ರೈತರ ದುಗುಡ ಸೂಕ್ಷ್ಮವಾಗಿ ಗ್ರಹಿಸಿದ್ದ ಮುಡುಬೂಳ

| Published : Oct 25 2024, 12:46 AM IST

ಸಾರಾಂಶ

The plight of the peasants was carefully understood by Mudubula

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ಸರಳ ಸಜ್ಜನಿಕೆಯ ಸಾಮಾಜಿಕ ಕಳಕಳಿಯುಳ್ಳ, ರೈತರ ಏಳಿಗೆಗಾಗಿ ಮಿಡಿಯುತ್ತಿದ್ದ, ಇತಿಹಾಸ ಸಂಶೋಧಕ, ಚಿಂತಕ, ಪರಿಸರ ಪ್ರೇಮಿ, ಹಿರಿಯ ನ್ಯಾಯವಾದಿ ಭಾಸ್ಕರರಾವ್ ಕುಲಕರ್ಣಿ ಮುಡುಬೂಳ ಬಹುಮುಖ ಪ್ರತಿಭೆ ಹೊಂದಿದ್ದರು.

ಸ್ವತ: ಕೃಷಿಕರಾಗಿದ್ದ ಭಾಸ್ಕರರಾವ್ ಅವರಿಗೆ ಕೃಷಿ ಕ್ಷೇತ್ರದ ಬಗ್ಗೆ ಹಾಗೂ ಸಮಸ್ಯೆಗಳ ಅರಿವಿತ್ತು. ರೈತರ ದುಗಡಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ ಅವರು, ಅತ್ಯಂತ ಕರಾರುವಕ್ಕಾಗಿ ಪ್ರಸ್ತುತ ಪಡಿಸುತ್ತಿದ್ದರು. ಅತ್ಯುತ್ತಮ ವಾಗ್ಮಿಯೂ ಆಗಿದ್ದ ಭಾಸ್ಕರರಾವ್ ಅವರ ಮಾತುಗಳನ್ನು ಕೇಳಲು ಜನರೂ ಇಷ್ಟಪಡುತ್ತಿದ್ದರು.

ಸಂಘ ಪರಿವಾರದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಭ್ರಷ್ಟಾಚಾರ ನಿರ್ಮೂಲನೆಗಾಗಿ ಅಣ್ಣ ಹಜಾರೆ ಅವರು ನಡೆಸಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹದ ಭಾಗವಾಗಿ ಯಾದಗಿರಿ ಜಿಲ್ಲೆಯಲ್ಲಿಯೂ ಹೋರಾಟ ನಡೆಸಿದ್ದರು. ಸಮಾಜದ ಬದಲಾವಣೆ ಅವರ ಪ್ರಮುಖ ಧ್ಯೇಯವಾಗಿತ್ತು.

ಭಾರತೀಯ ಕಿಸಾನ್ ಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಭಾಗದ ರೈತರ ಸಮಸ್ಯೆಗೆ ಜೀವನಾಡಿಯಾಗಿ ಸ್ಪಂದಿಸಿದ್ದರು. ಕೃಷ್ಣಾ ಅಚ್ಚುಕಟ್ಟ ಪ್ರದೇಶದ ನೀರಾವರಿ ಯೋಜನೆ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು.

ಮಿಡಿದ ಹೃದಯ: ರೈತ ಆತ್ಮಹತ್ಯೆ ಕುರಿತು ತೀವ್ರತರನಾದ ಬೇಸರವಿತ್ತು. ಅವರಿಗೆ ನ್ಯಾಯಯುತವಾಗಿ ಸೌಲಭ್ಯಗಳು ದೊರೆತರೆ ಅನ್ನದಾತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸರ್ಕಾರ ಚುನಾವಣೆಯಲ್ಲಿ ಭರವಸೆ ಕೊಟ್ಟ ಹಾಗೆ ಗೆದ್ದು ಬಂದ ಮೇಲೆ ಅದನ್ನು ಈಡೇರಿಸಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಬರುತ್ತಿರಲಿಲ್ಲ ಎನ್ನುವುದು ಅವರ ವಾದವಾಗಿತ್ತು.

ಡಾ. ಸ್ವಾಮಿನಾಥನ್ ವರದಿ ಜಾರಿಯಾಗದ ಹೊರತು ಭಾರತ ದೇಶದಲ್ಲಿ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ. ಇದೇ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ರೈತರು ಹೀಗಿದ್ದರೂ ಎಂಬುದನ್ನು ಚಿತ್ರಪಟದಲ್ಲಿ ನೋಡಬೇಕಾದ ಸ್ಥಿತಿ ಎದುರಾಗುವ ಕಾಲ ದೂರವಿಲ್ಲ ಎನ್ನುವುದು ಭಾಸ್ಕರರಾವ ಅವರ ಅಭಿಪ್ರಾಯವಾಗಿತ್ತು.

