ಊಟದ ತಟ್ಟೆಗೆ ಭಾರವಾದ ಅಕ್ಕಡಿ ಕಾಳುಗಳ ಬೆಲೆ!

| Published : Jul 03 2024, 12:24 AM IST

ಸಾರಾಂಶ

ರಾಜಕೋಟ್‌ದಿಂದ ನಿತ್ಯ 15 ಲಾರಿ ಗೋಧಿ ಬರುತ್ತಿದೆ. ಮಹಾರಾಷ್ಟ್ರದ ಬಾರ್ಸಿಯಿಂದ ಬಿಳಿಜೋಳ ಆಗಮಿಸುತ್ತಿದ್ದು, ವಿಜಯಪುರ ಜೋಳದಂತೆ ಇದು ಹೆಸರುವಾಸಿಯಾಗಿದ್ದು, ನಾನಾ ತರಹದ ಜೋಳದಲ್ಲಿಯೇ ಕಿಲೋಗೆ 60 ವರೆಗೂ ಮಾರಾಟವಾಗುತ್ತಿದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ತಪ್ಪಲು ಪಲ್ಲೆ ಸೇರಿದಂತೆ ಕಾಯಿಪಲ್ಲೆ ಬೆಲೆ ಹೆಚ್ಚಳ ಬೆನ್ನಲ್ಲೇ ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ಗೋದಿ, ಅಕ್ಕಡಿಕಾಳುಗಳ ಬೆಲೆ ಏರುಮುಖವಾಗಿದ್ದು, ವಿಶೇಷವಾಗಿ ತೊಗರಿಬೇಳೆ ಬೆಲೆ ಕೇಳಿ ಮನೆ ನೊಗ ಹೊತ್ತಿರುವ ಮಹಿಳೆಯರು ಹೌಹಾರುತ್ತಿದ್ದಾರೆ!

ನಾಲ್ಕೈದು ಜನರಿರುವ ಕುಟುಂಬವೊಂದಕ್ಕೆ ತಿಂಗಳ ಲೆಕ್ಕದಲ್ಲಿ ಜೋಳ, ಗೋದಿ, ಅಕ್ಕಿ, ಹೆಸರು ಕಾಳು, ಮಡಕಿ ಕಾಳು, ತೊಗರಿಬೇಳೆ, ಉದ್ದಿನಬೇಳೆ, ಹೀಗೆ ನಾನಾ ಬಗೆಯ ಆಹಾರಧಾನ್ಯಗಳು ಬೇಕೆ ಬೇಕು, ಅಕ್ಕಿ, ಜೋಳ, ಉತ್ತಮ ಗುಣಮಟ್ಟದ ಗೋದಿ ಕಿಲೋಗೆ ₹50 ದಾಟಿ ಸಾಗಿರುವುದು ಹಾಗೂ ಅಕ್ಕಡಿಕಾಳುಗಳು ₹85ರಿಂದ 175ರ ವರೆಗೆ ತಲುಪಿರುವುದು ಮಾರುಕಟ್ಟೆಯಲ್ಲಿ ಗ್ರಾಹಕರು ಪರಿತಪಿಸುವಂತಾಗಿದೆ.

ತೊಗರಿಬೇಳೆ ₹175:

ಹುಬ್ಬಳ್ಳಿ (ಅಮರಗೋಳ) ಎಪಿಎಂಸಿಯಲ್ಲಿರುವ ಆಹಾರಧಾನ್ಯ ಅಂಗಡಿಗಳಲ್ಲಿ ಜೋಳ, ಗೋದಿ, ಅಕ್ಕಿ, ಕಾಳುಕಡಿ ಹೋಲ್‌ಸೇಲ್‌ ವ್ಯಾಪಾರಸ್ಥರು ಬೆಲೆ ಹೆಚ್ಚಳವಾಗಿಲ್ಲ ಎಂದು ಹೇಳುತ್ತಾರೆ. ಆದರೆ, ಚಿಲ್ಲರೇ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ತೊಗರಿಬೇಳೆ ಕಿಲೋಗೆ ರು. 175ಕ್ಕೆ ಮಾರಾಟವಾಗುತ್ತಿದ್ದು, ಉದ್ದಿನಬೇಳೆ 140, ವಠಾಣಿ 140 ಮಾರಾಟವಾಗುತ್ತಿದ್ದು, ದರ ಕಡಿಮೆ ಆಯಿತೇ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ಗೋದಿ ಸಗಟು ವ್ಯಾಪಾರದಲ್ಲಿ ₹34ರಿಂದ 35 ಗೆ ಮಾರಾಟವಾಗಿದ್ದು, ಈ ಬಾರಿ ₹38ರಿಂದ 41.ಗೆ ಕಿಲೋ ಮಾರಾಟವಾಗುತ್ತಿದೆ. ಕಳೆದ ವರ್ಷ ₹80ರಿಂದ 90 ವರೆಗೂ ಮಾರಾಟವಾಗಿದ್ದ ಜೋಳ ಈ ಬಾರಿ ₹60 ವರೆಗೆ ಮಾರಾಟವಾಗಿದ್ದು, ಬೆಲೆ ಇಳಿದಿರುವುದು ವಿಶೇಷ ಎನ್ನುತ್ತಾರೆ ವ್ಯಾಪಾರಸ್ಥರು.

