ಹುಣಸೆ ಹಣ್ಣಿನ ದರ ಕಡಿಮೆ, ಸಂಕಷ್ಟದಲ್ಲಿ ವ್ಯಾಪಾರಿಗಳು

| Published : May 12 2024, 01:25 AM IST / Updated: May 12 2024, 12:20 PM IST

ಸಾರಾಂಶ

ಪ್ರಸ್ತುತ ವರ್ಷ ಹುಣಸೆ ಹಣ್ಣಿನ ಇಳುವರಿ ಕುಂಠಿತಗೊಂಡಿದ್ದು, ಅದರ ಜತೆಗೆ ಧಾರಣೆ ಸಹಿತ ಕುಸಿದಿದೆ. ಸೂಕ್ತ ಮಾರುಕಟ್ಟೆಯ ವ್ಯವಸ್ಥೆಯೂ ಇಲ್ಲ. ಹೀಗಾಗಿ ಇರುವ ಹುಣಸೆಹಣ್ಣನ್ನು ಶೇಖರಣೆ ಮಾಡಿಡುವ ಸ್ಥಿತಿ ಒದಗಿ ಬಂದಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಪ್ರಸ್ತುತ ವರ್ಷ ಹುಣಸೆ ಹಣ್ಣಿನ ಇಳುವರಿ ಕುಂಠಿತಗೊಂಡಿದ್ದು, ಅದರ ಜತೆಗೆ ಧಾರಣೆ ಸಹಿತ ಕುಸಿದಿದೆ. ಇದು ಹುಣಸೆ ಮರಗಳನ್ನು ಗುತ್ತಿಗೆ ಪಡೆದಿರುವ ವ್ಯಾಪಾರಿಗಳನ್ನು ಕಂಗೆಡಿಸಿದೆ.

ಕುಷ್ಟಗಿ ಪಟ್ಟಣ, ತಾಲೂಕಿನ ದೋಟಿಹಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಭಜಂತ್ರಿಯ ಸಮುದಾಯದವರು ಹುಣಸೆ ಮರಗಳನ್ನು ಗುತ್ತಿಗೆ ಪಡೆದುಕೊಳ್ಳುತ್ತಾರೆ. ಅವರಿಗೆ ಅದೇ ಆದಾಯದ ಮೂಲ. ಹುಣಸೆಹಣ್ಣು ಸಂಸ್ಕರಣೆ ಮಾಡಿ, ಮಾರಾಟ ಮಾಡುತ್ತಾರೆ. ಈಗ ಮಳೆಯ ಕೊರತೆಯ ಕಾರಣ ಇಳುವರಿ ಕುಸಿದಿದೆ. ದರವೂ ಕಡಿಮೆಯಾಗಿದೆ. ಸೂಕ್ತ ಮಾರುಕಟ್ಟೆಯ ವ್ಯವಸ್ಥೆಯೂ ಇಲ್ಲ. ಹೀಗಾಗಿ ಇರುವ ಹುಣಸೆಹಣ್ಣನ್ನು ಶೇಖರಣೆ ಮಾಡಿಡುವ ಸ್ಥಿತಿ ಒದಗಿ ಬಂದಿದೆ.

ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಣಸೆ ಮರಗಳು ಇರುವುದರಿಂದ ಪ್ರತಿವರ್ಷ ಲಕ್ಷಾಂತರ ರುಪಾಯಿ ವಹಿವಾಟು ನಡೆಯುತ್ತದೆ. ಬೇಸಿಗೆಯಲ್ಲಂತೂ ಹುಣಸೆಗೆ ಪರ್ವ ಕಾಲವಿದ್ದಂತೆ.

ಹುಣಸೆ ಮರಗಳು ಹೂವು, ಹೀಚು ಬೀಡುವ ಸಂದರ್ಭದಲ್ಲಿ ಮರದ ಇಳುವರಿ ಪ್ರಮಾಣಕ್ಕೆ ಅನುಸಾರವಾಗಿ ಗುತ್ತಿಗೆ ಪಡೆಯುತ್ತಾರೆ. ಕಾಯಿ, ಹಣ್ಣಾಗಿ ಮಾಗಿದ ಬಳಿಕ ಹರಿದು, ಬೀಜಗಳನ್ನು ಬೇರ್ಪಡಿಸಿ, ಹುಣಸೆ ಹಣ್ಣನ್ನು ಪೆಂಡಿಗಳನ್ನು ತಯಾರಿಸಿ ಬಳ್ಳಾರಿ, ರಾಯಚೂರು, ಕಲಬುರ್ಗಿ, ಬೆಳಗಾವಿ, ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ, ಮೀರಜ್ ಹಾಗೂ ಆಂಧ್ರ ಪ್ರದೇಶದ ಹಲವು ನಗರಗಳಿಗೆ ತಾವೇ ತೆಗೆದುಕೊಂಡು ಹೋಗಿ ಮಾರುತ್ತಾರೆ ಅಥವಾ ಏಜೆಂಟರ ಮೂಲಕ ಕಳುಹಿಸಿಕೊಡುತ್ತಾರೆ. ದರ ಕಡಿಮೆ ಇರುವ ಸಮಯದಲ್ಲಿ ಶೀತಲೀಕರಣ ಘಟಕದಲ್ಲಿ ಸಂಗ್ರಹಿಸಿಡುತ್ತಾರೆ.

