ಅವರ ಟೀಕೆಗಳಿಗೆ ಈಗ ಕಾರ್ಯಗತಗೊಳ್ಳುತ್ತಿರುವ ಈ ಯೋಜನೆಯೇ ಉತ್ತರವಾಗಿದೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾದಾಗ, ನನ್ನ ರಾಜಕೀಯ ಮಿತ್ರರು ಇಡೀ ತಾಲೂಕಿಗೆ ಕುಡಿಯುವ ನೀರು ಪೂರೈಕೆ ಸಾಧ್ಯವೇ ಎಂದು ಟೀಕೆ ಮಾಡಿದರಲ್ಲದೇ, ಇದೊಂದು ಚುನಾವಣಾ ಸ್ಟಂಟ್ ಎಂದು ಹೀಯಾಳಿಸಿದ್ದರು. ಅವರ ಟೀಕೆಗಳಿಗೆ ಈಗ ಕಾರ್ಯಗತಗೊಳ್ಳುತ್ತಿರುವ ಈ ಯೋಜನೆಯೇ ಉತ್ತರವಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿರಗೇಟು ನೀಡಿದ್ದಾರೆ.

ಭಾನುವಾರ ಪಟ್ಟಣದ ತಮ್ಮ ನಿವಾಸದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನ ಗ್ರಾಮಾಂತರ ಭಾಗದ ಜನರು ನಿರೀಕ್ಷಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಫೆಬ್ರವರಿ 16ರಂದು ಛತ್ರನಾಳ ಗ್ರಾಮದಲ್ಲಿ ಲೋಕಾರ್ಪಣೆಯಾಗಲಿದೆ ಎಂದರು. ತಾಲೂಕಿನೆಲ್ಲೆಡೆ ಬಹುಗ್ರಾಮ ಯೋಜನೆಯನ್ನು ಹಂತ ಹಂತವಾಗಿ ಆರಂಭಿಸಲಾಗುತ್ತಿದ್ದು, ಇಡೀ ತಾಲೂಕಿನ ಗ್ರಾಮಾಂತರ ಭಾಗಗಳಿಗೆ ನೀರು ಪೂರೈಕೆ ಆರಂಭವಾದ ನಂತರ ಬಹುದೊಡ್ಡ ಪ್ರಮಾಣದಲ್ಲಿ ಯೋಜನೆಯ ಉದ್ಘಾಟನೆ ನೆರವೇರಿಸಲಾಗುವುದು ಎಂದರು.

₹116 ಕೋಟಿ ಯೋಜನೆ:

ಅಂದಾಜು ₹116 ಕೋಟಿ ಮೊತ್ತದ ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ತಾಲೂಕಿನ 113 ಗ್ರಾಮಗಳಿಗೆ ಕಾಳಿನದಿಯಿಂದ ಕುಡಿಯುವ ನೀರನ್ನು ಪೂರೈಸಲಾಗುವುದು. ಈ ಯೋಜನೆಯಡಿಯಲ್ಲಿ ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಯಡೋಗಾ ಗ್ರಾಮದ ಬಳಿ ಆಧುನಿಕ ತಂತ್ರಜ್ಞಾನವುಳ್ಳ ಹೈಟೆಕ್ ಮಾದರಿಯ ಸಂಸ್ಕರಣಾ ಘಟಕ ಪ್ರಾರಂಭಿಸಲಾಗಿದೆ ಎಂದರು.ಒಳಚರಂಡಿ ಯೋಜನೆ:

ಪಟ್ಟಣದ ಒಳಚರಂಡಿ ಯೋಜನೆಯು ನಾಲ್ಕೈದು ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ಯೋಜನೆಯ ನಿರ್ವಹಣೆಗಾಗಿ 5 ವರ್ಷಗಳ ಅವಧಿಗಾಗಿ ಅನುದಾನ ಮಂಜೂರು ಮಾಡಬೇಕೆಂಬ ನಮ್ಮ ಪ್ರಸ್ತಾವನೆಗೆ ರಾಜ್ಯ ಕ್ಯಾಬಿನೆಟ್ ಮಂಜೂರಾತಿ ನೀಡಿ, ₹10.60 ಕೋಟಿ ಅನುದಾನ ನೀಡಿದೆ. ಅದಕ್ಕಾಗಿ ಈ ಯೋಜನೆಯ ಮೇಲ್ವಿಚಾರಣೆ ನಿರ್ವಹಣೆಗಾಗಿ ಕಂಪನಿಗಳನ್ನು ಆಯ್ಕೆ ಮಾಡಲು ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಟೋಯೋಟಾ ಪ್ರಯೋಗಾಲಯ:

ಶೈಕ್ಷಣಿಕ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಪಟ್ಟಣದ ಸರ್ಕಾರಿ ಶಿವಾಜಿ ಪದವಿ ಪೂರ್ವ ಕಾಲೇಜಿಗೆ ಬೆಂಗಳೂರಿನ ಟೋಯೋಟಾ ಉದ್ಯಮದಿಂದ ಆಟೋಮೊಬೈಲ್ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದೆಂದರು. ಹಳಿಯಾಳ ಕ್ಷೇತ್ರದಲ್ಲಿ 11 ಶಾಲಾ ತರಗತಿ ಕೊಠಡಿಗಳ ನಿರ್ಮಾಣಕ್ಕಾಗಿ ₹1.88 ಕೋಟಿ ಮಂಜೂರಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಯುವಮುಖಂಡ ರವಿ ತೋರಣಗಟ್ಟಿ, ವಿ.ಆರ್.ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.ರಸ್ತೆ, ಸೇತುವೆ ಅಭಿವೃದ್ಧಿಗಾಗಿ ₹6 ಕೋಟಿ ಅನುದಾನಹಳಿಯಾಳ ಮತ್ತು ಜೋಯಿಡಾ ತಾಲೂಕಿನಲ್ಲಿ ರಸ್ತೆ ಹಾಗೂ ಸೇತುವೆಗಳ ಅಭಿವೃದ್ಧಿಗಾಗಿ ₹6ಕೋಟಿ ಅನುದಾನ ಮಂಜೂರಾಗಿದ್ದು, ಅತೀ ಶೀಘ್ರದಲ್ಲಿ ಯೋಜನೆಗೆ ಚಾಲನೆ ನೀಡುವ ಕಾರ್ಯ ಆರಂಭಿಸಲಾಗುವುದು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಜೋಯಿಡಾ ತಾಲೂಕಿನಲ್ಲಿ ಕಾಲಸುಂಕಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಬಡಾಕಾನಶಿರಡಾ, ಹರ್ನೋಡಾ, ನಾರನಳ್ಳಿ, ಪಾಲ್ಡಾ, ಸಿಸ್ಸಾಯಿ ಹಾಗೂ ಸಕಲಿಮಾಳ ಗ್ರಾಮಗಳಲ್ಲಿ ಕಾಲಸುಂಕ ನಿರ್ಮಾಣಕ್ಕಾಗಿ 1 ಕೋಟಿ ಮಂಜೂರಾಗಿದೆ. ಜೋಯಿಡಾ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ₹1.50ಕೋಟಿ ಅನುದಾನವು ಮಂಜೂರಾಗಿದೆ, ಇನ್ನೂ ದಾಂಡೇಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಗಾಗಿ ₹1.50ಕೋಟಿ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.