ಬರದ ಹಿನ್ನೆಲೆಯಲ್ಲಿ ಗ್ರಾಮೀಣರ ಮನೆಮನೆಗಳಲ್ಲೂ ಹೇರಳವಾಗಿರುತ್ತಿದ್ದ ಅಕ್ಕಡಿಕಾಳುಗಳು ಖಾಲಿಯಾಗಿವೆ. ಹೀಗಾಗಿ ನಗರವಾಸಿಗಳಂತೆ ಗ್ರಾಮೀಣರು ಈಗ ಹೆಸರು, ಮಡಕಿ, ವಟಾಣಿ ಕೊಂಡುಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಜೋಳ ₹60 ಕಿಲೋ:

ರಾಜಕೋಟ್‌ದಿಂದ ನಿತ್ಯ 15 ಲಾರಿ ಗೋಧಿ ಬರುತ್ತಿದೆ. ಮಹಾರಾಷ್ಟ್ರದ ಬಾರ್ಸಿಯಿಂದ ಬಿಳಿಜೋಳ ಆಗಮಿಸುತ್ತಿದ್ದು, ವಿಜಯಪುರ ಜೋಳದಂತೆ ಇದು ಹೆಸರುವಾಸಿಯಾಗಿದ್ದು, ನಾನಾ ತರಹದ ಜೋಳದಲ್ಲಿಯೇ ಕಿಲೋಗೆ ₹60 ವರೆಗೂ ಮಾರಾಟವಾಗುತ್ತಿದೆ.

ಕಲಬುರಗಿಯಿಂದ ತೊಗರಿಬೇಳೆ, ಮಧ್ಯಪ್ರದೇಶದಿಂದ ಹೆಸರುಕಾಳು, ರಾಜಸ್ಥಾನದಿಂದ ಮಡಕಿ ಕಾಳು ಆಗಮಿಸುತ್ತಿದ್ದು, ಬರದಲ್ಲೂ ಗ್ರಾಹಕರ ಬೇಡಿಕೆಯನ್ನು ವ್ಯಾಪಾರಸ್ಥರು ಈಡೇರಿಸುತ್ತಿದ್ದಾರೆ.

ಎಪಿಎಂಸಿಯ ಅಂಗಡಿಗಳಲ್ಲಿ ಸಗಟುದರದಲ್ಲಿ ದವಸ ಧಾನ್ಯಗಳು ಸಿಗುತ್ತಿದ್ದು, ಗ್ರಾಹಕರು ಪ್ಯಾಕೇಟ್‌ ಲೆಕ್ಕದಲ್ಲಿಯೇ ಖರೀದಿಸಬೇಕು. ಅಕ್ಕಿ ಪ್ಯಾಕೆಟ್‌ 26 ಕಿಲೋ, ಜೋಳ, ಗೋಧಿ, ಅಕ್ಕಡಿಕಾಳುಗಳು 30 ಕಿಲೋ ಪ್ಯಾಕೆಟ್‌ ಲೆಕ್ಕದಲ್ಲಿ ಮಾರಾಟವಾಗುತ್ತವೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಕಿಲೋ ಲೆಕ್ಕದಲ್ಲಿ ಜೀರಾ ರೈಸ್‌ ರು. 68, ಜೀರಾ ರಾ ರೈಸ್‌ 78, ಅಲಸಂದಿ ರೆಡ್‌-120 ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲೇ ಕೆಲ ಅಂಗಡಿಗಳಲ್ಲಿ ಕಡಿಮೆ ಗುಣ (ಮಟ್ಟದ ದವಸ ಧಾನ್ಯಗಳು ಇದಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ.

ನಮ್ಮಲ್ಲಿ ಈಗಿರುವ ಸ್ಟಾಕ್‌ ಅಕ್ಕಿಯನ್ನೇ ಮಾರಾಟ ಮಾಡುತ್ತಿದ್ದು, ರಾಜ್ಯ ಸರ್ಕಾರ ಡೀಸೆಲ್‌, ಪೆಟ್ರೋಲ್‌ ಬೆಲೆ ಹೆಚ್ಚಳ ಮಾಡಿದ್ದರೂ ತಕ್ಷಣ ಸಾರಿಗೆ ವೆಚ್ಚದ ಮೇಲೆ ಬೆಲೆ ಏರಿಕೆ ಬಿಸಿ ತಟ್ಟಿಲ್ಲ. ಮುಂದೆ ಬೆಲೆ ಹೆಚ್ಚಳದ ಬಿಸಿ ತಟ್ಟಬಹುದು ಎಂದು ಅಕ್ಕಿ ಮಾರಾಟ ಅಂಗಡಿ ಕಾರಕೂನ ಶಂಕರ ಬಾಗೇವಾಡಿ ಹೇಳಿದರು.

ಕಾಯಿಪಲ್ಲೆ ಬೆಲೆ ಹೆಚ್ಚಳದ ಹೊರೆ ತಗ್ಗಿಸಲು ಅಕ್ಕಡಿಕಾಳು ಕೊಳ್ಳಲು ಹೋದರೆ ಇಲ್ಲೂ ಬೆಲೆ ಹೆಚ್ಚಳದಿಂದಾಗಿ ಮನೆ ನಿ‍ಭಾಯಿಸುವುದೇ ಕಷ್ಟವಾಗಿದೆ. ತೊಗರಿಬೇಳೆ, ಉದ್ದಿನಬೇಳೆ ಹೀಗೆ ಕಾಳುಗಳು ಒಂದೊಂದು ಅಂಗಡಿಯಲ್ಲಿ ದರ ಇದ್ದು, ಕಡಿವಾಣ ಹಾಕುವವರೇ ಇಲ್ಲದಂತಾಗಿದೆ ಎಂದು ಸುರೇಖಾ ಪೂಜಾರ ಹೇಳಿದರು.