ತಾಳಗುಪ್ಪದಲ್ಲಿ ಖಾಸಗಿ ಟ್ರಸ್ಟ್‌ ಪಾಲಾದ ಮುಜರಾಯಿ ದೇಗುಲದ ಆಸ್ತಿ!

| Published : Jan 12 2025, 01:18 AM IST

ಸಾರಾಂಶ

ರಾಜ್ಯದಲ್ಲಿ ವಕ್ಫ್‌ ಆಸ್ತಿ, ಮುಜರಾಯಿ ಆಸ್ತಿ ಅತಿಕ್ರಮಣ ಸುದ್ದಿಯಲ್ಲಿರುವಾಗಲೇ ತಾಳಗುಪ್ಪ ಗ್ರಾಮದಲ್ಲಿ ಪುರಾತನ ಮಹಾಗಣಪತಿ ವೀರಭದ್ರ ದೇವಸ್ಥಾನದ ನಿವೇಶನ ಖಾಸಗಿ ಟ್ರಸ್ಟ್‌ ಪಾಲಾದ ಘಟನೆ ಬೆಳಕಿಗೆ ಬಂದಿದೆ.

ತಾಳಗುಪ್ಪದಲ್ಲೊಂದು ಸರ್ಕಾರಿ ಆಸ್ತಿ ಪರಭಾರೆ ಆರೋಪ । ಪುರಾತನ ಮಹಾಗಣಪತಿ ವೀರಭದ್ರ ದೇವಸ್ಥಾನಕ್ಕೆ ಸೇರಿರುವ ನಿವೇಶನ

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ತಾಳಗುಪ್ಪ

ರಾಜ್ಯದಲ್ಲಿ ವಕ್ಫ್‌ ಆಸ್ತಿ, ಮುಜರಾಯಿ ಆಸ್ತಿ ಅತಿಕ್ರಮಣ ಸುದ್ದಿಯಲ್ಲಿರುವಾಗಲೇ ತಾಳಗುಪ್ಪ ಗ್ರಾಮದಲ್ಲಿ ಪುರಾತನ ಮಹಾಗಣಪತಿ ವೀರಭದ್ರ ದೇವಸ್ಥಾನದ ನಿವೇಶನ ಖಾಸಗಿ ಟ್ರಸ್ಟ್‌ ಪಾಲಾದ ಘಟನೆ ಬೆಳಕಿಗೆ ಬಂದಿದೆ.

ಏನಿದು ಘಟನೆ?:

ಸಾಗರ ತಾಲೂಕು ತಾಳಗುಪ್ಪ ಹೋಬಳಿಯ ತಾಳಗುಪ್ಪ ಗ್ರಾಮದಲ್ಲಿ ಶ್ರೀ ಮಹಾಗಣಪತಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯವಿದ್ದು, ಇದು ಮುಜರಾಯಿ ಇಲಾಖೆಯ ನಿಯಂತ್ರಣಕ್ಕೊಳಪಟ್ಟಿದೆ.

ಇಲಾಖೆಯ ನದರಿನಲ್ಲಿ ಶ್ರೀ ಮಹಾಗಣಪತಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಸಮಿತಿ ಎಂಬ ದಾಖಲೆಯಿದೆ. ಸಮಿತಿಯು ದೇವಸ್ಥಾನದ ನಿತ್ಯದ ಪೂಜೆ, ಪುನಸ್ಕಾರ ಹಾಗೂ ಆಸ್ತಿ, ಇತರ ನಿರ್ವಹಣೆಯನ್ನು ನಡೆಸುತ್ತಿದೆ. ಈ ದೇವಾಲಯದ ಪಕ್ಕದಲ್ಲಿ ಶ್ರೀ ರಂಗನಾಥ ಸ್ವಾಮಿ ಕಲ್ಯಾಣ ಮಂಟಪವಿದ್ದು, ಅದು ಶ್ರೀ ರಂಗನಾಥ ಸ್ವಾಮಿ ಕಲ್ಯಾಣ ಮಂದಿರ ಟ್ರಸ್ಟ್‌ ಎಂಬ ಖಾಸಗಿ ಸಂಸ್ಥೆಯ ಒಡೆತನದಲ್ಲಿದೆ. ಇದಕ್ಕೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ.

ಶ್ರೀರಂಗನಾಥ ಸ್ವಾಮಿ ಕಲ್ಯಾಣ ಮಂದಿರ ಟ್ರಸ್ಟ್‌ ಸಂಪೂರ್ಣ ಖಾಸಗಿಯಾಗಿದೆ. ಅದಕ್ಕೆ ಖಾಯಂ ಟ್ರಸ್ಟಿಗಳು ಇದ್ದು, ಅವರು ಆನುವಂಶಿಕ ಹಕ್ಕುದಾರರಾಗಿರುತ್ತಾರೆ ಎಂದು ತಿಳಿದು ಬಂದಿದೆ. ಈ ಟ್ರಸ್ಟ್‌ ತನ್ನ ಒಡೆತನದ ಕಲ್ಯಾಣ ಮಂದಿರವನ್ನು ಕಾರ್ಯಕ್ರಮ ನಡೆಸಲು ಪ್ರತಿ ಕಾರ್ಯಕ್ರಮಕ್ಕೆ 10-15 ಸಾವಿರ ರು. ನಂತೆ ಬಾಡಿಗೆಗೆ ನೀಡುತ್ತಿದೆ.

