ಸಾರಾಂಶ
ಹೋಟೆಲ್‌ನಲ್ಲಿ ಪರ್ಸ್‌ನಿಂದ ಕಳೆದುಕೊಂಡಿದ್ದ 20 ಗ್ರಾಂ ಚಿನ್ನದ ಸರವನ್ನು ಕಳ್ಳತನವಾದ ಮರು ದಿನವೇ ಬೇಗೂರು ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಹೋಟೆಲ್‌ನಲ್ಲಿ ಪರ್ಸ್‌ನಿಂದ ಕಳೆದುಕೊಂಡಿದ್ದ 20 ಗ್ರಾಂ ಚಿನ್ನದ ಸರವನ್ನು ಕಳ್ಳತನವಾದ ಮರು ದಿನವೇ ಬೇಗೂರು ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ ಘಟನೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.ತಾಲೂಕಿನ ಮಾದಾಪಟ್ಟಣದ ನಿವಾಸಿ ಮಾಯಮ್ಮ ಬೇಗೂರು ಸೋಮು ಹೋಟೆಲ್‌ಗೆ ಬಂದಿದ್ದಾರೆ. ಪರ್ಸ್ ತೆಗೆಯುವಾಗ ಚಿನ್ನದ ಸರ ನೆಲಕ್ಕೆ ಬಿದ್ದಿದೆ. ಅದೇ ಹೋಟೆಲ್‌ನಲ್ಲಿ ತಿಂಡಿ ತಿನ್ನುತ್ತಿದ್ದ ಪ್ರಕಾಶ್ ಎಂಬಾತ ತಿಂಡಿ ತಿನ್ನುವುದನ್ನು ಅರ್ಧಕ್ಕೆ ಬಿಟ್ಟು ಕೈ ತೊಳೆದುಕೊಂಡು ಚಿನ್ನದ ಸರವನ್ನು ಜೇಬಿಗೆ ಹಾಕಿಕೊಂಡು ಪರಾರಿಯಾಗಿದ್ದಾನೆ.
ಚಿನ್ನದ ಸರ ಹಾಗೂ 550 ರು.ಕಳೆದುಕೊಂಡ ಮಾದಾಪಟ್ಟಣದ ಮಾಯಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಬೇಗೂರು ಸಬ್ ಇನ್ಸ್‌ಪೆಕ್ಟರ್ ಚರಣ್ ಗೌಡ ಹಾಗೂ ಸಿಬ್ಬಂದಿ ಹೋಟೆಲ್ ಸೋಮುಗೆ ಆಗಮಿಸಿ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ, ಮಾಯಮ್ಮನ ಪರ್ಸ್‌ನಿಂದ ನೆಲಕ್ಕೆ ಚಿನ್ನದ ಸರ ಬಿದ್ದಿದೆ. ಬಿದ್ದ ಸರವನ್ನು ವ್ಯಕ್ತಿಯೋರ್ವ ಎತ್ತಿಕೊಂಡಿ ಹೋಗಿರುವುದು ಖಚಿತವಾಗಿದೆ. ಬಳಿಕ ಪೊಲೀಸರು ಸಿಸಿ ಕ್ಯಾಮೆರಾದ ವಿಡೀಯೋವನ್ನು ಕೆಲ ಗ್ರೂಪ್‌ಗಳಿಗೆ ಹಾಕಿದ್ದಾರೆ. ಬಾರ್‌ವೊಂದರ ಕಾರ್ಮಿಕ ಚಿನ್ನದ ಸರ ಎತ್ತಿಕೊಂಡು ಹೋದ ಅಸಾಮಿಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಆತನ ವಿಳಾಸ ಪತ್ತೆ ಹಚ್ಚಿ ಕುಟುಂಬದವರನ್ನು ವಿಚಾರಣೆ ನಡೆಸಿದಾಗ ಆತ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ. ಕೂಡಲೇ ಆತನ ಪರಿಚಿತರು ಸಂಪರ್ಕಿಸಿ ಚಿನ್ನದ ಸರ ಹಾಗೂ 550 ರು. ಹಣವನ್ನು ವಾಪಸ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿನ್ನದ ಸರ ಹಾಗೂ 550 ರು.ಹಣವನ್ನು ಮಾದಾಪಟ್ಟಣದ ಮಾಯಮ್ಮನಿಗೆ ಗ್ರಾಮಸ್ಥರಾದ ಮಲ್ಲೇಶ, ಸುರೇಶ್ ಸಮ್ಮುಖದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ವಿ.ಸಿ.ವನರಾಜು, ಸಬ್ ಇನ್ಸ್ ಪೆಕ್ಟರ್ ಚರಣ್ ಗೌಡ ಹಸ್ತಾಂತರಿಸಿದರು. ಈ ಸಮಯದಲ್ಲಿ ಎಎಸ್‌ಐ ಅರಸ್, ಮುಖ್ಯ ಪೇದೆ ಉಡಿಗಾಲ ಮಹೇಶ್, ಪುಟ್ಟರಾಜು, ಪೇದೆ ಮಹೇಶ್ ಸಿಬ್ಬಂದಿ ಇದ್ದರು.