ಸಂಶೋಧನಾ ಕೇಂದ್ರ:

ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ತೆರೆದು ಸುರಪುರ ಅರಸರ ಆಡಳಿತ, ಶೌರ್ಯ, ಸಾಹಸ, ದೇಶಭಕ್ತಿ, ರಾಜ್ಯಭಾರ, ಆಡಳಿತ ವಿಸ್ತೀರ್ಣ, ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಸುರಪುರದ ಕೊಡುಗೆಗಳನ್ನು ರಾಜ್ಯಕ್ಕೆ ಪಸರಿಸುವ ಧ್ಯೇಯ ಹೊಂದಿದ್ದರು.

ಇದರ ಭಾಗವಾಗಿ ಸುರಪುರ ಅರಸು ಮನೆತನದ ದೇಶ ಭಕ್ತಿಯನ್ನು ಪ್ರಸ್ತುಪಡಿಸುತ್ತದೆ. ಭಾಸ್ಕರರಾವ್ ಅವರ ಅವಿರತ ಪರಿಶ್ರಮದ ಫಲವಾಗಿ ರಾಜಾ ವೆಂಕಟಪ್ಪ ನಾಯಕರ ಸಮಾಧಿ ಗುರುತಿಸಿ ಸಂಶೋಧನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.

ನವೆಂಬರ್ 26, 2020 ರಂದು ಕಿಸಾನ್ ಸಂಯುಕ್ತ ಮೋರ್ಚಾವೂ ದೆಹಲಿಯ ಜಂತರ್ ಮಂಥರ್‌ನಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು. ಇದಕ್ಕೆ ದೇಶದ ಮೂಲೆಮೂಲೆಯಿಂದ ಅಪಾರವಾದ ಜನಸಂಖ್ಯೆ ಆಗಮಿಸಿತ್ತು. ಈ ಹೋರಾಟಕ್ಕೆ ನನ್ನದೂ ಕೊಡುಗೆ ಇರಲಿ ಎಂಬುದಾಗಿ ಇಳಿವಯಸ್ಸಿನಲ್ಲೂ ರೈತರ ಶ್ರೇಯೋಭಿವೃದ್ಧಿಗಾಗಿ ಕೃಷಿಕರ ಜತೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರು.

ದೆಹಲಿಯ ಚಳುವಳಿಯ ಹೋರಾಟದ ಅಂಗವಾಗಿ ನಗರದಲ್ಲಿ ವಿವಿಧ ರೈತ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರನ್ನು ಒಳಗೊಂಡಂತೆ ಸುಮಾರು 100ಕ್ಕೂ ಹೆಚ್ಚು ಟ್ರ‍್ಯಾಕ್ಟರ್ ಮತ್ತು ಎತ್ತಿನ ಬಂಡಿಯೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದ ರೈತ ನಾಯಕ.

====ಬಾಕ್ಸ್‌====ರೈತರ ಕುರಿತು ಅಪಾರ ಗೌರವ

ದೆಹಲಿಯ ರೈತ ಹೋರಾಟದಲ್ಲಿ ಸಾವನ್ನಪ್ಪಿದ ರೈತರ ಚಿತಾಭಸ್ಮವನ್ನು ತರಿಸಿ ಕೃಷ್ಣಾ ನದಿಯಲ್ಲಿ ವಿಧಿವಿಧಾನದೊಂದಿಗೆ ಅಸ್ಥಿ ವಿಸರ್ಜಿಸಿದ್ದನ್ನು ನೋಡಿದರೆ ಅವರಿಗೆ ರೈತರ ಬಗ್ಗೆ ಇರುವ ಗೌರವವನ್ನು ತೋರ್ಪಡಿಸುತ್ತದೆ. ಇಂಥಹ ಮಹಾನ್ ಚೇತನ ಅಗಲಿದ್ದು, ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ.

-----

ಕೋಟ್‌-1 : ಸರಳ ಸಜ್ಜನಿಕೆ ವ್ಯಕ್ತಿತ್ವ. ಕಠಿಣ ಪರಿಶ್ರಮ ಮತ್ತು ಹಿಡಿದ ಕೆಲಸ ಪೂರ್ಣಗೊಳಿಸುವಂತಹ ವ್ಯಕ್ತಿತ್ವ. ಇತಿಹಾಸ, ಶಿಕ್ಷಣ, ಕೃಷಿ, ನೀರಾವರಿ, ಸಂಶೋಧನೆ ಬಗ್ಗೆ ಅಪಾರಜ್ಞಾನ ಇರುವ ಭಾಸ್ಕರ್ ರಾವ್ ಮುಡಬೂಳ ಅವರ ಅಕಾಲಿಕ ನಿಧನದಿಂದ ಈ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ. :

-ಕರುಣೇಶ್ವರ ಸ್ವಾಮೀಜಿ, ಕೃಷ್ಣಾ ಬೀಮ ಸಂಗಮದ ಸಂಗಮನಾಥ ದೇವಸ್ಥಾನದ ಪೀಠಾಧಿಪತಿ.

-

24ವೈಡಿಆರ್‌15 : ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಭಾಸ್ಕರರಾವ್‌ ಮುಡಬೂಳ. (ಸಂಗ್ರಹ ಚಿತ್ರ)

---000---