ರೈತರ ದುಡಿಮೆಯಿಂದ ಬೆಳೆದ ಅನ್ನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ರೈತರು ಉಳಿದರೆ ಮಾತ್ರ ದೇಶ, ಜಗತ್ತು ಉಳಿಯುತ್ತದೆ ಎಂದು ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತರ ದುಡಿಮೆಯಿಂದ ಬೆಳೆದ ಅನ್ನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ರೈತರು ಉಳಿದರೆ ಮಾತ್ರ ದೇಶ, ಜಗತ್ತು ಉಳಿಯುತ್ತದೆ ಎಂದು ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ವರನಟ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ರಾಜ್ಯ ರೈತ ಸಂಘಟನೆ ಗಳ ಒಕ್ಕೂಟ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ, ರಾಜ್ಯಮಟ್ಟದ ರೈತ ಚಿಂತನಾ ಸಮಾವೇಶದಲ್ಲಿ ಮಾತನಾಡಿದರು.

ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ. ಇಂದಿನ ಆಹಾರ ಪದ್ದತಿಯಲ್ಲಿ ವಿಷಕಾರಿ ಅಂಶಗಳು ದೇಹ ಸೇರುತ್ತಿದೆ. ಬೆಳೆಗೆ ರೋಗಗಳು ಹರಡಿದಾಗ ಬೆಳೆಯು ರೋಗಮುಕ್ತರಾಗಲ ಹೆಚ್ಚು ರಸಾಯನಿಕ ಔಷಧಗಳನ್ನು ಸಿಂಪಡಣೆ ಮಾಡುವ ಜೊತೆಗೆ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದರಿದ ಆಹಾರ ಪದಾರ್ಥಗಳಲ್ಲಿ ವಿಷಕಾರಿ ಅಂಶಗಳು ಬೆರೆತು ನಾವು ಸೇವನೆ ಮಾಡುವ ಆಹಾರದ ಜೊತೆಗೆ ವಿಷವು ದೇಹ ಸೇರುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ರೈತರು ಬೆಳೆದ ಪದಾರ್ಥಗಳಿಂದ ಬೆಂಬಲ ಬೆಲೆ ಸಿಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿ ರೈತ ಪರ ಕಾರ್ಯಕ್ರಮ ಗಳನ್ನು ಜಾರಿ ಮಾಡಬೇಕು ಎಂದರು.

ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಒಡನಾಟದಲ್ಲಿ ಬೆಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ನಗೆ ರೈತರ ಕಷ್ಟಗಳು ಗೊತ್ತು, ಆದ್ದರಿಂದಲೇ ಹೈನುಗಾರಿಕೆ ಉತ್ತೇಜಿಸಿ, ಹೆಚ್ಚು ಪ್ರೊತ್ಸಾಹ ಧನ ನೀಡಿದ್ದಾರೆ , ಅನೇಕ ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ರೈತರು ಸುಖಾಸುಮ್ಮನೆ ಬೀದಿಗಿಳಿಯುವ ಬದಲು ತಮ್ಮ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ರೈತ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕಿವಿಮಾತು ಹೇಳಿದರು.

ಹಾಲಿಗೆ ಸಕ್ಕರೆ, ಯೂರಿಯಾ ಸೇರಿದಂತೆ ಇತರೆ ರಾಸಾಯನಿಕಗಳನ್ನು ಬೆರೆಸುವ ಆರೋಪ ಕೇಳಿ ಬರುತ್ತಿದ್ದು ರೈತರು ಕಲಬೆರಕೆ ನಿಲ್ಲಿಸಿ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ಸಚಿವ ಕೆ.ವೆಂಕಟೇಶ್ ಸಲಹೆ ನೀಡಿದರು.

ಯೂರಿಯಾ ಸೇರಿದಂತೆ ಇತರೆ ವಸ್ತುಗಳನ್ನು ಕಲಬೆರಕೆ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸರ್ಕಾರವು ಹಾಲಿಗೆ ೫ ರು. ಸಬ್ಸಿಡಿ ನೀಡುತ್ತಿದೆ. ಹಾಲನ್ನು ನಿಮ್ಮ ಮಕ್ಕಳಂತೆ ಬೇರೆ ಮಕ್ಕಳು ಕುಡಿಯುತ್ತಾರೆ. ಆದ್ದರಿಂದ ರೈತರು ಹಾಲಿಗೆ ಕಲಬೆರಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅನ್ನದಾತ ರೈತ ಸ್ಮರಣ ಸಂಚಿಕೆಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಎ.ಆರ್‌.ಕೃಷ್ಣಮೂರ್ತಿ, ಎಂಎಲ್‌ಸಿ ಕೆ. ಶಿವಕುಮಾರ್, ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್ ಎಸ್.ಆಲೂರ್, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮುತ್ತುರಾಜ್, ವಿಶ್ವ ರೈತ ದಿನಾಚರಣೆ ಸಮಿತಿ ಗೌರವಾಧ್ಯಕ್ಷ ಪ್ರೊ.ಎಸ್.ಶಿವರಾಜಪ್ಪ, ತಮಿಳುನಾಡು ರೈತ ಸಂಘದ ರಾಜ್ಯಾಧ್ಯಕ್ಷ ಕುಮಾರ ರವಿಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣರೆಡ್ಡಿ, ರೈತ ಮುಖಂಡರಾದ ತೇಜಸ್ವಿ ಪಟೇಲ್, ಗಣೇಶ್ ಇಳಗೇರಿ, ಕೃಷ್ಣಗೌಡ, ಅನ್ವರ್, ಬಿಜೆಪಿ ಮುಖಂಡ ನಿಶಾಂತ್ ಸೇರಿದಂತೆ ಇತರರಿದ್ದರು.