ಒಂದು ತಿಂಗಳ ಹಿಂದೆ ಪ್ರತಿ ಕ್ವಿಂಟಲ್‌ಗೆ ಸುಮಾರು ₹ 8 ಸಾವಿರ ಬೆಲೆ ಇತ್ತು. ಈಗ ₹5 ಸಾವಿರಕ್ಕೆ ಇಳಿಕೆಯಾಗಿದೆ. ಮರದಿಂದ ಹಣ್ಣು ಕೀಳಲು ಒಬ್ಬ ಕೂಲಿಯಾಳುಗೆ ₹500 ನೀಡಬೇಕು. ಮರದಿಂದ ಕೆಳಗೆ ಬಿದ್ದ ಹಣ್ಣನ್ನು ಸಂಗ್ರಹಿಸುವವರಿಗೆ ₹250 ಕೊಡಬೇಕು. ಹಣ್ಣಿನಿಂದ ಬೀಜ, ನಾರು ಬೇರ್ಪಡಿಸಲು ಕೆಜಿಗೆ ₹15 ನೀಡಬೇಕು. ಇದರ ಜತೆಗೆ ಬೆಳಗ್ಗಿನ ಉಪಾಹಾರ, ಚಹಾ ಇತರ ಖರ್ಚು ನೋಡಿಕೊಳ್ಳಬೇಕು ಎಂದು ಹುಣಸೆ ಹಣ್ಣಿನ ಗುತ್ತಿಗೆದಾರರು ಹೇಳುತ್ತಾರೆ.

ಎಲ್ಲ ವೆಚ್ಚ ಸೇರಿ ಪ್ರತಿ ಕ್ವಿಂಟಲ್ ಹಣ್ಣನ್ನು ಮಾರುಕಟ್ಟೆಗೆ ಸಾಗಿಸುವ ವೇಳೆಗೆ ₹5 ಸಾವಿರಕ್ಕೂ ಹೆಚ್ಚು ವೆಚ್ಚವಾಗುತ್ತದೆ. ಇದೆಲ್ಲವನ್ನು ಸರಿದೂಗಿಸಿಕೊಂಡು ಆದಾಯ ಮಾಡಿಕೊಳ್ಳಬೇಕು. ಅಲ್ಲದೆ, ವರ್ಷದ ಮುಂಚೆಯೇ ಮುಂಗಡ ನೀಡಿ ಮರಗಳನ್ನು ಗುತ್ತಿಗೆ ಪಡೆದಿರುವ ಕೆಲವು ಗುತ್ತಿಗೆದಾರರು ಕೂಲಿ ಕಾರ್ಮಿಕರ ಕೊರತೆಯಿಂದ ಮರಗಳಲ್ಲಿನ ಹಣ್ಣನ್ನು ಬಿಡಿಸುವ ಗೋಜಿಗೆ ಹೋಗಿಲ್ಲ. ಕೆಲವು ರೈತರು ಸಹ ಅವುಗಳನ್ನು ಬಿಡಿಸಲು ಸಾಧ್ಯವಾಗದೆ ಕೈಚೆಲ್ಲಿದ್ದಾರೆ ಎಂದು ತಿಳಿಸಿದರು.ನಮ್ಮ ತಾಲೂಕಿನಲ್ಲಿ ಹುಣಸೆ ಹಣ್ಣಿಗೆ ಸೂಕ್ತವಾದ ಮಾರುಕಟ್ಟೆ ಇಲ್ಲ. ಕೆಲವೊಂದು ಸಮಯದಲ್ಲಿ ಉತ್ತಮ ಬೆಲೆಯೂ ದೊರೆಯುವುದಿಲ್ಲ. ನಾವು ಈ ವರ್ಷ ಒಟ್ಟು ₹2 ಲಕ್ಷ ಮೌಲ್ಯದಷ್ಟು ಮರಗಳನ್ನು ಗುತ್ತಿಗೆ ಪಡೆದಿದ್ದು, ಕೆಲವು ಗಿಡಗಳಲ್ಲಿ ಇಳುವರಿ ಕಡಿಮೆ ಇದೆ. ಹಣ್ಣಿನ ದರ 1ಕ್ವಿಂಟಲ್‌ಗೆ ₹4500 ಇದೆ. ನಮ್ಮ ಜೀವನ ಕಷ್ಟಕರವಾಗಿದೆ ಎಂದು ಹುಣಸೆ ಹಣ್ಣಿನ ವ್ಯಾಪಾರಸ್ಥ ಹಾಗೂ ಗುತ್ತಿಗೆದಾರ ಮರಿಯಪ್ಪ ಭಜಂತ್ರಿ ಹೇಳಿದರು.