ರಾಘವೇಂದ್ರನ ಸ್ಥಳ ಮಹಜರಿಗೆ ಕರೆತಾರದ ಪೋಲೀಸರು

| Published : Jun 14 2024, 01:03 AM IST

ಸಾರಾಂಶ

ರೇಣುಕಾ ಸ್ವಾಮಿ ಕಿಡ್ನಾಪ್ ಮಾಡಿದ ರಾಘವೇಂದ್ರದ ಸ್ಥಳ ಮಹಜರಿಗೆ ಕರೆ ತರುತ್ತಾರೆಂಬ ಹಿನ್ನಲೆ ಚಿತ್ರದುರ್ಗದ ಬಾಲಾಜಿ ಬಾರ್ ಮುಂಭಾಗ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗದರ್ಶನ್ ಗ್ಯಾಂಗ್‌ನಿಂದ ಹತ್ಯೆಗೊಳಗಾದ ರೇಣುಕಸ್ವಾಮಿಯ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದ ರಾಘವೇಂದ್ರನ ಸ್ಥಳ ಮಹಜರಿಗೆ ಕರೆತರುತ್ತಾರೆಂಬ ಕಾರಣಕ್ಕೆ ಗುರುವಾರ ಸಂಜೆ ಚಿತ್ರದುರ್ಗದ ಮಂದಿ ಕುತೂಹಲದಿಂದ ಕಾದರು. ರಾಘವೇಂದ್ರನ ಜೊತೆಗೆ ದರ್ಶನ್ ಕೂಡಾ ಬರುತ್ತಾನೆ ಎಂಬ ವದಂತಿ ಕಾರಣಕ್ಕೆ ಸಾವಿರಾರು ಜನರು ಬಾಲಾಜಿ ಬಾರ್ ಮುಂದೆ ಜಮಾವಣೆ ಗೊಂಡು, ರಾಷ್ಟ್ರೀಯ ಹೆದ್ದಾರಿ ಫ್ಲೈ ಓವರ್ ಮೇಲೆ ಸಾಲಾಗಿ ನಿಂತಿದ್ದರು. ಇದರಿಂದಾಗಿ ಕೆಲ ಕಾಲ ನೂಕು ನುಗ್ಗಲು ಉಂಟಾಗಿದ್ದು, ರಾಘವೇಂದ್ರನ ಪೊಲೀಸರು ಕರೆ ತಾರದ ಕಾರಣ ರಾತ್ರಿ 8 ರವೆರೆಗೆ ಕಾದು ವಾಪಾಸ್ಸಾದರು. ಸ್ಥಳ ಮಹಜರಿಗೆ ಸಮಯ ಮಾಹಿತಿ ಚಿತ್ರದುರ್ಗ ಪೊಲೀಸರಿಗೂ ಗೊತ್ತಿರಲಿಲ್ಲ. ಸಂಜೆ ಆರು ಗಂಟೆಗೆ ಆಗಮಿಸುತ್ತಾರೆ ಎಂಬ ಕಾರಣಕ್ಕೆ ಪೊಲೀಸರೂ ಜಮಾಯಿಸಿದ್ದರು. ಯಾರೊಬ್ಬರಲ್ಲಿಯೂ ಖಚಿತ ಮಾಹಿತಿ ಇರದ ಕಾರಣ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ಅಷ್ಟರ ಮಟ್ಟಿಗೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಗುಟ್ಟಾಗಿಟ್ಟಿದ್ದರು. ಅಂತಿಮವಾಗಿ ರಾತ್ರಿ ಎಂಟುವರೆ ನಂತರ ಬರುವುದಿಲ್ಲವೆಂಬ ಮಾಹಿತಿ ರವಾನೆಯಾದ್ದರಿಂದ ಎಲ್ಲರೂ ನಿರ್ಗಮಿಸಿದರು.

