ಸಾರಾಂಶ
ಹುಬ್ಬಳ್ಳಿ: ಹಿಂದೂ ಧರ್ಮ, ನಂಬಿಕೆಗಳನ್ನು ನಾಶಮಾಡಬೇಕೆಂದು ಧರ್ಮಸ್ಥಳದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಅಪಪ್ರಚಾರದ ಹಿಂದೆ ದೊಡ್ಡ ಕೈವಾಡವಿದೆ. ಇದು ನೋವು ತಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಬೇಸರಿಸಿಕೊಂಡರು.
ಧಾರವಾಡ ಸಮೀಪದ ಸತ್ತೂರ ಬಳಿ ಬಂದಿದ್ದ ಅವರು, ಹುಬ್ಬಳ್ಳಿಗರು ಸಲ್ಲಿಸಿದ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದರು.ಕಾರಣವಿಲ್ಲದೆ ಧರ್ಮಸ್ಥಳದ ಬಗ್ಗೆ ಅಪವಾದ ಮಾಡುವುದು ಸರಿಯಲ್ಲ, ಧರ್ಮಸ್ಥಳದಲ್ಲಿ ಯಾವುದೇ ಅನ್ಯಾಯ, ದ್ರೋಹ, ವಂಚನೆ ನಡೆಯುವುದಿಲ್ಲ. ಈವರೆಗೂ ಅಲ್ಲಿ 17 ಸ್ಥಳಗಳಲ್ಲಿ ಅಗೆದಿದ್ದು ಏನೂ ಸಿಗಲಿಲ್ಲ. ಇವತ್ತು ಧರ್ಮಸ್ಥಳಕ್ಕೆ ಕಳಂಕ ಹಚ್ಚುವ ಪ್ರಯತ್ನ ನಡೆದಿದೆ. ನಾಳೆಯೂ ಇದೇ ರೀತಿ ಷಡ್ಯಂತ್ರ ರಚಿಸಿ ಇನ್ನೊಂದು ಪುಣ್ಯಕ್ಷೇತ್ರದ ಮೇಲೂ ಸುಳ್ಳು ಆರೋಪ ಮಾಡಬಹುದು ಎಂದರು.
ಅದಕ್ಕೆ ಇನ್ನಾದರೂ ನಾವೆಲ್ಲರೂ ಜಾಗೃತರಾಗಿರಬೇಕು. ನಮ್ಮ ಧರ್ಮವನ್ನು ನಾವು ರಕ್ಷಣೆ ಮಾಡಬೇಕು. ಬಹಳ ತಡವಾಗಿ ಹಿಂದೂ ಸಮಾಜ ಹೋರಾಟಕ್ಕಿಳಿದಿದೆ. ಮೊದಲೇ ಹೋರಾಟ ಪ್ರಾರಂಭಿಸಿದ್ದರೆ ಇಷ್ಟು ಉದ್ದಕ್ಕೆ ಬೆಳೆಯುತ್ತಿರಲಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡರು.ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಧರ್ಮಸ್ಥಳ ನಮ್ಮ ಸಂಸ್ಕೃತಿ, ಧರ್ಮ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತೀಕ. ಜನಹಿತ, ಅನ್ನ ದಾಸೋಹ, ಶಿಕ್ಷಣ, ಆರೋಗ್ಯ, ದೇವಾಲಯಗಳ ಜೀರ್ಣೋದ್ದಾರ ಇಂತಹ ಸೇವೆಯನ್ನೇ ಮಾಡುತ್ತಾ ಬಂದಿದೆ. ಈಗ ಮಾಡುತ್ತಿರುವ ಆರೋಪ ಹಿಂದೂ ಧಾರ್ಮಿಕ ಶ್ರದ್ಧಾಭಕ್ತಿ ಕೇಂದ್ರಗಳ ಮೇಲಿನ ವ್ಯವಸ್ಥಿತ ಪಿತೂರಿಯ ಭಾಗ. ಇವುಗಳು ಮತಾಂಧ ಮತ್ತು ರಾಜಕೀಯ ಷಡ್ಯಂತ್ರಗಳ ಭಾಗ ಎಂಬ ಅನುಮಾನ ಮೂಡಿದೆ. ಈ ಷಡ್ಯಂತ್ರ ಹಿಂದಿರುವವರ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಆಗ ಸತ್ಯ ಹೊರಗೆ ಬರುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುವ ತನಕ ಹೋರಾಟ ಮುಂದುವರಿಯುತ್ತದೆ. ನಾಳೆಯಿಂದ ಒಂದು ವಾರದವರೆಗೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದೆ ಎಂದರು.
ಈ ವೇಳೆ ವೀರೇಂದ್ರ ಹೆಗ್ಗಡೆ ಅವರಿಗೆ ಶ್ರೀ ಸಿದ್ಧಾರೂಢರ ವಿಗ್ರಹ, ರಾಷ್ಟ್ರಧ್ವಜದ ಫ್ರೇಮ್ ಹಾಗೂ ಸಸಿ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.ಈ ವೇಳೆ ಬಿಜೆಪಿ ಯುವಮುಖಂಡ ವೆಂಕಟೇಶ ಕಾಟವೆ, ಎಸ್.ಎಸ್.ಕೆ ಬ್ಯಾಂಕಿನ ಚೇರ್‌ಮನ್ ವಿಠ್ಠಲ ಲದವಾ, ಹುಡಾ ಮಾಜಿ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ, ಚಿಂತನ ಮಂಥನ ಸಮಿತಿ ಅಧ್ಯಕ್ಷ ಹನಮಂತಸಾ ನಿರಂಜನ, ಪ್ರಕಾಶ್ ಬುರ್ಬುರೆ, ಪ್ರವೀಣ ಪವಾರ, ವಿನಾಯಕ ಲದವಾ, ಮಿಥುನ್ ಚವ್ಹಾಣ, ಶೇಸುಸಾ ಜಿತೂರಿ, ಸುನಿಲ ವಾಳ್ವೇಕರ, ಎಂ.ಆರ್. ಸೋಳಂಕಿ, ವೆಂಕಟೇಶ್ ಬದ್ದಿ, ಗಣಪತಸಾ ಹಬೀಬ, ಗಜಾನನ ಹಬೀಬ ಸೇರಿದಂತೆ ಹಿಂದೂ ಸಮಾಜದ ಕಾರ್ಯಕರ್ತರು, ವಿಎಕೆ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.