ವಿದ್ಯಾರ್ಥಿ ದೆಸೆಯಿಂದಲೇ ಉದ್ಯೋಗ ಹಾದಿ ಕಂಡುಕೊಂಡ ನೀತಿ

| Published : Nov 14 2025, 03:15 AM IST

ವಿದ್ಯಾರ್ಥಿ ದೆಸೆಯಿಂದಲೇ ಉದ್ಯೋಗ ಹಾದಿ ಕಂಡುಕೊಂಡ ನೀತಿ
Share this Article
  • FB
  • TW
  • Linkdin
  • Email

ಸಾರಾಂಶ

ತ್ರಿಡಿ ತಂತ್ರಜ್ಞಾನ ಬಳಸಿಕೊಂಡ ಮದ್ರಾಸ್‌ ಐಐಟಿ ಸಂಶೋಧಕರು ಒಂದಿಡೀ ಕಟ್ಟಡವನ್ನೇ ನಿರ್ಮಿಸಿರುವುದನ್ನು ಪ್ರೇರಣೆಯಾಗಿ ಪಡೆದುಕೊಂಡ ನೀತಿ ಕುಲಕರ್ಣಿ, ಈ ಬಗ್ಗೆ ಗೂಗಲ್‌ ಹುಡುಕಾಟ ನಡೆಸಿ, ತ್ರಿಡಿ ತಂತ್ರಜ್ಞಾನದ ಮೂಲಕ ನಾನು ಸಹ ಏನಾದರೂ ಮಾಡಬೇಕೆಂದು ತ್ರಿಡಿ ಲ್ಯಾಂಪ್ಸ್‌ ಹಾಗೂ ಇತರೆ ಆಕರ್ಷಕ ವಸ್ತುಗಳನ್ನು ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾಳೆ.

ಬಸವರಾಜ ಹಿರೇಮಠ

ಧಾರವಾಡ:

ವಿದ್ಯಾರ್ಥಿ ದೆಸೆಯಿಂದಲೇ ಹೊಸ ಹೊಸ ತಾಂತ್ರಿಕ ಕೌಶಲ್ಯಗಳನ್ನು ಕಲಿತು, ಅದರ ಮೂಲಕ ಆರ್ಥಿಕ ಸ್ವಾವಲಂಬಿಯೂ ಆಗಲು ಹೊರಟಿದ್ದಾಳೆ 14 ವರ್ಷದ ಈ ವಿದ್ಯಾರ್ಥಿನಿ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮ್ಮ ನಿತ್ಯದ ಅಭ್ಯಾಸಕ್ಕೆ ಪೂರಕವಾಗಿ ವಿಜ್ಞಾನ ಪ್ರಯೋಗಗಳು, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಆದರೆ, ಮಾಳಮಡ್ಡಿಯ ಕೆ.ಇ. ಬೋರ್ಡ್‌ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿನಿ ನೀತಿ ಕುಲಕರ್ಣಿ, ತಾಂತ್ರಿಕತೆ ಬಳಸಿಕೊಂಡು ನಿತ್ಯದ ಅಭ್ಯಾಸದ ಜತೆಗೆ ಹೊಸ ಉದ್ಯೋಗದ ದಾರಿಯನ್ನು ಸಹ ಕಂಡುಕೊಳ್ಳುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ತ್ರಿಡಿ ತಂತ್ರಜ್ಞಾನ ಬಳಕೆ:

ತ್ರಿಡಿ ತಂತ್ರಜ್ಞಾನ ಬಳಸಿಕೊಂಡ ಮದ್ರಾಸ್‌ ಐಐಟಿ ಸಂಶೋಧಕರು ಒಂದಿಡೀ ಕಟ್ಟಡವನ್ನೇ ನಿರ್ಮಿಸಿರುವುದನ್ನು ಪ್ರೇರಣೆಯಾಗಿ ಪಡೆದುಕೊಂಡ ನೀತಿ ಕುಲಕರ್ಣಿ, ಈ ಬಗ್ಗೆ ಗೂಗಲ್‌ ಹುಡುಕಾಟ ನಡೆಸಿ, ತ್ರಿಡಿ ತಂತ್ರಜ್ಞಾನದ ಮೂಲಕ ನಾನು ಸಹ ಏನಾದರೂ ಮಾಡಬೇಕೆಂದು ತ್ರಿಡಿ ಲ್ಯಾಂಪ್ಸ್‌ ಹಾಗೂ ಇತರೆ ಆಕರ್ಷಕ ವಸ್ತುಗಳನ್ನು ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾಳೆ.

