ಸಾರಾಂಶ
ಹಾವೇರಿ: ಪೊಲೀಸರು ದೇಶದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತಹ ಜವಾಬ್ದಾರಿ ಉಳ್ಳಂತಹ ನೌಕರರಾಗಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿರಾದಾರ ಎನ್. ದೇವೇಂದ್ರಪ್ಪ ಹೇಳಿದರು.
ಸಮೀಪದ ಕೆರಿಮತ್ತಿಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಆರ್ಮಿ, ಏರ್ ಫೋರ್ಸ್ ಮತ್ತು ನೇವಿ ಇವು ದೇಶದ ರಕ್ಷಣೆ, ದೇಶದ ಗಡಿ ರಕ್ಷಣೆ, ನುಸುಳುಕೋರರನ್ನು ತಡೆಗಟ್ಟಿ ದೇಶದ ರಕ್ಷಣೆ ಮಾಡುವಂಥವಾದರೆ, ಪೊಲೀಸ್ ಇಲಾಖೆ ಸಮಾಜದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆ ರಕ್ಷಿಸುವಂಥದ್ದು. ಪೊಲೀಸ್ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿ ಹಾಗೂ ಸಿಬ್ಬಂದಿ ಪರಿಸ್ಥಿತಿ ಹೇಗೆ? ಅವರು ಸಮಾಜದಲ್ಲಿ ಕಳ್ಳಕಾಕರು, ಸುಳ್ಳುಕೋರರ ವಿರುದ್ಧ ಹೋರಾಡಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದರೂ ಕರ್ತವ್ಯ ನಿರ್ವಹಣೆ ಮಾಡಬೇಕು. ಕರ್ತವ್ಯ ನಿರ್ವಹಣೆ ಮಾಡುತ್ತಾ ಸಾವಿಗೂ ಹೆದರದೆ ಕರ್ತವ್ಯ ನಿರ್ವಹಣೆ ಮಾಡಿರುವಂತಹ ಸಂದರ್ಭಗಳು ಸಾಕಷ್ಟಿವೆ ಎಂದರು.ಪೊಲೀಸ್ ಹುತಾತ್ಮ ದಿನ ಸಮಾಜದ ಪ್ರತಿಯೊಬ್ಬರೂ ಆಚರಿಸುವಂತಾಗಬೇಕು. ಇಂದು ಪೊಲೀಸರ ಮೇಲೆ ಸಾಕಷ್ಟು ಅಪವಾದಗಳಿವೆ. ಆದರೆ ಪೊಲೀಸ್ ವ್ಯವಸ್ಥೆ ಇಲ್ಲವಾದಲ್ಲಿ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತವಾಗಿ ಬದುಕುವುದು ಅಸಾಧ್ಯವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಗೆ ಅವರ ಸೇವಾ ಅವಧಿಯಲ್ಲಿ ಸಿಗುವಂತಹ ಎಲ್ಲ ಸೌಲಭ್ಯಗಳು ಸಿಗುವಂತಾಗಬೇಕು ಹಾಗೂ ಪೋಲಿಸ್ ಸಿಬ್ಬಂದಿಯಲ್ಲಿ ಒಗ್ಗಟ್ಟಿರಬೇಕು, ಆಗ ಸಮಾಜದಲ್ಲಿ ಕಠಿಣ ನಿಲುವುಗಳಲ್ಲೂ ಕೂಡ ಧೈರ್ಯದಿಂದ ಸೇವೆ ಸಲ್ಲಿಸಲು ಸಾಧ್ಯವಾಗಲಿದೆ ಎಂದರು.
ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮೃತಪಟ್ಟವರ ಸ್ಮರಣಾರ್ಥಕವಾಗಿ ಇಡೀ ದೇಶಾದ್ಯಂತ ಅ. 21ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ. 1959ರ ಅ. 21ರಂದು ಕೇಂದ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಎಸ್‌ಪಿ ಕರಣಸಿಂಗ್ ಅವರು ಲಡಾಕ ಗಡಿ ಪ್ರಾಂತ್ಯದಲ್ಲಿ ಚೀನಿ ಸೈನಿಕರ ವಿರುದ್ಧ ಅತಿ ಕಡಿಮೆ ಸೈನಿಕರೊಂದಿಗೆ ಹೋರಾಡಿ ಮಡಿದು ರಾಷ್ಟ್ರದ ರಕ್ಷಣೆ ಮಾಡಿ, ಕರ್ತವ್ಯನಿಷ್ಠೆ ತೋರಿದರು. ಈ ಮಹಾನ್ ವ್ಯಕ್ತಿ ಹಾಗೂ ಅವರ ಸಿಬ್ಬಂದಿಯ ಸ್ಮರಣಾರ್ಥಕವಾಗಿ ಈ ದಿನವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.2024 ಸೆ. 1ರಿಂದ 2025 ಆ. 31ರ ವರೆಗೆ ನಮ್ಮ ರಾಜ್ಯದಲ್ಲಿ ಒಟ್ಟು 8 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದಲ್ಲಿ ನಿರತವಾಗಿದ್ದಾಗಲೇ ಮರಣ ಹೊಂದಿದ್ದು, ಒಟ್ಟು ನಮ್ಮ ದೇಶದಲ್ಲಿ 191 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಈ ಅವಧಿಯಲ್ಲಿ ಮರಣ ಹೊಂದಿದ್ದಾರೆ ಎಂದರು.
ಪೊಲೀಸ್ ಹುತಾತ್ಮರ ಗೌರವ ಸೂಚಕವಾಗಿ ಪರೇಡ್ ಕಮಾಂಡರ್ ಆರ್‌ಪಿಐ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ಆನಂತರ ಮೌನಾಚರಣೆ ಮಾಡಲಾಯಿತು ಹಾಗೂ ಪೊಲೀಸ್ ಬ್ಯಾಂಡ್ ಪ್ರದರ್ಶನ ನಡೆಯಿತು.ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಲ್.ವೈ. ಶಿರಕೋಳ, ಜಿಲ್ಲೆಯ ಎಲ್ಲ ವಿಭಾಗದ ಪೊಲೀಸ್ ಡಿಎಸ್‌ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐ, ಪೊಲೀಸ್ ಸಿಬ್ಬಂದಿ, ರಾಜಕೀಯ ಮುಖಂಡರು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಇತರರು ಇದ್ದರು. ಪೊಲೀಸ್ ಕಾನ್‌ಸ್ಟೇಬಲ್ ಸಂತೋಷ ಜವಳಿ ಕಾರ್ಯಕ್ರಮ ನಿರೂಪಿಸಿದರು.