ನಗರದ ನಯನ ಸಭಾಂಗಣದಲ್ಲಿ ಮುಂಬಯಿಯ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಶಿರಸಿ ನಯನ ಫೌಂಡೇಶನ್ ವತಿಯಿಂದ ರಾಣಿ ಚೆನ್ನಭೈರಾದೇವಿ‌ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ರಾಣಿ ಚೆನ್ನಭೈರಾದೇವಿ‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಬರಹಗಾರ

ಕನ್ನಡಪ್ರಭ ವಾರ್ತೆ ಶಿರಸಿ

ನಗರದ ನಯನ ಸಭಾಂಗಣದಲ್ಲಿ ಮುಂಬಯಿಯ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಶಿರಸಿ ನಯನ ಫೌಂಡೇಶನ್ ವತಿಯಿಂದ ರಾಣಿ ಚೆನ್ನಭೈರಾದೇವಿ‌ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಈ ಸಂದರ್ಭ ಹಿರಿಯ ಬರಹಗಾರ ಶಿವಾನಂದ‌ ಕಳವೆ ಮಾತನಾಡಿ, ಕಾಡು ಬಳ್ಳಿಯ ಬೆಳೆಯನ್ನು ಇಟ್ಟುಕೊಂಡು ಜಗತ್ತನ್ನು ತಲುಪಿದ, ಇಲ್ಲಗಳ ನಡುವೆ ಇದ್ದು ಸಾಧಿಸಿದ‌ ಪ್ರೇರಕ ಶಕ್ತಿ ರಾಣಿ ಚೆನ್ನಭೈರಾದೇವಿ ಎಂದು ಹೇಳಿದರು.

ಇಷ್ಟೊಂದು ಕಾಡಿನ ಮಧ್ಯೆ ಕೃಷಿ ನಡೆಯುವ ಜಿಲ್ಲೆ ಬೇರೆಡೆ ಇರಲಿಕ್ಕಿಲ್ಲ. ಹಿಂದೆ ಬ್ರಿಟಿಷ ಸರಕಾರದಲ್ಲಿ ಸಾಗವಾನಿ ಸಸಿ ನಾಶವಾಗುವುದಾದರೆ ಆನೆ ಕೊಲ್ಲಲು ಅನುಮತಿ ನೀಡಿದ್ದೂ ಇದೆ. ಕೃಷಿ ಬೆಳೆ ನಾಶವಾದರೆ ನೆರವಿಲ್ಲ ಎಂದೂ ಅಂದೇ ಪ್ರಶ್ನಿಸಿದ್ದೂ ಇತ್ತು ಎಂದ ಅವರು, ನೆಲ‌ ಮೂಲದ ಜ್ಞಾನ ಬಳಸಿ ಕಾನೂನು ಮಾಡಿಲ್ಲ. ಅರಣ್ಯ ಇಲಾಖೆ ಇಂದು ಪ್ರಾಣಿ ತಿನ್ನದ ಬೆಳೆ ಬೆಳೆಯುತ್ತದೆ‌‌. ಕೃಷಿಕರು ಹಾಗಲ್ಲ. ಇದರಿಂದ ವನ್ಯಜೀವಿ‌ ಸಂಘರ್ಷ ಉಂಟಾಗುತ್ತದೆ. ಅರಣ್ಯ ಆಳ್ವಿಕೆಯ ತಪ್ಪು ನೀತಿಯಿಂದ ಸಮಸ್ಯೆ ಆಗುತ್ತಿದೆ. ಒಂದೊಂದು ಪ್ರಾಣಿಯೂ ಒಂದೊಂದು ಸಸಿಯ ವಕ್ತಾರ ಆಗಿದ್ದವು. ಆದರೆ, ನೆಲ‌ ಮೂಲದ ಜ್ಞಾನ ನೋಡಿಲ್ಲದೇ ಇಲಾಖೆ ನೀತಿ ಮಾಡುತ್ತವೆ, ಕನಿಷ್ಠ ತಿಳುವಳಿಕೆಯ ನಿಯಮ ಮಾಡಿಲ್ಲ ಎಂದರು.

