ಸಾರಾಂಶ
-ಗೊಬ್ಬೂರ ಕೆರೆಯಲ್ಲಿನ ಹೂಳಿನಿಂದ ನಿಲ್ಲದೆ ಹರಿಯುತ್ತಿದೆ ಜೀವ ಜಲ । ಕೆರೆ ಹೂಳಿನಿಂದಾಗಿ ಕಡಿಮೆಯಾಗುತ್ತಿರುವ ನೀರಿನ ಸಂಗ್ರಹ ಸಾಮರ್ಥ್ಯ
-----ರಾಹುಲ್ ಜೀ ದೊಡ್ಮನಿ
ಕನ್ನಡಪ್ರಭ ವಾರ್ತೆ ಚವಡಾಪುರಅಫಜಲ್ಪುರ ತಾಲೂಕಿನಯೇ ದೊಡ್ಡದಾಗಿರುವ ಗೊಬ್ಬೂರ ಕೆರೆಯ ಹೂಳೆತ್ತುವ ಕಾಮಗಾರಿಯಲ್ಲಿನ ಅವೈಜ್ಞಾನಿಕ ಪದ್ಧತಿ ಅಳವಡಿಕೆಯಿಂದ ನೀರು ಸಂಗ್ರಹವಾಗದೆ ವ್ಯರ್ಥ ಪೋಲಾಗುತ್ತಿದೆ. ಇದರಿಂದಾಗಿ ಈ ಮುಂಗಾರಿನ ನೀರು ಹಿಡಿದಿಟ್ಟುಕೊಳ್ಳುವುದು ಅಸಾಧ್ಯ ಎನ್ನುವಂತಾಗಿದೆ.
ಗೊಬ್ಬೂರ ಕೆರೆ 410 ಎಕರೆ ವಿಶಾಲ ಭೂಪ್ರದೇಶದಲ್ಲಿ ಹರಡಿಕೊಂಡಿದ್ದು 84.40 ಕ್ಯುಸೆಕ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. 1 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿದೆ.ಜೀವ ಜಲ: ಗೊಬ್ಬೂರ ಕೆರೆಯಲ್ಲಿ ಮುಂಗಾರು ಮಳೆಯ ಕಾರಣದಿಂದ ನೀರು ಸಂಗ್ರಹಗೊಳ್ಳುತ್ತಿದೆ. ಆದರೆ, ಕೆರೆಯಲ್ಲಿನ ಹೂಳಿನ ಸಮಸ್ಯೆಯಿಂದ ನೀರು ನಿಲ್ಲದೆ ಹರಿದು ಹೋಗುತ್ತಿದೆ. ಇದರಿಂದಾಗಿ ಕೆರೆಯಲ್ಲಿ ನೀರಿನ ಸಂಗ್ರಹಣೆ ಸಾಮರ್ಥ್ಯ ಕಡಿಮೆಯಾಗಿದೆ, ನೀರಿನ ಗುಣಮಟ್ಟದಲ್ಲಿ ಕುಸಿತ ಕಾಣುತ್ತಿದೆ, ಮೀನುಗಾರಿಕೆ ಮತ್ತು ಜಲಚರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲಿದೆ. ಕೃಷಿ ಉತ್ಪಾದನೆಯ ಮೇಲೂ ಕೆಟ್ಟ ಪರಿಣಾಮ ಬೀರಲಿದೆ, ವ್ಯಾಪಕ ಮಳೆಯಾದರೆ ನೆರೆ ಸಮಸ್ಯೆಯೂ ಉಂಟಾಗಲಿದೆ. ಮಳೆ ಕೊರತೆಯಾದರೆ ಅಂತರ್ಜಲ ವೃದ್ಧಿಗೂ ಕುತ್ತು ಬರಲಿದೆ.