ಕಳೆದ ಶನಿವಾರ ರಾಘವೇಂದ್ರ ಸೇರಿದಂತೆ ಮೂರು ಜನ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿದ್ದರು. ರೇಣುಕಾಸ್ವಾಮಿ ಬಾಲಾಜಿ ಬಾರ್ ಬಳಿ ತನ್ನ ಸ್ಕೂಟಿ ನಿಲ್ಲಿಸಿದ್ದರಿಂದ ಇಲ್ಲಿಂದಲೇ ಅಪಹರಿಸಿರಬಹುದೆನ್ನಲಾಗಿತ್ತು. ಆದರೆ ಗುರುವಾರ ಡಿವೈಎಸ್ಪಿ ಮುಂದೆ ಶರಣಾದ ಕಾರು ಚಾಲಕ ರವಿಶಂಕರ ಕುಂಚಿಗನಹಾಳು ಕಣಿವೆ ಬಳಿ ರೇಣುಕಸ್ವಾಮಿಯ ಹತ್ತಿಸಿಕೊಳ್ಳಲಾಯಿತು. ಅಲ್ಲಿಗೆ ಅವರು ಆಟೋದಲ್ಲಿ ಬಂದಿದ್ದರು ಎಂದು ಹೇಳಿದ್ದಾನೆ. ಹಾಗಾಗಿ ಸ್ಥಳ ಮಹಜರು ಬಾಲಾಜಿ ಬಾರ್ ಬಳಿಯೋ ಅಥವಾ ಕುಂಚಿಗನಹಾಳು ಕಣಿವೆ ಬಳಿಯೋ ಎಂಬ ಗೊಂದಲಗಳು ಮೂಡಿದವು. ಒಂದಿಷ್ಟು ಮಂದಿ ಸಂಜೆ ಕುಂಚಿಗನಹಾಳು ಕಣಿವೆ ಬಳಿ ಕಾದಿದ್ದರು.ಸಿಸಿ ಟಿವಿಯಲ್ಲಿ ಸೆರೆ: ಜೂ.8ರಂದು ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿಯ ಅಪಹರಣವಾಗುವುದಕ್ಕೂ ಮೊದಲಿನ ಚಲವಲನಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಅಂದು ಬೆಳಗ್ಗೆ 9.48 ಕ್ಕೆ ಸ್ಕೂಟಿಯಲ್ಲಿ ರೇಣುಕಾಸ್ವಾಮಿ ತೆರಳಿದ್ದು ಚಳ್ಳಕೆರೆ ಗೇಟ್ ಕಡೆಯಿಂದ ಅಪೊಲೊದತ್ತ ತೆರಳಿದ ದೃಶ್ಯ ಕಂಡುಬಂದಿದ್ದು, 8ರಂದೆ ರಾತ್ರಿ ರೇಣುಕಾಸ್ವಾಮಿ ಹತ್ಯೆ ನಡೆದಿದೆ. ಸ್ಕೂಟಿಯಲ್ಲಿ ಬಂದಿದ್ದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದ ದರ್ಶನ ಗ್ಯಾಂಗ್ ನಂಬಿಸಿ ಕಾರಲ್ಲಿ ಕರೆದೊಯ್ದಿತ್ತು. ದರ್ಶನ್ ಅಭಿಮಾನಿಗಳ ಸಂಘದ ಚಿತ್ರದುರ್ಗ ಅಧ್ಯಕ್ಷ ರಾಘವೇಂದ್ರ ಈ ಕೆಲಸ ಮಾಡಿದ್ದ.ಬಾಕ್ಸ:

ಮೂರು ದಿನದ ಕಾರ್ಯ: ದರ್ಶನ್‌ ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿಯ ಮೂರು ದಿನದ ಕಾರ್ಯವನ್ನು ಕುಟುಂಬದವರು ಗುರುವಾರ ನೆರವೇರಿಸಿದರು. ವೀರಶೈವ ಜಂಗಮ ಸಂಪ್ರದಾಯದ ಪ್ರಕಾರ ಪೂಜಾ ವಿಧಿ ವಿಧಾನಗಳು ನಡೆದವು. ರೇಣುಕಾಸ್ವಾಮಿ ಕುಟುಂಬ ಹಾಗೂ ಸಂಬಂಧಿಕರು ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಜೂನ್ 2ರಂದೆ ಸಂಚು ನಡೆದಿತ್ತಾ?: ದರ್ಶನ್ ಮತ್ತು ಅವನ ಗ್ಯಾಂಗ್‌ನಿಂದ ಜೂ. 2ರಂದೇ ರೇಣುಕಾಸ್ವಾಮಿಗೆ ಬೆದರಿಕೆ ಕರೆ ಬಂದಿತ್ತಾ ಎಂಬ ಪ್ರಶ್ನೆಗಳು ಎದುರಾಗಿದ್ದು, ಅಂದು ಮಧ್ಯಾಹ್ನ 2:15 ರಿಂದ 2:40 ರವರೆಗೆ ಫೋನಲ್ಲಿ ಮಾತಾಡಿದ್ದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಅಪೊಲೋ ಫಾರ್ಮಸಿಯಿಂದ ಹೊರಬಂದು ಸ್ಕೂಟಿ ಮೇಲೆ ಕುಳಿತುಕೊಂಡೇ ರೇಣುಕಾಸ್ವಾಮಿ ಮಾತನಾಡಿದ್ದಾನೆ. ಕರೆ ಬಳಿಕ ರೇಣುಕಸ್ವಾಮಿ ವಿಚಲಿತನಾದಂತೆ ಕಂಡು ಬಂದಿದ್ದಾನೆ. ಜೂನ್ ಮೊದಲ ವಾರದಿಂದಲೇ ರೇಣುಕಾಸ್ವಾಮಿ ಹತ್ಯೆ ಸಂಚು ನಡೆದಿತ್ತಾ ಎಂಬ ಪ್ರಶ್ನೆಗಳು ಮೂಡಿವೆ.