ಕಾಡು ನೆಲದ ಸಣ್ಣ ಸಣ್ಣ‌ ಜ್ಞಾನಗಳನ್ನು ಅರಿತು ನಡೆಯಬೇಕು. ವನ್ಯಜೀವಿಗಳು ಕಾಡಿನಲ್ಲಿ ತಿನ್ನುವ ಹಣ್ಣಿನ ಗಿಡ ಬೆಳೆಸುವ ಕಾರ್ಯ ಮಾಡಬೇಕು. ಅರಣ್ಯ ಜಿಲ್ಲೆಯಲ್ಲಿ ವನ್ಯಜೀವಿಗಳು ಇಲ್ಲದಂತೆ‌ ಆಗಬಾರದು ಎಂದರು.ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಮಯೂರ ವರ್ಮನ ಹೆಸರು ಬಾಂಬೆಯ ಪ್ರತಿಷ್ಠಾನ ಇಟ್ಟುಕೊಂಡು ಚೆನ್ನಭೈರಾದೇವಿಯನ್ನು ಮತ್ತೆ ನೆನಪಿಸುವ ಕಾರ್ಯ ಆಗುತ್ತಿದೆ. ಅಪ್ಪ‌-ಅಮ್ಮ ಬೇಡ, ದನ-ಕೊಟ್ಟಿಗೆ ಬೇಡ ಎಂಬ ಕಾಲಕ್ಕೆ ವನ್ಯಪ್ರಾಣಿ ಸಂರಕ್ಷಣೆಯ ಕಾರ್ಯ ಮಾಡುತ್ತಿರುವ ಪದ್ಮಾ ಸಂಸ್ಥೆಯ ನಡೆ ದೊಡ್ಡದು ಎಂದರು.

ಪ್ರಶಸ್ತಿ‌ ಸ್ವೀಕರಿಸಿದ ಪೂಜಾ, ವೀರ ರಾಣಿಯ ಹೆಸರಿನಲ್ಲಿ ಪ್ರಶಸ್ತಿ ನೀಡಿದ್ದು ಭಾವುಕವಾಗಿಸಿದೆ ಎಂದರು.ಅನಂತಮೂರ್ತಿ ಹೆಗಡೆ ಮಾತನಾಡಿ, ಜನರಿಗೆ ಒಳ್ಳೆಯದನ್ನು ಹೇಳುವ ಕಾರ್ಯ ಮಾಡಬೇಕು. ಇದು ಜವಾಬ್ದಾರಿಯುತ ನಾಗರಿಕನ‌ ಕರ್ತವ್ಯ ಎಂದರು.

ಡಾ. ಶಿವರಾಮ ಕೆ.ವಿ., ಸಂಚಾಲಕ ಜಿ.ವಿ. ಕೊಪ್ಪಲತೋಟ ಇತರರು ಇದ್ದರು. ಟಿ.ಆರ್. ಮಧುಸೂಧನ ಅಧ್ಯಕ್ಷತೆ ವಹಿಸಿದ್ದರು. ಕೇಶವ ಕಿಬ್ಳೆ ಸ್ವಾಗತಿಸಿದರು. ಬಿಂದು ಹೆಗಡೆ ಪ್ರಶಸ್ತಿ ಪ್ರತ್ರ ವಾಚಿಸಿದರು‌. ರಾಘವೇಂದ್ರ ಹೊಸೂರು ಪರಿಚಯಿಸಿದರು. ಭವ್ಯಾ ಹಳೆಯೂರು ನಿರ್ವಹಿಸಿದರು. ವಿಶ್ವನಾಥ ದೊಡ್ಮನೆ ವಂದಿಸಿದರು. ಪ್ರಾಣಿ ಪಕ್ಷಿ ಪುನರ್ವಸತಿ ಕೇಂದ್ರ ನಡೆಸುವ ಪದ್ಮಾ ಫೌಂಡೇಶನ್‌ನ ಪೂಜಾ ರಾಜೇಂದ್ರ, ಡಾ. ರಾಜೇಂದ್ರ ಶಿರಸಿಕರ್ ಅವರನ್ನು ಗೌರವಿಸಿ ಪ್ರಶಸ್ತಿ ನೀಡಲಾಯಿತು.

ರಾಣಿ ಚೆನ್ನಭೈರಾದೇವಿ ಕುರಿತಾದ ಕೀರ್ತನೆ ಗಮನ ಸೆಳೆಯಿತು. ಸುಮಿತ್ರಾ ಹೆಗಡೆ ರಚಿಸಿದ‌ ರಾಣಿ ಚೆನ್ನಭೈರಾದೇವಿ ಚರಿತ್ರೆಯ ಕೀರ್ತನೆಯನ್ನು ಪ್ರಿಯಾಂಕಾ ಪರಮಾನಂದ ಹೆಗಡೆ ಪ್ರಸ್ತುತಗೊಳಿಸಿದರು. ಅರವಿಂದ‌ ಪೈ ಹಾರ್ಮನಿಯಂ, ಆರ್.ಡಿ. ಪೈ ತಬಲಾದಲ್ಲಿ ಸಾಥ್‌ ನೀಡಿದರು.