ಸಾರಾಂಶ
ಹಾವೇರಿ: ಜಿಲ್ಲಾದ್ಯಂತ ಮನೆಯಿಂದ ಅಂಚೆ ಮತದಾನ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಹೇಳಿದರು.ನಗರದ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗ ೮೫ ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆ ಮತ್ತು ವಿಶೇಷ ಚೇತನರಿಗೆ ಮನೆಯಿಂದಲೇ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ೨೭ರಿಂದ ೨೯ರ ವರೆಗೆ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾನಗಲ್, ಹಾವೇರಿ, ಬ್ಯಾಡಗಿ, ಹಿರೇಕೆರೂರು ಹಾಗೂ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮನೆಯಿಂದ ಮತದಾನ ನಡೆಯುತ್ತಿದ್ದು, ಹಿರಿಯ ನಾಗರಿಕರು,ವಿಶೇಷ ಚೇತನರು ಉತ್ಸಾದಿಂದ ಮತ ಚಲಾಯಿಸಿ ಸಂತಸದ ನಗೆ ಬೀರಿದ್ದಾರೆ. ಬ್ಯಾಡಗಿ ಪಟ್ಟಣದ ಶಿಕ್ಷಕರ ಕಾಲೋನಿಯ ನಿವಾಸಿ ಶತಾಯುಷಿ ೧೦೬ ವರ್ಷದ ಖಾದರಬಿ ಪಠಾಣ ಅವರು ಮನೆಯಿಂದ ಮತದಾನ ಮಾಡಿರುವುದು ಇಂದಿನ ವಿಶೇಷವಾಗಿದೆ ಎಂದು ತಿಳಿಸಿದರು.ಜಿಲ್ಲಾದ್ಯಂತ ಚುನಾವಣೆ ಕರ್ತವ್ಯಕ್ಕೆ ನೇಮಿಸಿದ ಸೆಕ್ಟರ್ ಅಧಿಕಾರಿ ಒಳಗೊಂಡ ತಂಡ ಮನೆ,ಮನೆಗೆ ಭೇಟಿ ನೀಡಿದ್ದು, ಅಗತ್ಯ ಸಿದ್ಧತೆಗಳೊಂದಿಗೆ ಯಾವುದೇ ಲೋಪವಿಲ್ಲದೆ ಅಂಚೆ ಮತಪೆಟ್ಟಿಗೆಯಲ್ಲಿ ಮತವನ್ನು ಭದ್ರವಾಗಿಸಿದ್ದಾರೆ. ಮತದಾನದ ಗೌಪ್ಯತೆ ಕಾಪಾಡಿಕೊಂಡಿದ್ದು, ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.ಇನ್ನೂ ಬೈಕ್ ರ್‍ಯಾಲಿ, ರಂಗೋಲಿ ಸ್ಪರ್ಧೆ, ಗಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಸ್ವೀಪ್ ಚಟುವಟಿಕೆ ಮೂಲಕ ಮತದಾರರಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚಿನ ಅರಿವು ಮೂಡಿಸಲಾಗಿದೆ. ಈ ಬಾರಿ ಮತದಾನದ ಶೇಕಡಾವಾರು ಪ್ರಮಾಣವು ಹೆಚ್ಚಾಗಲಿದೆ ಎಂದರು.