ಸಾರಾಂಶ
ಬ್ಯಾಡಗಿ: ಶಿಕ್ಷಣದ ಚಕ್ರಗಳ ಮೇಲೆ ಪ್ರಸ್ತುತ ಜಗತ್ತು ನಡೆದಾಡುತ್ತಿದೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ನಮಗೆಲ್ಲರಿಗೂ ಶಿಕ್ಷಣದ ಅವಶ್ಯವಿದ್ದು, ಇದರಿಂದ ಜ್ಞಾನ ಮತ್ತು ಕ್ರಿಯಾತ್ಮಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬಹುದಾಗಿದೆ ಎಂದು ಆಡಳಿತಾಧಿಕಾರಿ ಹಾಗೂ ನಿವೃತ್ತ ಉಪನ್ಯಾಸಕ ಡಾ.ಪ್ರೇಮಾನಂದ ಲಕ್ಕಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಮೋಟೆಬೆನ್ನೂರಿನ ನವೋದಯ ವಿದ್ಯಾ ಸಂಸ್ಥೆಯ ವಿ.ಬಿ. ಕಳಸೂರಮಠ ಪ್ರೌಢಶಾಲೆಯು ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಅತೀ ಹೆಚ್ಚು ಅಂಕ ಪಡೆದ ತರುಣ ಹಿರೇಮಠ (ಜಿಲ್ಲೆಗೆ ದ್ವಿತೀಯ) ಸೇರಿದಂತೆ ಸ್ವಾತಿ ಉಪ್ಪಾರ, ಉದಯ ಶಿಗ್ಗಾಂವಿ ಇವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಕುರಿತು ಮಾತನಾಡಿದರು.ಶ್ರೇಷ್ಠ ನಾಗರಿಕನಾಗಲು ಶಿಕ್ಷಣ:ಶಿಕ್ಷಣವು ವಿದ್ಯಾರ್ಥಿ ಜೀವನದಲ್ಲಿ ಅತ್ಯುನ್ನತ ಸಾಮರ್ಥ್ಯವನ್ನು ತಲುಪಲು ದಾರಿ ನೀಡಲಿದೆ, ವಿದ್ಯಾವಂತ ವ್ಯಕ್ತಿ ಸಮಾಜದಲ್ಲಿ ಶ್ರೇಷ್ಠ ನಾಗರಿಕನಾಗಬಹುದಲ್ಲದೇ ತನ್ನದೇ ಬದುಕಿನಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕರಿಸಲಿದೆ, ನಾವು ಜೀವನದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡುವಾಗ ಶಿಕ್ಷಣ ಎಂದರೇನು..? ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದರು.
ವೃತ್ತಿಪರ ಕೆಲಸಗಳತ್ತ ಮುಖ: ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಬೆನ್ನಲ್ಲೇ ಬಹಳಷ್ಟು ಯುವಕ/ಯುವತಿಯರು ಒಂದು ಹಂತದ ಶಿಕ್ಷಣವನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ, ಸರ್ಕಾರಿ ಕೆಲಸಗಳ ಭರವಸೆ ಇಲ್ಲದೇ ಅವರ ಬದುಕಿನ ಭದ್ರತೆ ಕ್ಷೀಣಿಸುತ್ತಿದ್ದು ಇದಕ್ಕಾಗಿ ವೃತ್ತಿಪರ ಕೆಲಸಗಳಿಗೆ ಮೊರೆ ಹೋಗುತ್ತಿದ್ದಾರೆ. ಬದುಕಿನ ನಿರ್ವಹಣೆಗೆ ಯಾವುದೇ ಉದ್ಯೋಗ ಪಡೆದರೂ ಪರವಾಗಿಲ್ಲ ಆದರೆ ಸರಿಯಾದ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸಲಹೆ ನೀಡಿದರು.12 ಬಾರಿ ಶೇ.100 ರಷ್ಟು:ಕೋಶಾದ್ಯಕ್ಷ ಅಶೋಕ ಬಣಕಾರ ಮಾತನಾಡಿ, ಸನ್ 2006 ರಲ್ಲಿ ಪ್ರಾರಂಭವಾದ ನಮ್ಮ ಸಂಸ್ಥೆಯು, ಪ್ರಸಕ್ತ ವರ್ಷವೂ ಸೇರಿದಂತೆ ಇಲ್ಲಿಯವರೆಗೆ 12 ಬಾರಿ ಶೇ.100 ಫಲಿತಾಂಶ ಪಡೆದುಕೊಂಡಿದೆ ಎಂದರು. ಈ ಸಂದರ್ಭದಲ್ಲಿ ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಸಿ. ಹಾವೇರಿಮಠ, ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಆಡಳಿತ ಮಂಡಳಿ ಸದಸ್ಯರಾದ ವಸಂತ ಕನ್ನಮ್ಮನವರ, ಸಚಿನ್ ರುದ್ರದೇವರಮಠ, ವಿ. ಸಿ. ಹಾವೇರಿಮಠ ವೋದಯ ವಿದ್ಯಾಸಂಸ್ಥೆಯ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.