ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಕೆ ಆಗ್ರಹ

| Published : Aug 17 2024, 12:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಪ್ರಯೋಗಾಲಯದ ಸಿಬ್ಬಂದಿ, ಆಪ್ತ ಸಮಾಲೋಚಕರು, ಶೂಶೃಷಕರ ಸೇವೆ ಖಾಯಂ ಮಾಡುವಂತೆ ಆಗ್ರಹಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು ಶುಕ್ರವಾರ ಮುಷ್ಕರ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಪ್ರಯೋಗಾಲಯದ ಸಿಬ್ಬಂದಿ, ಆಪ್ತ ಸಮಾಲೋಚಕರು, ಶೂಶೃಷಕರ ಸೇವೆ ಖಾಯಂ ಮಾಡುವಂತೆ ಆಗ್ರಹಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು ಶುಕ್ರವಾರ ಮುಷ್ಕರ ನಡೆಸಿದರು.

ಈ ಸಂದರ್ಭದಲ್ಲಿ ಒಳಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಟಿ.ಗಾಜಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎನ್‌ಎ ಚ್ಎಂ ಒಳಗುತ್ತಿಗೆ ನೌಕರರನ್ನು ಖಾಯಂಗೊಳಿಸುವ ಭರವಸೆ ನೀಡಿದ್ದರು. ಸದ್ಯ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಒಳಗುತ್ತಿಗೆ ನೌಕರರ ಬೇಡಿಕೆಯನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.ಜಿಲ್ಲೆಯಲ್ಲಿ 1075 ಜನ ವೈದ್ಯರು, ಪ್ರಯೋಗಾಲಯದ ಸಿಬ್ಬಂದಿ ಆಪ್ತ ಸಮಾಲೋಚಕರು, ಶೂಶೃಷಕರು ಒಳಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ನಮಗೆ ಸೇವಾ ಭದ್ರತೆ ಇಲ್ಲವಾಗಿದ್ದು, ಇದರಿಂದ ನಮಗೆ ತೊಂದರೆಯಾಗಿದೆ. ರಾಜ್ಯದಲ್ಲಿ 28,256 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುಳೇದಗುಡ್ಡದಲ್ಲಿ 15 ಜನ ಸಿಬ್ಬಂದಿ ಒಳಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಸುಮಾರು ವರ್ಷಗಳಿಂದ ನಮ್ಮ ಏಕೈಕ ಬೇಡಿಕೆ ಎನ್ ಎಚ್ಎಂ ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕೆಂದು ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಟಿ.ಗಾಜಿ, ಆಯುಷ್ಯ ವೈದ್ಯೆ ಡಾ.ಕವಿತಾ ಸಂಕ, ಆಪ್ತ ಸಮಾಲೋಚಕಿ ಜಯಶ್ರೀ ಕಳಸಾ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹನಮಂತ ಅಪ್ಪನ್ನವರ, ಗಂಗಾಧರ ಹಣಗಿ, ತಬೀತಾ ಭೀರನೂರ, ಸವಿತಾ ಗಡೇದ, ಮಂಜುಳಾ ಚೌಡಾಪೂರ, ಲಕ್ಷ್ಮೀ ಹೆಬ್ಬಳ್ಳಿ, ಶಂಕ್ರಮ್ಮ ಕತ್ತಿಕೈ, ರಾಚಣ್ಣ ಪಟ್ಟಣದ, ಮಂಜುನಾಥ ಪದರಾ, ಶಕುಂತಲಾ ಹೊಸಮನಿ ಇದ್ದರು.

--------------------------

ಕೋಟ್‌

ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಸಂಘದ ರಾಜ್ಯಮಟ್ಟದ ನಿಯೋಗವು ಅನೇಕ ಭಾರಿ ಮುಖ್ಯಮಂತ್ರಿಗಳನ್ನು, ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ನೌಕರರನ್ನು ಖಾಯಂ ಮಾಡುವುದಕ್ಕೆ ಮನವಿ ಮಾಡಿಕೊಂಡಿದ್ದೇವೆ. ಆ.21 ರವರೆಗೆ ಕಪ್ಪು ಪಟ್ಟೆ ಧರಿಸಿ ಸೇವೆ ಮಾಡುತ್ತೇವೆ. ಸರ್ಕಾರ ಖಾಯಂ ಮಾಡುವ ಹೇಳಿಕೆ ನೀಡದಿದ್ದರೆ. ಸೇವೆಯಿಂದ ಹೊರಗುಳಿದು ಉಗ್ರ ಪ್ರತಿಭಟನೆ ಮಾಡುತ್ತೇವೆ.

ಡಾ.ಕೆ.ಟಿ.ಗಾಜಿ, ಒಳಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