ಶರಣರ ವಚನಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಜತೆಗೆ ಮಾನವೀಯತೆ, ಸಹಬಾಳ್ವೆ ಮತ್ತು ಸತ್ಯದ ಮಾರ್ಗವನ್ನು ತೋರಿಸುತ್ತವೆ ಎಂದು ಶಾಕೀರ್ ಸನದಿ ಹೇಳಿದರು.
ಧಾರವಾಡ:
ಮಾನವ ಸೇವೆ, ಸಮಾನತೆ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ ಶಿವಶರಣ ಹಡಪದ ಅಪ್ಪಣ್ಣನವರು, ಬಸವಣ್ಣನವರೊಂದಿಗೆ ಸೇರಿ ಶರಣರ ವಚನಗಳ ಪ್ರಸಾರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಪ್ಪಣ್ಣರು ಸಮಾಜದಲ್ಲಿ ಜಾತಿ-ಭೇದವಿಲ್ಲದ ಸಮಾನತೆಯ ಬದುಕನ್ನು ಪ್ರತಿಪಾದಿಸಿ, ಮಾನವೀಯ ಮೌಲ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರ ತತ್ವಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿ ಎಂದು ಹುಡಾ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿದ ಅವರು, ಶರಣರ ವಚನಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಜತೆಗೆ ಮಾನವೀಯತೆ, ಸಹಬಾಳ್ವೆ ಮತ್ತು ಸತ್ಯದ ಮಾರ್ಗವನ್ನು ತೋರಿಸುತ್ತವೆ ಎಂದರು.
ದೇಶದ ಇತಿಹಾಸ, ಬಸವ ತತ್ವಗಳು ಹಾಗೂ ಶರಣರ ವಚನಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರೆ, ಅವರ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣನವರು ಶ್ರದ್ಧೆ, ಭಕ್ತಿ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಕಾಯಕವನ್ನು ನಿರ್ವಹಿಸಿದ್ದಾರೆ. ಅವರ ನಿಷ್ಠೆ ಮತ್ತು ಸೇವಾ ಮನೋಭಾವ ಎಲ್ಲರಿಗೂ ಆದರ್ಶ ಎಂದರು. ಉಪನ್ಯಾಸಕ ಡಾ. ಈರಣ್ಣ ಇಂಜಗನೇರಿ ಹಡಪದ ಅಪ್ಪಣ್ಣ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಪ್ರತಿನಿಧಿ ಫಕೀರೇಶ ಅಡಿವೆಪ್ಪ ಹಡಪದ, ಜಿಲ್ಲಾ ಹಡಪದ ನೌಕರರ ಸಂಘಗಳ ಮುಖ್ಯಸ್ಥ ಮಹಾರುದ್ರಪ್ಪ ಪಡೆಸೂರ, ನಿಂಗರಾಜ ಹಡಪದ, ಶಂಕರ ಹಡಪದ, ಮಂಜುಳಾ ಪಡೆಸೂರ, ಕಿರಣ ಹಡಪದ, ಮಾರುತಿ ಹಡಪದ, ಶಿವಕುಮಾರ ಅಣ್ಣಿಗೇರಿ, ನಾಗರಾಜ ಅಂಗಡಿ, ಈರಣ್ಣ ಹಡಪದ, ಸಂಗಮೇಶ ಬೂದಿಹಾಳ, ಫಕೀರಪ್ಪ ಮೂಲಿಮನಿ, ಮಲ್ಲಪ್ಪ ಹಡಪದ, ಶಾಂತವ್ವ ಹಡಪದ ಇದ್ದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 95ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.