ಆಡಳಿತ ಅಂತ್ಯಗೊಂಡಾಗ ಸಮಸಮಾಜ ನಿರ್ಮಾಣದ ಕಲ್ಪನೆಗೆ ಅದಕ್ಕೆ ಬುನಾದಿ ಹಾಕಿದವರೇ ಈ ತತ್ವಪದಕಾರರು ಎಂದು ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಅಪ್ಪಗೆರೆ ತಿಮ್ಮರಾಜು ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಳಿಕಾಂಬಾ ದೇವಾಲಯ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಪ್ರಥಮ ತತ್ವಪದಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದ ಬಸವಣ್ಣ ಮತ್ತು ಶರಣರ ಕಲ್ಪನೆಯನ್ನು ನಂತರ ತತ್ವಪದಕಾರರು ಜಾರಿಗೆ ತಂದರು.ಈ ತತ್ವಪದ ಸಮ್ಮೇಳನ ಇತರೆ ಹಳ್ಳಿಗಳಿಗೆ ಮಾದರಿಯಾಗಿದೆ. ಮನುಷ್ಯನಿಗೆ ತತ್ವಪದಗಳ ಭಜನೆಯಿಂದ ಶಾಂತಿ ದೊರೆಯುತ್ತದೆ. ಸಮ್ಮೇಳನ ಅಧ್ಯಕ್ಷ ಯಾವ ಡಿಗ್ರಿಯನ್ನು ಪಡೆದಿಲ್ಲ. ಆದರೆ ತತ್ವಪದಗಳಿಂದ ಸಮ್ಮೇಳನ ಅಧ್ಯಕ್ಷರ ಪದವಿ ದೊರೆತಿದೆ. ಆಧುನಿಕ ಸಮಾಜದಲ್ಲಿ ಈ ಪರಂಪರೆ ನಶಿಸಿ ಹೋಗುತ್ತಿದೆ.
ಸಮಾಜದ ಋಣ ತೀರಿಸಬೇಕು ಕಲಿತ ಋಣವ ತೀರಿಸಬೇಕು ಎಂಬಂತೆ ಈ ಜಾಗದಲ್ಲಿ ಶ್ರೀ ಗುರು ಗೋವಿಂದಾರ್ಯರ ಪ್ರಭಾವ ಬಹಳಷ್ಟಿದೆ. ತತ್ವ ಪದಗಳಲ್ಲಿ ನೀತಿ ಅಡಕವಾಗಿದೆ. ಸಾಧು ಸಂತರು ತತ್ವಪದಕಾರರು ಯಾವುದೇ ವ್ಯಾಮೋಹ ವಿಲ್ಲದೆ ಹಾಡಿ ಕುಣಿದು ಕುಪ್ಪಳಿಸಿದವರು. ಆತ್ಮ ಸ್ಥೈರ್ಯ, ಆತ್ಮವಿಶ್ವಾಸ ಇದರಿಂದ ವೃದ್ಧಿಯಾಗುತ್ತದೆ. ಇಡೀ ಕರ್ನಾಟಕದಲ್ಲಿ ಮೊದಲು ಈ ತತ್ವ ಪದ ಸಮ್ಮೇಳನ ಇಲ್ಲಿ ನಡೆಯುತ್ತಿದ್ದು ಬೇರೆ ಊರುಗಳಿಗೆ ಇದು ಮಾದರಿ ಎಂದರು.ಹುಟ್ಟಿದ್ದೇ ತಪ್ಪಾಯ್ತು ಎಲೆ ಜೀವವೇ.
ಮಾತು ಬಂದದ್ದು ತಪ್ಪಾಯಿತೆ ಎಲೆ ಜೀವವೇ.ದೇಹ ದೊಡ್ಡದಾಗಿ ತಪ್ಪಾಯ್ತು ಎಲೆ ಜೀವವೇ.
ಈ ಜನ್ಮ ಬಲು ಶ್ರೇಷ್ಠ ಎಲೆ ಜೀವವೇ..ಈ ತತ್ವಪದವನ್ನು ವಿವರಿಸಿ ಇಂತಹ ಗೀತೆಯನ್ನು ಗೋವಿಂದಯ್ಯ ಹೇಳುತ್ತಿದ್ದರು. ಇದು ಬದುಕಿನ ಒಳಾರ್ಥವನ್ನು ಎತ್ತಿ ಹಿಡಿಯುತ್ತದೆ. ತತ್ವಪದವನ್ನು ಕೆಳವರ್ಗದ ಜನರು ಹೇಳುತ್ತಿದ್ದರಿಂದ ಅದನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ಅದನ್ನು ಮೇಲೆತ್ತುವ ಕಾಯಕ ಆಗಬೇಕು. ಜನಪದ ಜನರಿಂದ ಬಂದರೆ, ತತ್ವಪದಗಳು ಅನುಭವದಿಂದ ಬಂದಿರುತ್ತವೆ. ಅದಕ್ಕೆ ಜ್ಞಾನಿಯನ್ನು ಗಂಧದ ಮರಕ್ಕೂ ಅಜ್ಞಾನಿಯನ್ನು ಜಾಲಿ ಮರಕ್ಕೂ ಹೋಲಿಸುತ್ತಾರೆ ಎಂದರು.
