ಸುಮಾರು ವರ್ಷಗಳಿಂದ ನೆನಗುದಿಗೆ ಬಿದ್ದಂತಹ ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಯ 302 ಹುದ್ದೆಗಳಿಗೆ ಬಡ್ತಿ ನೀಡುವ ಕಾರ್ಯ ಬುಧವಾರ ನಗರದ ಮುನ್ಸಿಪಲ್ ಪ್ರೌಢಶಾಲೆಯ ಆವರಣದಲ್ಲಿ ಸುಸೂತ್ರವಾಗಿ ನಡೆಯಿತು.
ಹಾವೇರಿ: ಸುಮಾರು ವರ್ಷಗಳಿಂದ ನೆನಗುದಿಗೆ ಬಿದ್ದಂತಹ ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಯ 302 ಹುದ್ದೆಗಳಿಗೆ ಬಡ್ತಿ ನೀಡುವ ಕಾರ್ಯ ಬುಧವಾರ ನಗರದ ಮುನ್ಸಿಪಲ್ ಪ್ರೌಢಶಾಲೆಯ ಆವರಣದಲ್ಲಿ ಸುಸೂತ್ರವಾಗಿ ನಡೆಯಿತು.ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದದ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಗೆ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಚಾಲನೆ ನೀಡಿದೆ. ಶಿಕ್ಷಕರ ಸೇವೆಯನ್ನು ಆಧರಿಸಿ ಬಡ್ತಿ ನೀಡುವ ಎಲ್ಲ ತಯಾರಿಗಳನ್ನು ಇಲಾಖೆ ಮಾಡಿಕೊಂಡಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬುಧವಾರ ಬೆಳಗ್ಗೆಯೇ ಆಗಮಿಸಿದ್ದ ಶಿಕ್ಷಕರು ತಮ್ಮ ನೆಚ್ಚಿನ ಶಾಲೆಗೆ ಸರದಿ ಸಾಲಿನಲ್ಲಿ ಕುಳಿತು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.ಬಿರು ಬಿಸಿಲಿನ ತಾಪಮಾನದ ಏರಿಕೆ ನಡುವೆ, ಗಿಡ ಮರದ ನೆರಳಿನ ಆಸರೆಯಲ್ಲಿ ಸಹ ಶಿಕ್ಷಕರು ಕುಳಿತು ಚರ್ಚಿಸುತ್ತಿರುವುದು ಸಾಮಾನ್ಯವಾಗಿ ಕಂಡುಬಂದಿತು. ಒಳಗಿನಿಂದ ಕರೆ ಬರುತ್ತಿದ್ದಂತೆ ಕೊಠಡಿಯೊಳಗೆ ಪ್ರವೇಶ ಮಾಡಿ ಆನ್‌ಲೈನ್ ಮೂಲಕ ಜಿಲ್ಲೆಯಲ್ಲಿರುವ ವಿವಿಧ ಶಾಲೆಗಳಿಗೆ ನೋಂದಣಿ ಮಾಡಿಸಿ, ಹುದ್ದೆ ಬಡ್ತಿ ಪಡೆಯುವ ಪ್ರಕ್ರಿಯೆ ಸಂಜೆಯವರೆಗೂ ನಡೆಯಿತು. ಶಿಕ್ಷಕರಲ್ಲಿ ಸೇವೆಗೆ ಅನುಗುಣವಾಗಿ ಹೊಸ ಶಾಲೆಗೆ ಸೇರುವ ಹುರುಪು, ಉತ್ಸಾಹ ಕಂಡುಬಂದಿತು. ಶಿಕ್ಷಕರ ಸಂಘದ ನಿರಂತರ ಹೋರಾಟ, ಪ್ರಯತ್ನದ ಫಲವಾಗಿ ಶಿಕ್ಷಕರ ಬಡ್ತಿ ಕಾರ್ಯ ಯಶಸ್ವಿಯಾಗಿ ನಡೆಯುತ್ತಿರುವುದು ಹಾಗೂ ರಾಜ್ಯ ಸಂಘದ ಮಾರ್ಗದರ್ಶನದೊಂದಿಗೆ ಟಿಇಟಿಯನ್ನು ರದ್ದುಗೊಳಿಸಿ ಬಡ್ತಿ ಕೊಡಿಸುವ ಕಾರ್ಯವನ್ನು ಮಾಡಿರುವುದು ಖುಷಿಕೊಟ್ಟಿದೆ. ಸುದೀರ್ಘ ಸೇವೆ ಸಲ್ಲಿಸಿದ ಜಿಲ್ಲೆಯ ಶಿಕ್ಷಕರಿಗೆ ಬಡ್ತಿ ಭಾಗ್ಯವನ್ನು ಹಬ್ಬದ ರೀತಿಯಲ್ಲಿ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಿ. ಶಿಡೇನೂರ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಚಳ್ಳಾಳ ಹೇಳಿದರು.ಜಿಲ್ಲೆಯಲ್ಲಿ ಖಾಲಿ ಇರುವ ಕನ್ನಡ ಹಾಗೂ ಉರ್ದು ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಕಾರಿಗಳು ಹಾಗೂ ವೃಂದ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನಿಯಮಾನುಸಾರವಾಗಿ ಯಶಸ್ವಿಯಾಗಿ ನಡೆದಿದೆ. ಯಾವುದೇ ರೀತಿ ಲೋಪ ಕಂಡುಬಂದಿಲ್ಲ, ಬಡ್ತಿ ಪಡೆದ ಎಲ್ಲಾ ಮುಖ್ಯ ಶಿಕ್ಷಕರಿಗೆ ಅಭಿನಂದನೆಗಳು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ ಹೇಳಿದರು.