ಸಾರಾಂಶ
ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ನೇತ್ರಾ ಜಂಬೋ-೧ ಮತ್ತು ನೇತ್ರಾ ಗಂಗಾ ಎಂಬ ಎರಡು ಸುಧಾರಿತ ಗೇರು ಹೈಬ್ರಿಡ್ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಕೇಂದ್ರ ಸರ್ಕಾರ ೧೦೦ ದಿನಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆ.೧೧ರಂದು ವಿವಿಧ ವಾರ್ಷಿಕ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ ಒಟ್ಟು ೧೦೯ ಸುಧಾರಿತ, ಹವಾಮಾನ ಬದಲಾವಣೆಗೆ ಸ್ಪಂದಿಸುವ, ಪೋಷಕಾಂಶ ಸಮೃದ್ಧ ತಳಿಗಳು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ನೇತ್ರಾ ಜಂಬೋ-೧ ಮತ್ತು ನೇತ್ರಾ ಗಂಗಾ ಎಂಬ ಎರಡು ಸುಧಾರಿತ ಗೇರು ಹೈಬ್ರಿಡ್ ತಳಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.ನೇತ್ರಾ ಜಂಬೋ-೧ ತಳಿಯನ್ನು ಸಂಸ್ಥೆಯ ಪ್ರಸ್ತುತ ನಿರ್ದೇಶಕರಾದ ಡಾ. ದಿನಕರ ಅಡಿಗ ಮತ್ತವರ ತಂಡ ಅಭಿವೃದ್ಧಿಪಡಿಸಿದೆ. ಈ ತಳಿ ಕೂಲಿ ಖರ್ಚನ್ನು ಗಮನಾರ್ಹ ಪ್ರಮಾಣದಲ್ಲಿ ಉಳಿಸುತ್ತದೆ. ಇದರಲ್ಲಿ ೧೨ ಗ್ರಾಂ ತೂಕದ ಬೀಜಗಳಿರುತ್ತವೆ. ಶೇಕಡಾ ೯೦ಕ್ಕೂ ಹೆಚ್ಚಿನ ಬೀಜಗಳದ್ದು ಒಂದೇ ಗಾತ್ರ. ನೂರು ಕೆಜಿ ಬೀಜ ಸಂಸ್ಕರಣೆಯಿಂದ ಸುಮಾರು ೨೯ ರಿಂದ ೩೦ ಕೆಜಿ ತಿರುಳು ಸಿಗುತ್ತದೆ. ಈಗಿರುವ ರಫ್ತು ಗುಣಮಟ್ಟದ ಗ್ರೇಡ್ ಡಬ್ಲ್ಯೂ ೧೮೦ಕ್ಕಿಂತ ಜಾಸ್ತಿ ಗ್ರೇಡ್ (ಡಬ್ಲ್ಯೂ ೧೩೦) ಈ ತಳಿಯ ತಿರುಳು ಹೊಂದಿದೆ. ಈ ತಳಿ ಒಂದು ಟನ್ ಇಳುವರಿಗೆ ಬೀಜ ಸಂಗ್ರಹಣೆಯಲ್ಲಿ ೧೬೦೦೦ ರು. ಕೂಲಿ ಖರ್ಚನ್ನು ಉಳಿಸುತ್ತದೆ. ಜೊತೆಗೆ ಈಗಿನ ಮಾರುಕಟ್ಟೆ ದರದಲ್ಲಿ ದೊಡ್ಡ ಗಾತ್ರದ ಬೀಜಕ್ಕೆ ಒಂದು ಟನ್‌ಗೆ ಸುಮಾರು ೧೦೦೦೦ ರು. ಹೆಚ್ಚು ಮೌಲ್ಯ ಲಭಿಸುತ್ತದೆ. ಇದರಿಂದಾಗಿ ಒಂದು ಟನ್‌ಗೆ ಒಟ್ಟು ೨೬೦೦೦ ರು.