ಮತ ಪ್ರಜಾಪ್ರಭುತ್ವದ ಶಕ್ತಿ: ತಪ್ಪದೇ ಮತದಾನ ಮಾಡಿ

| Published : Apr 05 2024, 01:04 AM IST

ಸಾರಾಂಶ

ಜಿಲ್ಲೆಯಲ್ಲಿರುವ ಎಲ್ಲ ಮತದಾರರು ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಶಕ್ತಿ, ಸಾಮರ್ಥ್ಯ ಹೆಚ್ಚಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಕರೆ ನೀಡಿದರು.

ದಾವಣಗೆರೆ: ಜಿಲ್ಲೆಯಲ್ಲಿರುವ ಎಲ್ಲ ಮತದಾರರು ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಶಕ್ತಿ, ಸಾಮರ್ಥ್ಯ ಹೆಚ್ಚಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಕರೆ ನೀಡಿದರು.

ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಗುರುವಾರ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಂದ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 16 ಲಕ್ಷ ಮತದಾರರಿದ್ದಾರೆ. 1693 ಮತಗಟ್ಟೆಗಳಿವೆ. 18 ವರ್ಷ ತುಂಬಿದ ಎಲ್ಲಾ ಮತದಾರರು ಮತದಾನ ಮಾಡಬೇಕು ಮತ್ತು ಎಲ್ಲರೂ ಪ್ರಜಾಪ್ರಭುತ್ವವನ್ನು ಬೆಳೆಸಬೇಕು. ಪ್ರತಿಯೊಬ್ಬರ ಮತದಾನ ಅತ್ಯಮೂಲ್ಯವಾದದ್ದು, ಮತದಾನದ ದಿನ ಎಲ್ಲ ಯುವಕ, ಯುವತಿಯರು ಇದೇ ಉತ್ಸಾಹದಲ್ಲಿ ತಪ್ಪದೇ ಮತದಾನ ಮಾಡಬೇಕು. ಮತದಾನ ಪ್ರತಿಯೊಬ್ಬರ ಹಕ್ಕು, ಇದನ್ನು ಚಲಾಯಿಸುವುದು ನಮ್ಮ ಕರ್ತವ್ಯ ಎಂದು ಮತದಾನ ಮಾಡಬೇಕು. ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು. ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ ಎಂದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್.ಬಿ.ಇಟ್ನಾಳ್ ಮಾತನಾಡಿ, ವಿವಿಧ ಬಣ್ಣ ಬಣ್ಣಗಳ ರಂಗೋಲಿಯಲ್ಲಿ ಮತದಾನದ ಸಂದೇಶವನ್ನು ನೀಡಿದ್ದಿರಿ, ಮತದಾರರು ಯಾವುದೇ ಅಮಿಷಗಳಿಗೆ ಒಳಗಾಗದೇ ತಮ್ಮ ಅಮೂಲ್ಯವಾದ ಮತದಾನವನ್ನು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕು. ಜಿಲ್ಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.72.96 ರಷ್ಟು ಮತದಾನವಾಗಿರುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.85ರಷ್ಟು ಗರಿಷ್ಟ ಪ್ರಮಾಣದ ಮತದಾನ ಆಗುವಂತೆ ಗುರಿ ಹೊಂದಲಾಗಿದೆ. ಆ್ಯಪ್ ಡೌನ್‌ಲೋಡ್ ಮಾಡಿದರೆ, ನೀವು ಮತ ಹಾಕುವ ವ್ಯಕ್ತಿಯ ವಿವರವನ್ನು ತಿಳಿಸುತ್ತದೆ. ಈ ಬಾರಿ ಮತದಾರರ ಚೀಟಿಯಲ್ಲಿ ಕ್ಯೂ ಆರ್ ಕೋಡ್‌ನ್ನು ಸಹ ನೀಡಲಾಗುತ್ತದೆ. ಅದರಲ್ಲಿ ನಿಮ್ಮದು ಯಾವ ಮತಗಟ್ಟೆ, ಮತಗಟ್ಟೆಗೆ ಹೋಗುವ ದಾರಿ ಇನ್ನೂ ಹೆಚ್ಚಿನ ವಿವರವನ್ನು ತಿಳಿಯಬಹುದು. ಮತದಾನ ದಿನ ಸಾರ್ವತ್ರಿಕ ರಜೆ ದಿನವಾಗಿರುತ್ತದೆ. ಆದ್ದರಿಂದ ಎಲ್ಲರೂ ತಪ್ಪದೇ ಬಂದು ಮತದಾನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಪಂ ಯೋಜನಾಧಿಕಾರಿ ಮಲ್ಲನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ, ಬಿಸಿಎಂ ಅಧಿಕಾರಿ ಗಾಯತ್ರಿ, ಪರಿಶಿಷ್ಟ ವರ್ಗಗಳ ಅಧಿಕಾರಿ ಬೇಬಿ ಸುನೀತಾ, ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಶಾರದ ದೊಡ್ಡಗೌಡ್ರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.