ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮತ್ತೆ ವಿದ್ಯುತ್ ಸಮಸ್ಯೆಯಿಂದಾಗಿ ಎರಡು ದಿನಗಳಿಂದ ನೀರು ಹರಿಸುವುದು ಸ್ಥಗಿತವಾಗಿದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮತ್ತೆ ವಿದ್ಯುತ್ ಸಮಸ್ಯೆಯಿಂದಾಗಿ ಎರಡು ದಿನಗಳಿಂದ ನೀರು ಹರಿಸುವುದು ಸ್ಥಗಿತವಾಗಿದೆ.

ಕಳೆದ ೧೦ ದಿನಗಳ ಹಿಂದೆ ಇದೇ ಸಮಸ್ಯೆಗಾಗಿ ರೈತರು, ಅಧಿಕಾರಿಗಳ ನಡುವೆ ದೊಡ್ಡ ಪ್ರತಿಭಟನೆಯೇ ನಡೆದಿತ್ತು. ಅಲ್ಲದೇ ಶಾಸಕ ಶ್ರೀನಿವಾಸ್ ಮಾನೆ ಅಧಿಕಾರಿಗಳ ಸಭೆ ಕರೆದು ನೀರು ಹರಿಸುವ ಕಾರ್ಯದಲ್ಲಿ ವಿಳಂಬ ಸಲ್ಲದು ಎಂದು ಸೂಚಿಸಿದ್ದರು. ಆದರೆ ವಿದ್ಯುತ್ ವಿತರಣೆಯಲ್ಲಾದ ತೊಂದರೆಯಿಂದ ಮತ್ತೆ ನೀರು ಹರಿಸುವುದು ಸ್ಥಗಿತವಾಗಿದ್ದು ರೈತರಲ್ಲಿ ಆತಂಕ ಸೃಷ್ಟಿಸಿದೆ. ವರದಾ ನದಿಯಲ್ಲಿ ಈಗ ನೀರು ಹರಿಯುತ್ತಿದೆ. ಆದರೆ ನೀರು ಹರಿಸಲಾಗುತ್ತಿಲ್ಲ. ಬರದ ನಡುವೆ ಭರವಸೆಯನ್ನಿಟ್ಟುಕೊಂಡ ಬಾಳಂಬೀಡ ಏತ ನೀರಾವರಿ ರೈತರಲ್ಲಿ ಆತಂಕ ಮೂಡಿಸಿದೆ.

ಇನ್ನೂ ಬಾಳಂಬೀಡ ಏತ ನೀರಾವರಿ ಯೋಜನೆಯ ಬಹಳಷ್ಟು ಕೆರೆಗಳಿಗೆ ನೀರು ತಲುಪಿಲ್ಲ. ಕೆಲವು ಕೆರೆಗಳಿಗೆ ಸ್ವಲ್ಪ ಪ್ರಮಾಣದ ನೀರು ಹರಿದಿದೆ. ಈಗ ವರದಾ ನದಿಯಲ್ಲಿ ಚೆನ್ನಾಗಿ ನೀರು ಹರಿಯುತ್ತಿದೆ. ಆದರೆ ಮತ್ತೆ ವಿದ್ಯುತ್ ಸಮಸ್ಯೆಯ ಕಾರಣದಿಂದ ಕೆರೆಗಳಿಗೆ ನೀರು ಹರಿಸುವಿಕೆ ಸ್ಥಗಿತವಾಗಿರುವುದು ಮಾತ್ರ ಆತಂಕಕ್ಕೆ ಕಾರಣವಾಗಿದೆ.

ಈ ವರ್ಷ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದ ಕಾರಣಕ್ಕೆ ಇಂತಹ ಅನಾನುಕೂಲಗಳು ತಲೆದೋರುತ್ತಿವೆ ಎಂದು ರೈತರು ಕಿಡಿ ಕಾರುತ್ತಿದ್ದಾರೆ. ವಿದ್ಯುತ್ ವ್ಯತ್ಯಯ ಸರಿಪಡಿಸಲು ನೌಕರರ ಕೊರತೆಯೂ ಕಾರಣ ಎನ್ನಲಾಗಿದೆ. ಬರಗಾಲ ಭಯದಲ್ಲಿರುವ ರೈತರಿಗೆ ಆಶ್ರಯವಾಗಬೇಕಾದ ಬಾಳಂಬೀಡ ಏತ ನೀರಾವರಿ ಈ ಬಾರಿ ಅದೇಕೊ ರೈತರ ಪಾಲಿಗೆ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಆತಂಕ ಮನೆ ಮಾಡಿದೆ. ಬೃಹತ್ ನೀರಾವರಿ ಇಲಾಖೆ ಹಾಗೂ ಬಾಳಂಬೀಡ ಏತ ನೀರಾವರಿ ಯೋಜನೆ ಗುತ್ತಿಗೆ ನಿರ್ವಹಣೆದಾರರ ನಡುವೆ ಸಾಮರಸ್ಯ ಸಮನ್ವಯದ ಕೊರತೆಯೂ ಎದ್ದು ಕಾಣುತ್ತಿದೆ.

ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದಲೇ ವರದಾ ನದಿಯಲ್ಲಿ ನೀರು ಹರಿಯುತ್ತಿದೆ. ಅಲ್ಲಿಯೂ ಮಳೆ ಬಂದ ಆದರೆ, ಏತ ನೀರಾವರಿ ಹೀಗೇ ವಿದ್ಯುತ್ ಹಾಗೂ ಇತರ ಸಮಸ್ಯೆ ಹೇಳಿಕೊಂಡು ನೀರು ಹರಿಸಲು ಸಾಧ್ಯವಾಗದಿದ್ದರೆ ಅದರಿಂದ ಸಮಸ್ಯೆ ಎದುರಿಸಬೇಕಾದವರು ರೈತರೇ ಆಗಿದ್ದಾರೆ. ಇದಕ್ಕೆಲ್ಲ ಸಿಬ್ಬಂದಿ ಕೊರತೆಯೋ ನಿರ್ವಹಣೆಯ ಲೋಪವೇ ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ.

ಹಾವೇರಿ ಕೆಪಿಟಿಸಿಎಲ್ ೨೨೦ ಕೆವಿ ವಿದ್ಯುತ್ ವಿತರಣಾ ಘಟಕದ ಇಇ ವಿಜಯ ಜೋಶಿ ಶನಿವಾರ ಸಂಜೆ ಹಾನಗಲ್ಲ ಬೃಹತ್ ನೀರಾವರಿ ಇಲಾಖೆ ಎಇಇ ಹಾಗೂ ಬಾಳಂಬೀಡ ಏತ ನೀರಾವರಿ ಯೋಜನೆ ಗುತ್ತಿಗೆದಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಈ ಇಬ್ಬರಲ್ಲಿ ಸಮನ್ವಯದ ಕೊರತೆ ಇರುವುದು ಕಂಡು ಬಂದಿದ್ದು, ಸೋಮವಾರ ವಿಜಯ ಜೋಶಿ ಅವರು ಖುದ್ದಾಗಿ ಬಾಳಂಬೀಡ ಏತ ನೀರಾವರಿ ಯೋಜನೆ ಘಟಕ ಹಾಗೂ ವಿದ್ಯುತ್ ವಿತರಣಾ ಘಟಕಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.

ಕಳೆದ ಎರಡು ದಿನಗಳಿಂದ ಮತ್ತೆ ವಿದ್ಯುತ್ ಸಮಸ್ಯೆ ಕಾರಣದಿಂದ ಬಾಳಂಬೀಡ ಏತ ನೀರಾವರಿಯಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಲಾಗುತ್ತಿದೆ. ೪೦ ವಿದ್ಯುತ್ ಟಾವರ್‌ ಗಳನ್ನು ಪರೀಕ್ಷಿಸಲಾಗಿದೆ. ಇನ್ನೂ ೧೫ ಟಾವರ್ ಪರೀಕ್ಷಿಸಬೇಕಾಗಿದೆ. ನಾಳೆಯ ಹೊತ್ತಿಗೆ ನೀರು ಹರಿಸುವಿಕೆ ಆರಂಭ ಮಾಡುವ ಯತ್ನ ನಡೆದಿದೆ ಎಂದು ಬೃಹತ್‌ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಗಿರೀಶ ಹೇಳಿದರು.

ಮತ್ತೆ ವಿದ್ಯುತ್ ಸಮಸ್ಯೆ ಎಂದು ಬಾಳಂಬೀಡ ಏತ ನೀರಾವರಿ ನೀರು ಹರಿಸುವಿಕೆ ಬಂದ್ ಆಗಿರುವುದು ಖೇದದ ಸಂಗತಿ. ಬೃಹತ್ ನೀರಾವರಿ ಇಲಾಖೆ ಮುಂಗಾರು ಮಳೆ ಪೂರ್ವದಲ್ಲಿಯೇ ಸಿದ್ಧತೆ ಮಾಡಿಕೊಳ್ಳದಿರುವುದೇ ಈ ಎಲ್ಲ ಸಮಸ್ಯೆಗಳಿಗೆ ನಿಖರ ಕಾರಣ. ಆದರೆ ಈಗ ಅಧಿಕಾರಿಗಳು ನಂಬಲಾರದ ಕಾರಣ ಹೇಳುತ್ತಿರುವುದು ಮಾತ್ರ ರೈತರ ಪಾಲಿಗೆ ದೊಡ್ಡ ನಷ್ಟವಾಗುತ್ತಿದೆ. ಈ ಬಗ್ಗೆ ಶಾಸಕರನ್ನೊಳಗೊಂಡು ಸಭೆ ನಡೆಸಿದಾಗ ಅಧಿಕಾರಿಗಳು ಎಲ್ಲ ಸರಿ ಇದೆ ಎನ್ನುತ್ತಾರೆ. ಆದರೆ ಯಾವುದೂ ಸರಿಯಾಗಿಲ್ಲ ಎಂದು ತಾಲೂಕು ರೈತಸಂಘ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.