ಗಳಷ್ಟು ಹೆಚ್ಚುವರಿ ಲಾಭ ಸಿಗುತ್ತದೆ. ಇದರ ತಿರುಳಿನ ಸಿಪ್ಪೆ ಸುಲಭದಲ್ಲಿ ಬಿಡಿಸಬಹುದಾಗಿದೆ. ಇದರಿಂದಾಗಿ ಗೇರು ಕಾರ್ಖಾನೆಗಳಲ್ಲಿಯೂ ಕೂಲಿ ಖರ್ಚು ಉಳಿಸುತ್ತದೆ. ಜೊತೆಗೆ ಬೀಜದ ತಿರುಳು ತುಂಬಾ ರುಚಿಕರವಾಗಿದೆ.ನೇತ್ರಾ ಗಂಗಾ ತಳಿಯನ್ನು ಸಂಶೋಧನಾ ಕೇಂದ್ರದ ಹಿಂದಿನ ಪ್ರಭಾರ ನಿರ್ದೇಶಕರಾಗಿದ್ದ ಡಾ. ಗಂಗಾಧರ ನಾಯಕ್ ಮತ್ತವರ ತಂಡ ಅಭಿವೃದ್ಧಿಪಡಿಸಿದೆ. ಈ ತಳಿಯು ದೊಡ್ಡ ಗಾತ್ರದ ಬೀಜವನ್ನು ಹೊಂದಿದ್ದು, ಬೀಜದ ತೂಕ ೧೨ ಗ್ರಾಂ ನಿಂದ ೧೩ ಗ್ರಾಂ ಹೊಂದಿದೆ. ಗೊಂಚಲುಗಳಲ್ಲಿ ಬಿಡುವ ತಳಿಯಾಗಿದ್ದು ಉತ್ತಮ ಫಸಲನ್ನು ನೀಡುತ್ತದೆ. ಪ್ರಾರಂಭದ ಒಂದೆರಡು ವರ್ಷಗಳಲ್ಲೇ ಹೂ ಬಿಡುವ ಹಾಗೂ ಡಿಸಂಬರ್‌ನಿಂದ ಏಪ್ರಿಲ್ ತನಕದ ದೀರ್ಘಾವಧಿ ಹೂವು ಮತ್ತು ಬೀಜ ಬಿಡುವ ತಳಿ ಇದಾಗಿದೆ. ತಿರುಳಿನ ಪ್ರಮಾಣ ಶೇಕಡಾ ೨೯.೫ ಇರುತ್ತದೆ. ತಳಿಯು ಸವರುವಿಕೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವುದರಿಂದ ಘನ ಸಾಂದ್ರ ಪದ್ಧತಿಯಲ್ಲಿ ಬೇಸಾಯಕ್ಕೆ ಯೋಗ್ಯವಾಗಿದೆ. ಮೂರು ವರ್ಷದಲ್ಲಿಯೇ ಗಿಡವೊಂದಕ್ಕೆ ೫ ಕೆಜಿಗಿಂತ ಮೇಲ್ಪಟ್ಟು ಇಳುವರಿ ನೀಡುತ್ತದೆ. ಗೇರುವಿನಲ್ಲಿ ಸದ್ಯ ಭಾಸ್ಕರ, ವಿಆರ್ ಐ-೩, ಉಳ್ಳಾಲ -೩ ಇತ್ಯಾದಿ ತಳಿಗಳ ಕೃಷಿ ಮಾಡಲಾಗುತ್ತಿದೆ. ಇದರ ಬೀಜಗಳು ಬಹುತೇಕ ಸಣ್ಣ ಹಾಗೂ ಮಧ್ಯಮ ಗಾತ್ರವನ್ನು ಹೊಂದಿದೆ. ನೂತನ ತಳಿಯಲ್ಲಿ ದೊಡ್ಡ ಗಾತ್ರದ ಬೀಜ ಲಭ್ಯವಾಗುತ್ತಿದ್ದು, ಈ ತಳಿಯು ಒಣಭೂಮಿ ಕೃಷಿಯಲ್ಲಿ ಹೊಸ ಭರವಸೆ ಹುಟ್ಟಿಸಬಲ್ಲುವು ಎಂದು ಗೇರು ಸಂಶೋಧನಾ ಕೇಂದ್ರದ ಮಾಹಿತಿ ತಿಳಿಸಿದೆ.