ತ್ರಿಡಿ ಪ್ರಿಂಟರೊಂದನ್ನು ಖರೀದಿಸಿರುವ ನೀತಿ, ತನ್ನ ಮೊಬೈಲ್‌ನಲ್ಲಿ ಪಿಜಲ್‌ ಲ್ಯಾಬ್‌ ಹಾಗೂ ಲಿತೋಸೇನ್‌ ಸಿಯರ್‌ ಮೇಕರ್‌ ಎಂಬ ಆ್ಯಪ್‌ ಬಳಸಿಕೊಂಡು ಲ್ಯಾಂಪ್‌ ಅಥವಾ ಇನ್ನಾವುದೋ ವಸ್ತುವಿನ ಮೇಲೆ ಮುದ್ರಣ ಆಗುವ ಚಿತ್ರವನ್ನು ಸಂಯೋಜನೆ ಮಾಡಿ ಮುದ್ರಿಸುತ್ತಿದ್ದಾಳೆ. ಈಗಾಗಲೇ ಮೂನ್‌ ಲ್ಯಾಂಪ್‌ಗಳ ಮೇಲೆ ಅಧ್ಯಾತ್ಮ ಗುರುಗಳು, ಕ್ರೀಡಾ ತಾರೆಗಳು, ಸಿನಿಮಾ ತಾರೆ, ದಂಪತಿ ಸೇರಿದಂತೆ ವಿವಿಧ ಚಿತ್ರಗಳನ್ನು ಬೆಳಕಿನ ಸಂಯೋಜನೆಯೊಂದಿಗೆ ಮುದ್ರಿಸಲಾಗಿದೆ. ಜತೆಗೆ ಉಡುಗೊರೆ ಕೊಡಲು ಆಕರ್ಷಕ ಆಟಿಕೆ ವಸ್ತು, ಕೀ ಚೈನ್‌, ಲೋಗೋ, ಮೂರ್ತಿಗಳ ನಿರ್ಮಾಣ ಸಹ ಈ ತ್ರಿಡಿ ಪ್ರಿಂಟರ್‌ ಮೂಲಕ ನೀತಿ ಮಾಡುತ್ತಿದ್ದಾಳೆ.

ಹೊಸ ಕೌಶಲ್ಯ ಕಲಿತೆ:

₹ 18 ಸಾವಿರಕ್ಕೆ ತ್ರಿಡಿ ಪ್ರಿಂಟರ್‌ ಖರೀದಿಸಿದ್ದು, ಚಿತ್ರ, ಬೆಳಕಿನ ಸಂಯೋಜನೆ ಸಮೇತ ಒಂದು ಮೂನ್‌ ಲ್ಯಾಂಪ್‌ ತಯಾರಿಸಲು ₹ 35ರಿಂದ ₹ 400ರ ವರೆಗೆ ವೆಚ್ಚವಾಗುತ್ತಿದ್ದು, ₹ 750ರಿಂದ ₹ 960ರ ವರೆಗೆ ಮಾರಾಟ ಮಾಡುತ್ತಿದ್ದೇನೆ. ನಿತ್ಯದ ಅಭ್ಯಾಸದ ಜತೆಗೆ ಈ ಮೂಲಕ ಹೊಸ ತಾಂತ್ರಿಕ ಕೌಶಲ್ಯ ಕಲಿಯುತ್ತಿದ್ದೇನೆ. ಎಂಜಿನಿಯರಿಂಗ್‌ನಲ್ಲಿ ಕಲೀಬೇಕಾದ ಕ್ಯಾಡ್‌ ಸಾಫ್ಟವೇರ್‌ ಈಗಾಗಲೇ ಕಲಿತಿದ್ದೇನೆ. ಜತೆಗೆ ಮಾರುಕಟ್ಟೆ ಕೌಶಲ್ಯವೂ ಗೊತ್ತಾಗಿದೆ. ಶಾಲೆಯ ಶಿಕ್ಷಕರು ಅವರ ಸ್ನೇಹಿತರು, ಸಂಬಂಧಿಕರು ನಾನು ಸಿದ್ಧಪಡಿಸಿರುವ ಮೂನ್‌ ಲ್ಯಾಂಪ್‌ಗಳನ್ನು ಖರೀದಿಸುತ್ತಿದ್ದಾರೆ. ಆರು ತಿಂಗಳಿಂದ ಈ ಕಾರ್ಯ ಶುರು ಮಾಡಿದ್ದು, ಈ ವಸ್ತುಗಳಿಗೆ ತುಂಬ ಬೇಡಿಕೆ ಇದೆ ಎನ್ನುತ್ತಾಳೆ ನೀತಿ ಕುಲಕರ್ಣಿ.

ನೀತಿ ಕುಲಕರ್ಣಿಯ ಈ ಕಾರ್ಯಕ್ಕೆ ತಂದೆ ವಿನಾಯಕ ಹಾಗೂ ತಾಯಿ ಅಂಜಲಿ ಸಹಕರಿಸುತ್ತಿದ್ದು, ಮಗಳು ವಿಜ್ಞಾನ ಹಾಗೂ ತಂತ್ರಜ್ಞಾನದ ಜಗತ್ತಿಗೆ ಬರುವ ದಿನಗಳಲ್ಲಿ ಏನಾದರೂ ಕೊಡುಗೆ ನೀಡಲಿ ಎಂದು ಹಾರೈಸುತ್ತಾರೆ.ವಾಂಡ್‌ ತ್ರಿಡಿ ಸಲ್ಯೂಶನ್ಸ್‌

ನೀತಿ ಕುಲಕರ್ಣಿ ಬರೀ ತ್ರಿಡಿ ತಂತ್ರಜ್ಞಾನ ಬಳಸಿ ವಸ್ತುಗಳ ಸಿದ್ಧಪಡಿಸುವುದು ಮಾತ್ರವಲ್ಲದೇ ತನ್ನದೇ ಹೆಸರಿನಲ್ಲಿ ವಾಂಡ್‌ ತ್ರಿಡಿ ಸಲ್ಯೂಶನ್ಸ್‌ ಎಂಬ ಮಾರಾಟ ಜಾಲವನ್ನು ತಾನೇ ಮಾಡಿಕೊಂಡಿದ್ದಾಳೆ. ತಾನು ಸಿದ್ಧಪಡಿಸಿದ ತ್ರಿಡಿ ವಸ್ತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಕರ್ಷಕವಾಗಿ ಪ್ರದರ್ಶಿಸಿ ಮಾರಾಟ ಸಹ ಮಾಡುತ್ತಿರುವುದು ಶ್ಲಾಘನೀಯ.