ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲ:ಆರೋಪ

| Published : Jun 27 2024, 01:08 AM IST

ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲ:ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಅಸಹಾಯಕ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಉಪವಿಭಾಗ ಮಟ್ಟದ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆಯುತ್ತಿದ್

ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಆರೋಪಿಸಿದರು.

ಡಿವೈಎಸ್ಪಿ ಕಚೇರಿಯಲ್ಲಿ ಆಯೋಜಿಸಿದ್ದ ಉಪ ವಿಭಾಗ ಮಟ್ಟದ ಪ. ಜಾತಿ, ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಅಸಹಾಯಕ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಉಪವಿಭಾಗ ಮಟ್ಟದ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆಯುತ್ತಿದ್ದು, ಅದರಲ್ಲಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹನಗೋಡು ಹೋಬಳಿ ಶೆಟ್ಟಹಳ್ಳಿ ಗ್ರಾಮದ ದಲಿತ ವೆಂಕಟೇಶ ಮತ್ತು ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಘಟನೆ ನಡೆದು 20 ದಿನಗಳಾದರೂ ಹಲ್ಲೆ ಮಾಡಿರುವ 4 ಜನ ಆರೋಪಿಗಳನ್ನು ಪೊಲೀಸ್ ಇಲಾಖೆಯವರು ಬಂಧಿಸದೆ ನಿರ್ಲಕ್ಷ್ಯತೆ ವಹಿಸುತ್ತಿರುವುದು ದಲಿತರಲ್ಲಿ ಆತಂಕ ಮೂಡಿಸಿದೆ ಎಂದು ಅವರು ತಿಳಿಸಿದರು.

ದಲಿತರ ಮೇಲೆ ನಡೆದ ಇಂತಹ ಘೋರ ಹಲ್ಲೆ ಪ್ರಕರಣಗಳನ್ನು ಪೊಲೀಸ್ ಇಲಾಖೆ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಗ್ರಾಮೀಣ ಪ್ರದೇಶದ ಅಸಹಾಯಕ ದಲಿತರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಗೋಪಾಲಕೃಷ್ಣ ಮಧ್ಯೆಪ್ರವೇಶಿಸಿ ಮಾತನಾಡಿ, ಶೆಟ್ಟಹಳ್ಳಿ ಗ್ರಾಮದ ದಲಿತ ವೆಂಕಟೇಶನ ಮೇಲೆ ನಡೆದ ದೌರ್ಜನ್ಯವನ್ನು ಪೊಲೀಸ್ ಇಲಾಖೆ ತುಂಬಾ ಗಂಭೀರವಾಗಿ ತೆಗೆದುಕೊಂಡು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇವೆ. ದೌರ್ಜನ್ಯ ಮಾಡಿದ 4 ಜನ ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.

ಪೊಲೀಸ್ ಇಲಾಖೆಯ ಮೇಲೆ ದಲಿತ ಮುಖಂಡರು ವಿಶ್ವಾಸವಿಡಬೇಕು. ನಮ್ಮ ಉಪವಿಭಾಗ ಮಟ್ಟದ ಹುಣಸೂರು ಪಿರಿಯಾಪಟ್ಟಣ, ಎಚ್.ಡಿ. ಕೋಟೆ ತಾಲೂಕುಗಳಿಗೆ ಒಳಪಡುವ ಪೊಲೀಸ್ ಠಾಣೆಗಳಲ್ಲಿ ದಲಿತರ ಮೇಲೆ ಯಾವುದೇ ನಿಜವಾದ ದೌರ್ಜನ್ಯ ಪ್ರಕರಣಗಳು ನಡೆದರೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತೇವೆ. ನೊಂದ ಜನರಿಗೆ ಕಾನೂನು ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸುವಂತೆ ಪೊಲೀಸ್ ಸಿಬ್ಬಂದಿಗೆ ನಿರ್ದೇಶನ ಮಾಡಲಾಗಿದೆ ಎಂದರು.

ಎಚ್.ಡಿ. ಕೋಟೆಯ ದಲಿತ ಮುಖಂಡ ನರಸಿಂಹಮೂರ್ತಿ, ಜೀವಿಕಾ ಸಂಸ್ಥೆಯ ಬಸವರಾಜು ಮಾತನಾಡಿ, ಪ್ರತಿ ತಿಂಗಳು ನಡೆಯುವ ದಲಿತರ ಕುಂದುಕೊರತೆ ಸಭೆಗಳನ್ನು ಕಾಟಾಚಾರಕ್ಕೆ ನಡೆಸದೆ ದಲಿತರ ನಿಜವಾದ ಸಮಸ್ಯೆಗಳಿಗೆ ಪರಿಹಾರ, ನ್ಯಾಯ, ರಕ್ಷಣೆ ಕೊಡಿಸುವ ಸಭೆಗಳಾಗಬೇಕು ಎಂದರು.

ಹುಣಸೂರಿನ ಆದಿಜಾಂಭವ ಸಂಘದ ಅಧ್ಯಕ್ಷ ಬಿ. ಶಿವಣ್ಣ, ಪ್ರಭಾಕರ್, ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಮುನಿಯಪ್ಪ, ಹುಣಸೂರು ನಗರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್, ಬಿಳಿಕೆರೆ ಠಾಣೆಯ ಇನ್ಸ್ಪೆಕ್ಟರ್ ಲೋಲಾಕ್ಷಿ, ಎಚ್.ಡಿ. ಕೋಟೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸಬೀರ್ ಹುಸೇನ್. ಅಂತರಸಂತೆ ಸಬ್ ಇನ್ಸ್ಪೆಕ್ಟರ್ ಚಂದ್ರಹಾಸ, ಪಿರಿಯಾಪಟ್ಟಣ ಸಬ್ ಇನ್ಸ್ಪೆಕ್ಟರ್ ಸುರೇಶ್, ಬೆಟ್ಟದಪುರ ಠಾಣೆಯ ಇನ್ಸ್ಪೆಕ್ಟರ್ ವೀಣಾ, ದಲಿತ ಮುಖಂಡರಾದ ರಾಮಕೃಷ್ಣ, ತಾಂಡುಮೂರ್ತಿ, ರೇಣುಕಾ, ದಯಾನಂದ್, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ತಾಲೂಕಿನ ದಲಿತ ಮುಖಂಡರು ಭಾಗವಹಿಸಿದ್ದರು.