ಇತ್ತೀಚಿನವರೆಗೂ ಕಲ್ಯಾಣ ಮಂದಿರವಿರುವ ಸ್ಥಳವು ಕಲ್ಯಾಣ ಮಂದಿರ ಟ್ರಸ್ಟ್‌ನ ಸ್ವಂತ ಆಸ್ತಿ ಎಂದು ತಿಳಿಯಲಾಗಿತ್ತು. ಆದರೆ ಇತ್ತೀಚಿಗೆ ಲಭ್ಯವಾದ ದಾಖಲೆಯ ಆಧಾರದಲ್ಲಿ ಕಲ್ಯಾಣ ಮಂದಿರ ಇರುವ ಸ್ಥಳವು ಶ್ರೀ ಮಹಾಗಣಪತಿ ಮತ್ತು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆಸ್ತಿಯಾಗಿದೆ. ಅಂದರೆ ಮುಜರಾಯಿ ಆಸ್ತಿಯಾಗಿದ್ದು, ಅಕ್ರಮವಾಗಿ ಪರಭಾರೆ ಮಾಡಿರುವುದು ಕಂಡು ಬಂದಿದೆ.

ದಾಖಲೆ:

1988ರ ಡಿಸೆಂಬರ್ 15 ರಲ್ಲಿ .ಶ್ರೀ ಮಹಾಗಣಪತಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಸಮಿತಿಯು ಮುಜರಾಯಿ ದೇವಾಲಯಕ್ಕೆ ಸಂಬಂಧಿಸಿದ ಆಸ್ತಿಯಾದ ತಾಳಗುಪ್ಪ ಗ್ರಾಮ ಪಂಚಾಯತಿ ದಾಖಲೆಯ ನಂ.162 ರ ನಿವೇಶನದಲ್ಲಿ 180 ಅಡಿ ಉದ್ದ ಹಾಗೂ 80 ಅಡಿ ಅಗಲದ ಸ್ಥಳವನ್ನು ಕಲ್ಯಾಣ ಮಂದಿರದ ಟ್ರಸ್ಟ್‌ಗೆ ದಾನಪತ್ರದ ಮೂಲಕ ವರ್ಗಾಯಿಸಲಾಗಿದೆ. ದೇವಾಲಯ ಸಮಿತಿಯ ಕಾರ್ಯದರ್ಶಿ ಕಲ್ಯಾಣ ಮಂಟಪದ ಕಾರ್ಯದರ್ಶಿಗೆ ದಾನ ಪತ್ರ ಬರೆದು ಕೊಟ್ಟಿದ್ದಾರೆ.

ದಾನ ಪತ್ರವನ್ನು ಸಾಗರ ಸಬ್ ರಿಜಸ್ಟ್ರಾರ್ ಕಚೇರಿಯು 1988ರ ಡಿ.15 ರಂದು ಸೈಟಿನ ಬೆಲೆ 1000 (ಒಂದು ಸಾವಿರ) ರು. ಎಂದು ನಮೂದಿಸಿ 1ನೇ ಬುಕ್ಕಿನ 615ನೇ ಸಂಪುಟದ ನೇ 185-191 ಪುಟದಲ್ಲಿ 87-88 ನೇ ಸಾಲಿನ 1488 ನೇ ಸಂಖ್ಯೆಯಾಗಿ ನೋಂದಣಿ ಮಾಡಿರುತ್ತದೆ. ಈ ದಾಖಲೆಯನ್ನು ಆಧರಿಸಿ ಗ್ರಾಮ ಪಂಚಾಯಿತಿಯು ಕಲ್ಯಾಣ ಮಂಟಪದ ಹೆಸರಿನಲ್ಲಿ ದಾಖಲೆ ಮಾಡಿರುವುದಲ್ಲದೆ ಅದಕ್ಕೆ ಕಂದಾಯವನ್ನೂ ಮನ್ನಾ ಮಾಡಿದೆ.

ಈ ಹಿಂದೆಯೇ ತಹಸೀಲ್ದಾರ್‌ಗೆ ಮನವಿ:

ದೇವಸ್ಥಾನದ ಸಮಿತಿಯು ಕಲ್ಯಾಣ ಮಂಟಪ ಟ್ರಸ್ಟಿಗೆ ದೇವಾಲಯದ ಆಸ್ತಿಯನ್ನು ದಾನ ಪತ್ರ ಮಾಡಿ ಕೊಟ್ಟಿರುವುದು ಕಾನೂನುಬಾಹಿರ ಕೃತ್ಯವಾಗಿರುತ್ತದೆ. ಕಲ್ಯಾಣ ಮಂಟಪ ಸಮಿತಿಯು ಅಕ್ರಮವಾಗಿ ತನ್ನ ಸ್ವಾಧೀನತೆಗೆ ಪಡೆದುಕೊಂಡ ಸ್ಥಳವನ್ನು ವಶಪಡಿಸಿಕೊಂಡು ದೇವಸ್ಥಾನಕ್ಕೆ ಮರಳಿಸಬೇಕೆಂದೂ ಹಾಗೂ ಅಕ್ರಮವಾಗಿ ಆಸ್ತಿ ಪರಭಾರೆ ಮಾಡಿದ ದೇವಾಲಯ ಸಮಿತಿ ಹಾಗೂ ಅಕ್ರಮವಾಗಿ ಆಸ್ತಿ ಪಡೆದುಕೊಂಡ ಕಲ್ಯಾಣ ಮಂದಿರ ಟ್ರಸ್ಟಿನ ಮೇಲೆ, ಆಸ್ತಿ ದುರುಪಯೋಗಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೆಯೇ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.

ಇದು ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ ತರಿಸಿಕೊಂಡು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ

ಚಂದ್ರಶೇಖರ ನಾಯ್ಕ, ತ‌ಹಸೀಲ್ದಾರ್ , ಸಾಗರ.