ಸಾರಾಂಶ
ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದ ಜನರ ಕುಂದು ಕೊರತೆ ಸಭೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆದಿವಾಸಿ ಹಾಗೂ ಬುಡಕಟ್ಟು ಜನಾಂಗದವರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದ ಜನರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಸರ್ಕಾರ ಗಿರಿ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವಸತಿ ಸಹಿತ ಉಚಿತ ಶಿಕ್ಷಣ, ಪೌಷ್ಠಿಕ ಆಹಾರ, ಆರೋಗ್ಯ ರಕ್ಷಣೆ ಸೌಲಭ್ಯಗಳನ್ನು ನೀಡಿ ಅವರ ಸಾಮಾಜಿಕ, ಆರ್ಥಿಕ ಸವಾಲುಗಳು ಹಾಗೂ ಸಮುದಾಯದ ಜನರ ಬಡತನ, ಅನಕ್ಷರತೆ, ಸೀಮಿತ ಪ್ರದೇಶ ಇನ್ನಿತರ ಜ್ವಲಂತ ಸಮಸ್ಯೆ ಗಳಿಂದ ದೂರ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರಲು ಹಾಗೂ ಸಬಲರನ್ನಾಗಿಸಲು ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳ ಮಾಹಿತಿಯನ್ನು ಸಮುದಾಯದ ಜನರಿಗೆ ತಿಳಿಸಿ ಅರ್ಹ ಫಲಾನುಭವಿಗಳು ಯೋಜನೆ ಸದುಪಯೋಗ ಪಡೆಯುವಂತೆ ಜಾಗೃತಿ ಮೂಡಿಸಬೇಕು. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದರು.ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಏಕಲವ್ಯ, ಆಶ್ರಮ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಇತರೆ ವಸತಿಯುತ ಶಾಲೆಗಳನ್ನು ತೆರೆದು ಶಿಕ್ಷಣ ನೀಡಲಾಗುತ್ತಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತು ಕೊಠಡಿಗಳ ದುರಸ್ತಿ ಅಗತ್ಯವಿದ್ದಲ್ಲಿ ಶೀಘ್ರವಾಗಿ ದುರಸ್ತಿಗೊಳಿಸಿ ಶಿಕ್ಷಕರ ನೇಮಕ ಮಾಡಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಠಿಕ ಆಹಾರ ನೀಡಿ ಅವರ ಶೈಕ್ಷಣಿಕ ಬೆಳವಣಿಗೆಯನ್ನು ಉತ್ತಮ ಪಡಿಸಬೇಕು ಎಂದು ಹೇಳಿದರು.ಸಮುದಾಯದ ಅನೇಕರು ಭೂಮಿ ಹಾಗೂ ವಸತಿ ರಹಿತರಾಗಿದ್ದು ಅರ್ಹರಿಗೆ ಭೂಮಿ ಒದಗಿಸಿ ಹಕ್ಕು ಪತ್ರ ನೀಡಲು ಕ್ರಮ ವಹಿಸಲಾಗಿದೆ. ಕೊಪ್ಪ, ಶೃಂಗೇರಿ, ಕಳಸ, ಮೂಡಿಗೆರೆ, ಎನ್.ಆರ್ ಪುರ ಭಾಗಗಳಲ್ಲಿ ಅನೇಕ ಸಮುದಾಯದ ಗ್ರಾಮಗಳು ರಸ್ತೆ, ವಿದ್ಯುತ್ ಸಂಪರ್ಕದಿಂದ ಮುಕ್ತವಾಗಿವೆ ಎಂದರು.
ಸೌರ ವಿದ್ಯುತ್ ಅಳವಡಿಸಬೇಕು. ಬುಡಕಟ್ಟು ಜನಾಂಗದವರಿಗೆ ನೀಡುವ ಪೌಷ್ಠಿಕ ಆಹಾರ ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ದೂರುಗಳು ಬಂದಿದ್ದು ಈ ಕುರಿತು ಪ್ರತಿ ತಿಂಗಳು ಆಹಾರ ಗುಣಮಟ್ಟ ಮಾದರಿ ಪರೀಕ್ಷಿಸಿ ಪರಿಶೀಲನೆ ನಂತರ ವಿತರಿಸಲು ಸೂಚಿಸಲಾಗುತ್ತಿದೆ ಎಂದ ಅವರು, ಬಿಪಿಎಲ್ ಕಾರ್ಡ್ ಸಂಬಂಧಿಸಿದ ವಿಚಾರಗಳಿಗೆ ಯಾವುದೇ ಗೊಂದಲ ಬೇಡ. ಈಗಾಗಲೇ ತಾಂತ್ರಿಕ ಹಾಗೂ ಇತರೇ ಕಾರಣಗಳಿಂದ ರದ್ದಾಗಿರುವ ಕಾರ್ಡ್‌ಗಳನ್ನು ಸರ್ಕಾರದ ನಿರ್ದೇಶನದಂತೆ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಬುಡಕಟ್ಟು ಸಮುದಾಯದ ಜನರ ಕುಂದು ಕೊರತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಪರಿಹರಿಸಬಹುದಾದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಬುಡಕಟ್ಟು ಸಮುದಾಯ ಸೇರಿದಂತೆ ಜಿಲ್ಲೆಯ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಉತ್ತಮ ಪಡಿಸುವುದರೊಂದಿಗೆ ಸಾರ್ವಜನಿಕರ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್, ತರೀಕೆರೆ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್, ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿ ಮಂಜುನಾಥ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಯೋಜನಾ ಸಮನ್ವಯ ಅಧಿಕಾರಿ ಭಾಗಿರಥಿ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೇಶ್, ಆದಿವಾಸಿ ಪರಿಷತ್ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಗೌಡ ಸೇರಿ ದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು. 4 ಕೆಸಿಕೆಎಂ 5ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದ ಜನರ ಕುಂದು ಕೊರತೆ ಸಭೆ ನಡೆಯಿತು.