ಸಾರಾಂಶ
ಸಿದ್ದು ಚಿಕ್ಕಬಳ್ಳೇಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ನೆರೆ ರಾಜ್ಯಗಳ ಮದ್ಯದ ಬೆಲೆಗೆ ಅನುಗುಣವಾಗಿ ಐಎಂಎಲ್ ಹಾಗೂ ಬಿಯರ್‌ಗಳ ಬೆಲೆಗಳನ್ನು ಪರಿಷ್ಕರಿಸುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದರಿಂದ ಶೀಘ್ರದಲ್ಲೇ ‘ಬಡವರು’ ಸೇವಿಸುವ ಮದ್ಯಗಳ ಬೆಲೆ ದುಬಾರಿಯಾಗುವ ಸಾಧ್ಯತೆಯಿದೆ.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಲವು ಸ್ಲ್ಯಾಬ್‌ಗಳ ಬಹಳಷ್ಟು ಮದ್ಯಗಳ ಬೆಲೆ ಕಡಿಮೆ ಇದೆ.
ಬೇರೆ ರಾಜ್ಯಗಳ ಮದ್ಯಗಳ ಸರಾಸರಿ ಬೆಲೆಯನ್ನು ಪರಿಗಣಿಸಿ ನಮ್ಮಲ್ಲಿ ಯಾವ್ಯಾವ ಸ್ಲ್ಯಾಬ್‌ಗಳ ಮದ್ಯದ ಬೆಲೆ ಕಡಿಮೆ ಇದೆಯೋ ಅಂತವುಗಳ ಬೆಲೆ ಹೆಚ್ಚಳದ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಈ ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.16 ರಂದು ಮಂಡಿಸಿದ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯಲ್ಲಿ ಕಳೆದ ಸಾಲಿಗಿಂತ 2,525 ಕೋಟಿ ರು.
ಅಧಿಕ ರಾಜಸ್ವ ಸಂಗ್ರಹಣೆ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದರು. 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ರು.
ರಾಜಸ್ವ ಸಂಗ್ರಹ ಗುರಿ ಇದ್ದು, 2024-25ನೇ ಸಾಲಿನಲ್ಲಿ 38,252 ಕೋಟಿ ರು.ರಾಜಸ್ವ ಸಂಗ್ರಹಣೆ ಗುರಿ ನೀಡಲಾಗಿದೆ. ಈ ಹೆಚ್ಚಳವು ಬೆಲೆ ಅಧಿಕವಾಗುವುದರಿಂದಲೇ ಸಂಗ್ರವಾಗಲಿದೆ.
ಒಟ್ಟಾರೆ, 180 ಎಂಎಲ್ ಬಾಟಲ್‌ಗಳನ್ನು ಪರಿಗಣನೆಗೆ ತೆಗೆದುಕೊಂಡು ಲೆಕ್ಕಾಚಾರ ಹಾಕುವುದಾದರೆ 63.14 ರುಪಾಯಿಯ ಮೊದಲನೇ ಸ್ಲ್ಯಾಬ್‌ನ ಮದ್ಯಗಳ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ.
ತಿಂಗಳಿಗೆ ಸುಮಾರು 4 ಲಕ್ಷ ಕೇಸ್ (ಒಂದು ಕೇಸ್‌ನಲ್ಲಿ 180 ಎಂಎಲ್‌ನ 48 ಬಾಟಲ್) ಮದ್ಯ ಈ ಸ್ಲ್ಯಾಬ್‌ನಲ್ಲಿ ಮಾರಾಟವಾಗುತ್ತಿದೆ.ಎರಡನೇ ಸ್ಲ್ಯಾಬ್‌ನಲ್ಲಿ ಬರುವ 80 ರುಪಾಯಿಯ ಬ್ರಾಂಡ್‌ಗಳ ಮದ್ಯಗಳು ತಿಂಗಳಿಗೆ ಸುಮಾರು 31 ಲಕ್ಷ ಕೇಸ್ ಮಾರಾಟವಾಗುತ್ತಿದ್ದು, ತಲಾ 5 ರು. ಹೆಚ್ಚಳವಾಗಲಿದೆ.
ಮೂರನೇ ಸ್ಲ್ಯಾಬ್‌ನ ಮದ್ಯದ ದರ 99.50 ರು.ಇದ್ದು ಇದನ್ನು 105 ರುಪಾಯಿಗೆ ಹೆಚ್ಚಿಸಬಹುದು. ಈ ಸ್ಲ್ಯಾಬ್‌ನ ಮದ್ಯ ತಿಂಗಳಿಗೆ ಸರಾಸರಿ 6.5 ಲಕ್ಷ ಕೇಸ್ ಮಾರಾಟವಾಗುತ್ತದೆ.
4ನೇ ಸ್ಲ್ಯಾಬ್‌ನ ಮದ್ಯವು 122.50 ರು. ಇದ್ದು ಇದನ್ನು 130 ರುಪಾಯಿಗೆ ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ.ನೆರೆ ರಾಜ್ಯಗಳಲ್ಲಿ ದುಬಾರಿ ಬೆಲೆಯ ಮದ್ಯಗಳಿಗೆ ಕರ್ನಾಟಕಕ್ಕಿಂತಲೂ ಕಡಿಮೆ ಬೆಲೆ ಇದೆ.
ಆದ್ದರಿಂದ ಹಂಡ್ರೆಡ್ ಪೈಪರ್, ಬ್ಲ್ಯಾಕ್ ಲೇಬಲ್, ಚಿವಾಸ್ ರೀಗಲ್, ದಿ ಗ್ಲೆನ್ ಲಿವಿಟ್ ಮತ್ತಿತರ ಮದ್ಯಗಳ ಬೆಲೆ ಸ್ಚಲ್ಪ ಇಳಿಕೆಯಾಗಲಿದೆ.
ರಾಜಸ್ವ ಸಂಗ್ರಹದ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಆಗಿರುವುದರಿಂದ ನೆರೆ ರಾಜ್ಯಗಳ ಬೆಲೆ ಪಟ್ಟಿ ತರಿಸಿಕೊಂಡು ಸರಾಸರಿಯಂತೆ ಹೊಸದಾಗಿ ಬೆಲೆ ನಿಗದಿ ಮಾಡಬೇಕಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.