ಕನ್ನಡಪ್ರಭ ವಾರ್ತೆ ತುಮಕೂರು ಜಗತ್ತಿನ ಎಲ್ಲಾ ಸಂತರು, ಶರಣರು, ದಾರ್ಶನಿಕರು, ಮಹಾತ್ಮರು ಅಮರರು. ಅವರ ಭೌತಿಕ ಶರೀರ ಅಳಿದಿರಬಹುದು ಆದರೆ ಅವರು ಬಿತ್ತಿರುವ ತತ್ವಗಳು, ಉಪದೇಶಗಳು ಸಾರ್ವಕಾಲಿಕ ಸತ್ಯವಾಗಿವೆ. ಅಂತಹ ವಿಶ್ವ ಮಹಾತ್ಮರನ್ನು ಒಂದು ಜಾತಿಗೆ, ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ತುಮಕೂರಿನ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಯೋಜನಾ ಸಮನ್ವಯಾಧಿಕಾರಿ ಡಾ. ಶಿವಾನಂದರವರು ಅಭಿಪ್ರಾಯಪಟ್ಟರು. ಅವರು ತುಮಕೂರು ಜಿಲ್ಲಾ, ತಾಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗ್ಲೋಬಲ್ ಪೀಸ್ ಎಸ್.ಸಿ.ವೈ.ಎಸ್.ಎಸ್.ನಲ್ಲಿ ನಡೆದ ಡಾ.ಶಿವಕುಮಾರ ಮಹಾಸ್ವಾಮಿಯವರ ಸಂಸ್ಮರಣೆ ಪ್ರಯುಕ್ತ ನಿರಂತರ 69ನೇ ಮಾಸಿಕ ಶರಣ ಚಿಂತನಗೋಷ್ಠಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕ್ರಿ.ಪೂ. 2500 ಸಾವಿರ ವರ್ಷಗಳ ಹಿಂದೆ ಜನಿಸಿದ ಬುದ್ಧನ ಆದರ್ಶ, ಕರ್ನಾಟಕದ 12ನೇ ಶತಮಾನದ ಬಸವಣ್ಣ, 20ನೇ ಶತಮಾನದ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ರವರ ಆದರ್ಶಗಳು ಎಂದೆಂದಿಗಿಂತ ಇಂದು ಅನಿವಾರ್ಯ ಹಾಗೂ ಅಗತ್ಯವೆಂದರು. ಮುಂದಿನ ಯುವ ಜನಾಂಗಕ್ಕೆ ಈ ಮಹಾತ್ಮರನ್ನು ಪರಿಚಯಿಸುತ್ತಿರುವ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಶರಣ ಶರಣೆಯರ ಆದರ್ಶ ಸಾಂಸಾರಿಕ ಜೀವನ ವಿಷಯ ಕುರಿತು ಉಪನ್ಯಾಸ ನೀಡಿದ ತುಮಕೂರು ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಉಪಾಧ್ಯಕ್ಷರಾದ ಜ್ಯೋತಿ ಆನಂದ್‌ರವರು ಶರಣ ಶರಣೆಯರು ಸಂಸಾರ ತ್ಯಾಗ ಮಾಡಲಿಲ್ಲ. ಸಂಸಾರದಲ್ಲಿದ್ದೂ ಆದರ್ಶ ಜೀವನ ನಡೆಸಿದರು ಎಂದು ವಚನಾಧಾರಿತ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಕಳೆದ ತಿಂಗಳು ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ಡಾ. ಸ್ಮಿತಾ ಎಸ್.ರವರ ಸಾಧನೆ ಅಪೂರ್ವವೆಂದು ಜಿಲ್ಲಾ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಶರಣ ಸೇವಾ ಗೌರವ ನೀಡಿ ಸನ್ಮಾನಿಸಲಾಯಿತು. ಡಾ. ಸ್ಮಿತಾ ಎಸ್. ಮಾತನಾಡಿ ಕಿರಿಯಳಾದ ನನ್ನನ್ನು ಗೌರವಿಸಿದ್ದಕ್ಕೆ ಗುರುಹಿರಿಯರು, ಮಾರ್ಗದರ್ಶಕರುಗಳನ್ನು ಸ್ಮರಿಸಿದರು. ಎಸ್.ವಿ.ರವೀಂದ್ರನಾಥ ಠಾಗೂರ್, ಈಚನೂರು ಇಸ್ಮಾಯಿಲ್, ಗವಿಸಿದ್ದಯ್ಯ ಇದ್ದರು. ಅಧ್ಯಕ್ಷ ಸ್ಥಾನದಿಂದ ಜಿಲ್ಲಾ ಶಸಾಪ ಅಧ್ಯಕ್ಷರಾದ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯನವರು ಮಾತನಾಡಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸೇವಾ ಚಟುವಟಿಕೆಗಳು ಇದು ಇಡೀ ವಿಶ್ವದೆಲ್ಲೆಡೆ ಪಸರಿಸಿದೆ ಎಂದರು. ಪರಿಷತ್ತು 1986ರಲ್ಲಿ ಸ್ಥಾಪನೆ ಆಗಿದೆ ಎಂದರು. ಭವಾನಮ್ಮ ಗುರುಮಲ್ಲಪ್ಪ, ಮಿಮಿಕ್ರಿ ಈಶ್ವರಯ್ಯ ವಚನ ಗಾಯನ ನಡೆಸಿಕೊಟ್ಟರು. ಈಚನೂರು ರಾಜಶೇಖರಯ್ಯ ಸ್ವಾಗತಿಸಿ ನಿರೂಪಿಸಿದರು. ಸುಂದರಮೂರ್ತಿ ಶರಣು ಸಮರ್ಪಿಸಿದರು. ಡಾ. ಶಿವಾನಂದ್, ಜ್ಯೋತಿ ಆನಂದ್ ಡಾ. ಸ್ಮಿತಾ ಎಸ್.ರವರನ್ನು ಸನ್ಮಾನಿಸಲಾಯಿತು. ನಂತರ ಪ್ರಸಾದ ವಿತರಣೆಯಾಯಿತು.