ಸತ್ಯದ ಮಾರ್ಗದಲ್ಲಿ ಜೀವನ ಸಾಗಿಸಿದ ತತ್ವಪದಕಾರರಿಗೆ ಸುಳ್ಳು ತಿಳಿದಿಲ್ಲ. ಗೋವಿಂದಪ್ಪನವರ ಗೀತೆ ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಉತ್ತಮ ತತ್ವಪದ ಮೊದಲಿಗೆ ಹೇಳಿದವರು ಗೋವಿಂದಾಚಾರ್ಯರು. ತತ್ವಪದ ಜೀವನದ ಮೌಲ್ಯ ಸಾರಿವೆ. ಅನುಭವದಿಂದ ಬಂದಂತ ಇವುಗಳು ಈಗ ಅಳಿವಿನಂಚಿನಲ್ಲಿವೆ. ತತ್ವಪದದ ತರಬೇತಿ ಮತ್ತು ಕಾರ್ಯಾಗಾರ ಯುವ ಸಮುದಾಯಕ್ಕೆ ಅವಶ್ಯಕತೆ ಇದೆ.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ತತ್ವಪದ ಬಯಲು ಸೀಮೆಗಳಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತಿದ್ದು ಈ ನೆಲದ ಸೊಗಡು ಇದರಿಂದ ಹೆಚ್ಚುತ್ತಿದೆ. ಭಜನೆಗಳ ರೂಪಾಂತರವೇ ತತ್ವಪದ. ಜೀವನ ತಿದ್ದುವ ಯೋಜನೆ ಈ ತತ್ವಪದಕ್ಕಿದೆ. ಶ್ರೀ ಗುರು ಗೋವಿಂದಾರ್ಯರ ಮಠ ಈ ಸ್ಥಳದ ವಿಶೇಷ. ಈ ಪರಂಪರೆ ಮುಂದುವರಿಸಿಕೊಂಡು ಹೋಗುವ ಕಾಯಕ ನಮ್ಮದಾಗಬೇಕು. ಆಧ್ಯಾತ್ಮದ ಚಿಂತನೆ ಇಲ್ಲಿ ಹಾಸು ಹೊಕ್ಕಾಗಿದೆ ಎಂದರು.
ತರೀಕೆರೆ ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿಗೆ ಗಡಿಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ತತ್ವಪದ ಕಾರರ ಪ್ರತಿಭೆ ಗುರುತಿಸಿ ಅದನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಸಾಪ ಮಾಡುತ್ತಿದೆ. ತತ್ವಪದಗಾರರಿಗೆ ಸೂಕ್ತ ವೇದಿಕೆ ಒದಗಿಸಿ ಕೊಟ್ಟಿದ್ದು ಇಂತಹ ಕೆಲಸಗಳು ಎಲ್ಲಾ ಗ್ರಾಮಗಳಲ್ಲೂ ನಡೆಯಬೇಕು. ಈ ಭಾಗದಲ್ಲಿ ಸಾಕಷ್ಟು ಜನ ಶ್ರಮಿಕರಿದ್ದು ಆ ವರ್ಗದ ಜನರ ಅನುಭವದ ಮೂಸೆ ಯಿಂದ ಮೂಡಿಬಂದ ತತ್ವಪದಗಳು ಜನಮಾನಸದಲ್ಲಿ ಉಳಿದಿವೆ. ಗುರು ಗೋವಿಂದಾಚಾರ್ಯರ ಪ್ರಭಾವ ಸಾಕಷ್ಟು ಜನರ ಮೇಲಿದೆ. ಆ ಗುರು ಪರಂಪರೆಯನ್ನೇ ಇಂದಿಗೂ ಈ ಜನರು ಅನುಸರಿಸುತ್ತಿದ್ದಾರೆ. ಅವರನ್ನು ಗುರುತಿಸುವ ಕೆಲಸ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.ಹನುಮಕ್ಕನವರು ತತ್ವಪದಗಳ ನುಡಿಗಟ್ಟುಗಳನ್ನೇ ದಿನಗಟ್ಟಲೆ ಹೇಳುವ ಸಾಮರ್ಥ್ಯ ಹೊಂದಿದ್ದಾರೆ. ಅವರ ನಂತರದ ತಲೆಮಾರಿನವರು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾಯಕ ಆಗಬೇಕು. ಈ ಪರಂಪರೆ ಮುಂದಿನ ಪೀಳಿಗೆಗೆ ತುಂಬಾ ಅತ್ಯಗತ್ಯ ಎಂದರು.
ಕಡೂರು ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಬಿ.ಪ್ರಕಾಶ್ ಇತರರು ಇದ್ದರು.