ರಂಗಗ್ರಾಮ ಖ್ಯಾತಿಯ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಗಜಾನನ ಯುವಕ ಮಂಡಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಯತೀಶ ಕೊಳ್ಳೇಗಾಲ ಅವರ ನಿರ್ದೇಶನದಲ್ಲಿ ಮೂವರು ಕಲಾವಿದರಿಂದ ಒಂದು ಗಂಟೆ ಹದಿನೈದು ನಿಮಿಷ ಜಂಗಮ ಬದುಕು ನಾಟಕ ಪ್ರದರ್ಶನ ಜನರ ಮೆಚ್ಚುಗೆ ಗಳಿಸಿತು.

ಯತೀಶ ಕೊಳ್ಳೇಗಾಲ ನಿರ್ದೇಶನದಲ್ಲಿ ಕೇವಲ ಮೂವರು ಕಲಾವಿದರಿಂದ ಪ್ರದರ್ಶನ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಇರದಿರುವುದರ ಹುಡುಕಾಟದಲ್ಲಿ ಇರುವ ಕೌಟುಂಬಿಕ ಸೌಖ್ಯದ ತಿರಸ್ಕಾರ, ಅನಗತ್ಯ ಆಕರ್ಷಣೆಗಳಿಗೆ ಸೋತು ಬದುಕನ್ನೇ ಸೋಲಿಸುವ, ಸ್ವತಂತ್ರವಾಗಿರಬೇಕೆಂಬ ತುಮುಲದಲ್ಲಿ ಇರುವುದನ್ನು ಕಳೆದುಕೊಂಡು ಪರಿತಪಿಸುವ ದುರ್ಬಲ ಮನಸುಗಳ ತೊಳಲಾಟವನ್ನು ಅಭಿವ್ಯಕ್ತಿಸಿದ "ಜಂಗಮ ಬದುಕು " ನಾಟಕ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿ ಕೌಟುಂಬಿಕ ಸತ್ಯಗಳಿಗೆ ಸಾಕ್ಷಿಯಾಯಿತು.

ರಂಗಗ್ರಾಮ ಖ್ಯಾತಿಯ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಗಜಾನನ ಯುವಕ ಮಂಡಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಯತೀಶ ಕೊಳ್ಳೇಗಾಲ ಅವರ ನಿರ್ದೇಶನದಲ್ಲಿ ಮೂವರು ಕಲಾವಿದರಿಂದ ಒಂದು ಗಂಟೆ ಹದಿನೈದು ನಿಮಿಷ ಇಡೀ ಪ್ರೇಕ್ಷಕರನ್ನು ಮಿಸುಕಾಡದಂತೆ ಹಿಡಿದಿಟ್ಟುಕೊಂಡ ಅಭಿನಯ, ನಾಟಕದ ಸಂದೇಶಗಳು ಮನುಷ್ಯನ ತುಡಿತಗಳು, ಹಲವು ಹುಡುಕಾಟದ ನಡುವಿನ ಗೊಂದಲಗಳನ್ನು ತೆರೆದಿಟ್ಟಿತು. ಇಂದಿನ ನಾಗರಿಕ ಬದುಕಿನಲ್ಲಿ ಕಾಲ ಘಟ್ಟದಲ್ಲಿ ಗಂಡು ಹೆಣ್ಣು, ಗಂಡ ಹೆಂಡತಿ ಸಂಬಂಧಗಳೇ ಹಳಸುತ್ತಿರುವುದು, ಬಂಧುತ್ವ ವ್ಯವಹಾರವಾಗುತ್ತಿರುವುದು, ಇರದಿರುವುದಕ್ಕೆ ಹಾತೊರೆಯುವ, ಸಿಗಲಾರದ ಕಾಮನೆಗಳನ್ನು ಹುಡುಕಿ ಕಾಲವನ್ನೇ ಹೊಸಕಿ ಹಾಕುವ ಸಂದರ್ಭಗಳು ಮನುಷ್ಯ ಮುಟ್ಟುವುದೆಲ್ಲಿಗೆ ಎಂಬ ಸತ್ಯಗಳಿಗೆ ನಿಜ ಸಾಕ್ಷಿಯಾಯಿತು.

ಗಂಡಸಾದವ ಸ್ಟ್ರಾಂಗ್ ಆಗಿರಬೇಕು. ಆಧುನಿಕ ಬದುಕಿನ ಓಟಕ್ಕೆ ವೈವಾಹಿಕ ಬದುಕು ಛಿದ್ರವಾಗಬಾರದು. ಇಲ್ಲೆ ಎಲ್ಲ ಇದೆ, ಅದನ್ನು ಕಂಡು ಅನುಭವಿಸುವುದು ಬೇಕು. ಮದುವೆ ಅದರ ಮುದ, ಇನ್ನೊಂದೆಡೆ ಇದರ ಒಳಸುಳಿಗಳು, ಅವರವರ ಬದುಕಿಗೆ ಅವರೇ ಶ್ರೀಮಂತರು, ನಿಮ್ಮ ಸಮಸ್ಯೆ ನೀವೇ ಪರಿಹರಿಸಿಕೊಳ್ಳಿ, ಬದುಕು ವೈವಿಧ್ಯವಾದುದು. ಇದು ಗೊಂದಲವಾಗುವ ಬದಲು ಗೌರವ ತರುವಂತಿರಲಿ, ದಾಂಪತ್ಯದ ತುಮುಲಗಳು ಹೊಯ್ದಾಟವಾಗಿ, ತಪ್ಪು ಒಪ್ಪಿನ ಅರಿವಿಲ್ಲದೆ, ಜೀವನೋನ್ಮಾದದಲ್ಲಿ ಅನೈತಿಕತೆಕ ಬದುಕು ಬರಸಿಡಿಲಿಗೆ ಸಿಗುವುದು ಬೇಡ ಎಂಬ ಸತ್ಯ ಸಂದೇಶಗಳನ್ನು ಸಾರಿದ ಕೌಟುಂಬಿಕ ಸಾಮರಸ್ಯದ ಸಿದ್ಧ ಕಾವ್ಯವಾಗಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಪ್ರಸನ್ನ ಅವರು ರಚಿಸಿದ, ಯತೀಶ ಕೊಳ್ಳೇಗಾಲ ಅವರು ನಿರ್ದೇಶಿಸಿದ ರಂಗ ಪ್ರಯೋಗದಲ್ಲಿ ಸರಸ್ವತಿ (ಪಿರಿಯಾಪಟ್ಟಣ), ಗದೆಗೆಪ್ಪ ಭಾವಿ (ಶಿಗ್ಗಾವಿ), ಮದನ್‌ದಾಸ್ (ಆನೇಕಲ್) ಈ ಮೂವರು ಕಲಾವಿದರ ಅಭಿಯನದ ೧.೧೫ ಗಂಟೆ ಸಮಯದ ಜಂಗಮ ಬದುಕು ನಾಟಕ ಯಾವುದೇ ಸಂಗೀತವಿಲ್ಲದೆ ಅದ್ಭುತವಾಗಿ ಪ್ರದರ್ಶನಗೊಂಡಿದ್ದು ಇಡೀ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತು. ಫೋಟೊ : ೨೮ಎಚ್‌ಎನ್‌ಎಲ್೧, ೧ಎ, ೧ಬಿ, ೧ಸಿ

ನಾಟಕದ ದೃಶ್ಯಗಳು.