2020-2025ನೇ ಅವಧಿಯ ಗ್ರಾಮ ಪಂಚಾಯಿತಿ ಆಡಳಿತಗಳು ಫೆ.7ರೊಳಗೆ ಎಲ್ಲ ಗ್ರಾ.ಪಂ. ಅಧಿಕಾರಾವಧಿ ಮುಗಿಯುತ್ತಿದೆ. ಇದರಿಂದ ಹಾಗೂ ಮುಂದಿನ 2026-2031ನೇ ಅವಧಿಯ ಗ್ರಾ.ಪಂ. ಸಾರ್ವತ್ರಿಕ ಚುನಾವಣೆ ಪೂರ್ವಸಿದ್ಧತೆ ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಭರದಿಂದ ನಡೆಯುತ್ತಿದೆ.

- 2026-2031ನೇ ಅವಧಿಯ ಗ್ರಾಪಂ ಚುನಾವಣೆ ಪೂರ್ವಸಿದ್ಧತೆ । ಎಚ್.ಕಡದಕಟ್ಟೆ ಗ್ರಾಪಂಗೆ ಚುನಾವಣೆ ಇಲ್ಲ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

2020-2025ನೇ ಅವಧಿಯ ಗ್ರಾಮ ಪಂಚಾಯಿತಿ ಆಡಳಿತಗಳು ಫೆ.7ರೊಳಗೆ ಎಲ್ಲ ಗ್ರಾ.ಪಂ. ಅಧಿಕಾರಾವಧಿ ಮುಗಿಯುತ್ತಿದೆ. ಇದರಿಂದ ಹಾಗೂ ಮುಂದಿನ 2026-2031ನೇ ಅವಧಿಯ ಗ್ರಾ.ಪಂ. ಸಾರ್ವತ್ರಿಕ ಚುನಾವಣೆ ಪೂರ್ವಸಿದ್ಧತೆ ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಭರದಿಂದ ನಡೆಯುತ್ತಿದೆ.

ಈಗಾಗಲೇ ಹೊನ್ನಾಳಿ ತಾಲೂಕಿನ ಎಲ್ಲ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳ ನೇಮಕ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. 6 ತಿಂಗಳ ಹಿಂದೆಯೇ ಹೊನ್ನಾಳಿ ತಾಲೂಕಿನ 28 ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಸಮಗ್ರ ಮಾಹಿತಿ ಕಳಿಸಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಆಡಳಿತ ಮುಕ್ತಾಯಗೊಂಡ ಗ್ರಾಪಂಗಳು:

ತಾಲೂಕಿನ ಬೇಲಿಮಲ್ಲೂರು, ಬೆನಕನಹಳ್ಳಿ, ಕಮ್ಮಾರಗಟ್ಟೆ, ಕುಂದೂರು, ಲಿಂಗಾಪುರ, ಮುಕ್ತೇನಹಳ್ಳಿ, ರಾಂಪುರ, ತಿಮ್ಲಾಪುರ ಸೇರಿದಂತೆ ಒಟ್ಟು 8 ಗ್ರಾಪಂಗಳು ಫೆ.4ಕ್ಕೆ ಮುಕ್ತಯಗೊಂಡಿದೆ. ಬನ್ನಿಕೋಡು, ಅರಕೆರೆ, ಹನುಮಸಾಗರ, ಹರಳಹಳ್ಳಿ, ಹುಣಸಘಟ್ಟ, ಕತ್ತಿಗೆ, ಕುಳಗಟ್ಟೆ, ಕುಂಬಳೂರು, ಕ್ಯಾಸಿನಕೆರೆ ಹಾಗೂ ಸೊರಟೂರು ಸೇರಿದಂತೆ ಒಟ್ಟು 10 ಗ್ರಾ.ಪಂ.ಗಳು ಫೆ.5ಕ್ಕೆ ಮುಕ್ತಾಯಗೊಂಡಿವೆ.

ಎಚ್.ಕಡದಕಟ್ಟೆ ಗ್ರಾಪಂಗೆ ಚುನಾವಣೆ ಇಲ್ಲ:

