ಕನ್ನಡಪ್ರಭ ವಾರ್ತೆ ಹಾಸನ
ವ್ಯಕ್ತಿಯಲ್ಲಿರುವ ದೋಷಗಳನ್ನು ನಿವಾರಿಸಿ, ವ್ಯಕ್ತಿತ್ವವನ್ನು ಪರಿಷ್ಕರಿಸಿ, ಅವನಲ್ಲಿರುವ ಸದ್ಗುಣಗಳನ್ನು ಪ್ರಖರಿಸುವ ಪ್ರಕ್ರಿಯೆಯೇ ಸಂಸ್ಕಾರ ಎಂದು ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ಹಾಗೂ ವೇದ ವಿದ್ವಾನ್ ಶೃಂಗೇರಿ ಎಸ್. ಗುರುಪ್ರಸಾದ್ ಹೇಳಿದರು.ನಗರದ ಕುವೆಂಪುನಗರ ಬಡಾವಣೆಯ ಶ್ರೀ ವರಸಿದ್ಧಿವಿನಾಯಕ ದೇವಾಲಯದಲ್ಲಿ ಸಂಸ್ಕಾರ ಭಾರತೀ ದಕ್ಷಿಣ ಪ್ರಾಂತ, ಹಾಸನ ಜಿಲ್ಲಾ ಸಮಿತಿ ವತಿಯಿಂದ ವ್ಯಾಸಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ ನಟರಾಜ ಪೂಜನ ಮತ್ತು ಗುರುವಂದನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿ, ಭಾರತಿಯೇ ಜ್ಞಾನದೇವತೆ ಶಾರದೆ ಎಂದು ಉಲ್ಲೇಖಿಸಿದ ಅವರು, ಸಾಹಿತ್ಯ, ಸಂಗೀತ, ನೃತ್ಯ ಹಾಗೂ ವಿವಿಧ ಕಲೆಗಳ ಮೂಲಕ ಮಾನವನಲ್ಲಿ ವಿವೇಕ ಮತ್ತು ಸಂಸ್ಕಾರ ಬೆಳೆಸುವ ಕಾರ್ಯವನ್ನು ಸಂಸ್ಕಾರ ಭಾರತೀ ದೇಶಾದ್ಯಂತ ನಿರಂತರವಾಗಿ ನಡೆಸುತ್ತಿದೆ. ಕಲಾ ಸಂರಕ್ಷಣೆ ಮಾತ್ರವಲ್ಲದೆ ಕಲಾರಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವೂ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದರು. ಹಾಸನ ಜಿಲ್ಲಾ ಸಮಿತಿಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಅವರ ಪತ್ನಿ ಶ್ರೀಮತಿ ಸಹನಾ ಅವರನ್ನು ಸಹ ಸಂಸ್ಕಾರ ಭಾರತೀ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೇವಾಲಯದ ಅಧ್ಯಕ್ಷ ಹೆಚ್.ವಿ. ಶ್ರೀನಿವಾಸಮೂರ್ತಿ ಮಾತನಾಡಿ, ಶ್ರೀಸೂಕ್ತ, ಪುರುಷಸೂಕ್ತ ಹಾಗೂ ನಾರಾಯಣ ಸೂಕ್ತಗಳ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದರು. ವ್ಯಾಸಪೂರ್ಣಿಮೆಯಂದು ಈ ಸೂಕ್ತಗಳ ಪಠಣವು ವ್ಯಾಸಮಹರ್ಷಿಗಳಿಗೆ ಸಲ್ಲಿಸುವ ನಮನವಾಗಿದೆ ಎಂದರು. ದೇವಾಲಯದ ಕಾರ್ಯದರ್ಶಿ ಹಾಗೂ ನಗರ ಬ್ರಾಹ್ಮಣ ಸಭೆಯ ಮಾಜಿ ಅಧ್ಯಕ್ಷ ಟಿ. ಎಚ್. ಚಂದ್ರಶೇಖರ್ ಮಾತನಾಡಿ, ಕಲಾವಿದರನ್ನು ಗುರುತಿಸಿ ಗೌರವಿಸುವ ಸಂಸ್ಕಾರ ಭಾರತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ವಿದ್ವಾನ್ ಗುರುಪ್ರಸಾದ್ ಅವರ ಶಿಷ್ಯರಾದ ಸುಮುಖ ವೇದ ಬಳಗದಿಂದ ವೇದ ಪಠಣ ನೆರವೇರಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಕಾರ ಭಾರತೀ ಹಾಸನ ಜಿಲ್ಲಾ ಸಮಿತಿಯ ಅಧ್ಯಕ್ಷ ಕಲಾಶ್ರೀ ಗಣೇಶ್ ಉಡುಪ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ " ಎಂಬ ದಾಸವಾಣಿಯನ್ನು ಉಲ್ಲೇಖಿಸಿ, ಗುರುಭಕ್ತಿ ಮತ್ತು ಸಂಸ್ಕಾರಯುತ ಜೀವನದ ಮಹತ್ವವನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀ ಸದಸ್ಯೆಯರು ಧ್ಯೇಯಗೀತೆ ಹಾಡಿದರು. ವಿದ್ವಾನ್ ಗುರುಪ್ರಸಾದ್ ಅವರು ನಟರಾಜನಿಗೆ ವಿಶೇಷ ಪೂಜೆ ಸಲ್ಲಿಸಿದರು. ಉಪಾಧ್ಯಕ್ಷೆ ಗಮಾಕಲಾಶ್ರೀ ರುಕ್ಮಿಣಿ ನಾಗೇಂದ್ರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೊ. ಜಿ.ಎನ್. ಅನುಸೂಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರೆ, ಲಲಿತಾ ರಮೇಶ್ ಸನ್ಮಾನ ಪತ್ರ ವಾಚಿಸಿದರು. ಎಚ್. ಎಸ್. ರಮೇಶ್ ವಂದಿಸಿದರು. ಸುಮುಖ ವೇದ ಬಳಗದ ಸದಸ್ಯರು, ಸಂಸ್ಕಾರ ಭಾರತೀ ಪದಾಧಿಕಾರಿಗಳು, ಆಹ್ವಾನಿತರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.