ನರೇಗಾ ಶಾಪವಾಗಿದ್ದು ಹೇಗೆ?: ದೊಡ್ಡ ಕೆರೆಯಲ್ಲಿ ನೀರು ಹಿಡಿದು ನಿಲ್ಲಿಸಬೇಕೆನ್ನುವುದು ಪ್ರತಿಯೊಬ್ಬರ ಬಯಕೆಯಾಗಿದೆ. ಹೀಗಾಗಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಂದ ಕೆರೆಯಲ್ಲಿ ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಸಂಪೂರ್ಣವಾಗಿ ಕೆರೆಯ ಹೂಳೆತ್ತಿಸಿ ಹೂಳನ್ನು ಕೆರೆಯಿಂದ ಹೊರ ಹಾಕುವ ಕೆಲಸ ಮಾಡಿದ್ದರೆ ನಿಜಕ್ಕೂ ತಾಲೂಕಿನ ದೊಡ್ಡ ಕೆರೆಯಲ್ಲಿ ನೀರು ಭರ್ತಿಯಾಗಿ ಜಲಕ್ಷಾಮದ ಹೊಡೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿತ್ತು.ಆದರೆ, ವರವಾಗಬೇಕಿದ್ದ ನರೇಗಾ ಶಾಪವಾಗಿ ಪರಿಣಮಿಸಿದ್ದು, ಕಾಟಾಚಾರದ ಹೂಳೆತ್ತುವ ಕೆಲಸದಿಂದಾಗಿ ಕೆರೆಯಲ್ಲಿನ ಹೂಳು ಪುನಃ ಕೆರೆಯ ಪಾಲಾಗುವಂತಾಗಿದೆ. ನರೇಗಾದಡಿ ಹೂಳೆತ್ತುವ ಕೆಲಸಕ್ಕಾಗಿ ತೋಡಿದ ಗುಂಡಿಗಳು ಮತ್ತು ಗುಂಡಿ ತೋಡಿದ ಮಣ್ಣು ಗುಂಡಿಯ ಪಕ್ಕದಲ್ಲೇ ಹಾಕಿದ್ದಾರೆ. ಮಳೆ ಬಂದು ಎಲ್ಲಾ ಮಣ್ಣು ಮತ್ತೆ ಗುಂಡಿಗಳಲ್ಲಿ ಭರ್ತಿಯಾಗಿ ಪುನಃ ಕೆರೆಯಲ್ಲಿನ ಹೂಳು ಕೆರೆಯಲ್ಲೇ ಉಳಿಯುವಂತಾಗಿದೆ. ಹೀಗಾಗಿ ಹೂಳು ಹೊರತೆಗೆದು ವರವಾಗಬೇಕಿದ್ದ ನರೇಗಾ ಸಂಬಂಧ ಪಟ್ಟವರ ಬೇಜವಾಬ್ದಾರಿ, ನಿಷ್ಕಾಳಜಿಯ ಪರಿಣಾಮದಿಂದ ಶಾಪವಾಗಿ ಪರಿಣಮಿಸಿದೆ.
ಗಂಡಾಂತರ: ದೊಡ್ಡ ಕೆರೆಯಲ್ಲಿ ಹೆಚ್ಚು ನೀರು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಕೆರೆಯ ಹೂಳನ್ನು ಪ್ರತಿವರ್ಷ ನಿಯಮಿತವಾಗಿ ಹೊರತೆಗೆಯುವ ಕೆಲಸ ಮಾಡಬೇಕು. ಕೆರೆಯ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮರಗಳನ್ನು ನೆಟ್ಟು ಪೋಷಣೆ ಮಾಡಬೇಕು. ಕೆರೆಗೆ ಹೆಚ್ಚು ಮಣ್ಣು ಸೇರದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಇಲ್ಲವಾದರೆ ವರ್ಷದಿಂದ ವರ್ಷಕ್ಕೆ ಕೆರೆಯ ಹೂಳು ಹೆಚ್ಚುತ್ತಾ ಹೋಗಲಿದೆ, ಅಲ್ಲದೆ ನೀರಿನ ಸಂಗ್ರಹ ಸಾಮರ್ಥ್ಯ ಕುಸಿಯುತ್ತಾ ಹೋಗುವುದಲ್ಲದೆ ಭವಿಷ್ಯದಲ್ಲಿ ದೊಡ್ಡ ಜಲಗಂಡಾಂತರಕ್ಕೆ ಕಾರಣವಾಗಲಿದೆ.ಹೀಗಾಗಿ ಸಂಬಂಧ ಪಟ್ಟ ಇಲಾಖೆಯವರು, ಗ್ರಾಮ ಪಂಚಾಯಿತಿಯವರು, ಜನಪ್ರತಿನಿಧಿಗಳು ಎಚ್ಚೆತ್ತು ತಾಲೂಕಿನ ದೊಡ್ಡ ಕೆರೆಯ ರಕ್ಷಣೆಗೆ ಮುಂದಾಗಬೇಕಿದೆ.