ಬೀರಗೊಂಡನಹಳ್ಳಿ, ಹತ್ತೂರು ಹೊಸಹಳ್ಳಿ, ಹಿರೇಗೋಣಿಗೆರೆ, ಕೂಲಂಬಿ, ಮಾಸಡಿ, ಸಾಸ್ವೇಹಳ್ಳಿ ಹಾಗೂ ಯಕ್ಕನಹಳ್ಳಿ ಸೇರಿದಂತೆ ಒಟ್ಟು 8 ಗ್ರಾ.ಪಂ.ಗಳ ಆಡಳಿತ ಮಂಡಳಿಗಳ ಅವಧಿ ಫೆ.7ಕ್ಕೆ ಮುಕ್ತಾಯಗೊಳ್ಳುತ್ತದೆ. ತಾಲೂಕಿನ ಎಚ್. ಕಡದಕಟ್ಟೆ ಗ್ರಾಪಂ ಕೆಲ ಗ್ರಾಮಗಳು ಪುರಸಭೆಗೆ ಸೇರಿವೆ. ಹಾಗೂ ಕೆಲವು ಗ್ರಾಮಗಳಲ್ಲಿ ತಡವಾಗಿ ಚುನಾವಣೆ ನಡೆದಿದೆ. ಇದರಿಂದಾಗಿ ಎಚ್.ಕಡದಕಟ್ಟೆ ಗ್ರಾ.ಪಂ.ಚುನಾವಣೆ ನಡೆಯುವುದಿಲ್ಲ.

ಈಗಾಗಲೇ ಸಿದ್ಧತೆ ಶುರು:

ಪಂಚಾಯತ್‌ರಾಜ್ ಅಧಿನಿಯಮ 1993ರ ಅಡಿ 2026-2031ನೇ ಅವಧಿಗೆ ಗ್ರಾ.ಪಂ.ನ ಸಾರ್ವತ್ರಿಕ ಚುನಾವಣೆಗೆ ನಡೆಸಲು ಈಗಾಗಲೇ ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಬೇಕಾಗಿದೆ. ಇದರಿಂದ ಮತದಾರರ ಪಟ್ಟಿ ಸಿದ್ಧತೆ ಒಳಗೊಂಡಂತೆ ಇತರೆ ಎಲ್ಲ ಪೂರ್ವಭಾವಿ ಸಿದ್ಧತೆಗಳನ್ನು ತಾಲೂಕು ಆಡಳಿತ ಮಾಡಿಕೊಳ್ಳುತ್ತಿದೆ. ಅಲ್ಲದೇ, ವಾರ್ಡುಗಳ ವಿಂಗಡೆಣೆ, ಮೀಸಲಾತಿಯನ್ನು ಸರ್ಕಾರ ಪ್ರಕಟಿಸಬೇಕಾಗಿದೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರೆ ಪಕ್ಷಗಳು ಗ್ರಾ.ಪಂ. ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಸ್ಪರ್ಧೆ ಮಾಡಿಸುವುದಕ್ಕೆ ತಮ್ಮ ತಮ್ಮ ಪಕ್ಷಗಳ ಕಾರ್ಯಕರ್ತರನ್ನು ಹುರಿದುಂಬಿಸುತ್ತಿರುವುದು ಕಂಡುಬರುತ್ತಿದೆ.

- - -

(ಬಾಕ್ಸ್‌) * ಸರ್ಕಾರದ ನಿರ್ದೇಶನದಂತೆ ಸಿದ್ಧತೆ: ತಹಸೀಲ್ದಾರ್‌ ತಹಸೀಲ್ದಾರ್ ರಾಜೇಶ್ ಕುಮಾರ್ ಮಾತನಾಡಿ, ಗ್ರಾ.ಪಂ.ಗಳ ಆಡಳತಾವಧಿ ಫೆಬ್ರವರಿಯಲ್ಲಿ ಮುಗಿಯುತ್ತಿರುವುದರಿಂದ ಸರ್ಕಾರದ ನಿರ್ದೇಶನದಂತೆ ಕಳೆದ 6 ತಿಂಗಳ ಹಿಂದೆಯೇ ಪ್ರತಿ ಗ್ರಾ.ಪಂ.ಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಮಾಹಿತಿಯನ್ನು ಜಿಲ್ಲಾಧಿಕಾರಿ ಅವರಿಗೆ ರವಾನಿಸಿದ್ದೇವೆ. ಮುಂದಿನ ಗ್ರಾ.ಪಂ. ಸಾರ್ವತ್ರಿಕ ಚುನಾವಣೆ ಸಿದ್ದತೆ ಸರ್ಕಾರದ ನಿರ್ದೇಶನದಂತೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ತಾ.ಪಂ. ಪ್ರಭಾರ ಇಒ ಅಶೋಕ್ ಮಾತನಾಡಿ, ಫೆ.7ರೊಳಗೆ ತಾಲೂಕಿನ 28 ಗ್ರಾ.ಪಂ.ಗಳ ಆಡಳಿತಾವಧಿಯು ಮುಗಿಯುತ್ತಿದೆ. ಮುಂದಿನ ಆರು ತಿಂಗಳ ಒಳಗೆ ಎಲ್ಲ ಗ್ರಾ.ಪಂ.ಗಳಿಗೆ ಚುನಾವಣೆ ನಡೆಸಬೇಕಾಗಿದೆ. ಹಾಗಾಗಿ, ಎಲ್ಲ ಸಿದ್ಧತೆಗಳು ತಹಸೀಲ್ದಾರ್ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.