ಸಾರಾಂಶ
ವಿ.ಎಂ. ನಾಗಭೂಷಣ
ಸಂಡೂರು: ತಾಲೂಕಿನ ಪ್ರಮುಖ ನಾಲ್ಕು ಅರಣ್ಯ ವಲಯಗಳಲ್ಲಿ ಒಂದಾದ ರಾಮನಮಲೈ (ರಾಮಘಡ) ಅರಣ್ಯ ವಲಯದಲ್ಲಿ ೬೦.೭೦ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೋರಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಪ್ರಸ್ತಾವನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ದಟ್ಟವಾಗಿ ಬೆಳೆದು ಪರಿಸರ ಸಮತೋಲನಕ್ಕೆ ಇಂಬು ನೀಡಿ, ವೈವಿಧ್ಯಮಯ ಪ್ರಾಣಿ, ಪಕ್ಷಿ ಸಂಕುಲಕ್ಕೆ ಆಶ್ರಯ ಕಲ್ಪಿಸಿದ್ದ ಸುಮಾರು ೨೯೪೦೦ ವಿವಿಧ ಜಾತಿಯ ಮರಗಳ ಅಸ್ತಿತ್ವಕ್ಕೆ ಇದೀಗ ಕುತ್ತು ಬಂದಿದೆ.ಪ್ರಸ್ತಾವಿತ ಪ್ರದೇಶದಲ್ಲಿ ಆಲ, ಅಕೇಷಿಯ, ಅಡವಿ ಬೇವು, ಅಡವಿ ಬಿಕ್ಕೆ, ಆಮ್ಲ, ಅಂಟುವಾಳ, ಬಿದಿರು, ಬುರುಗ, ಚಳ್ಳೆ, ಬಿಳಿ ಜಾಲಿ, ತೇಗ, ರಕ್ತಚಂದನ ಮುಂತಾದ ಸುಮಾರು ೯೧ ಜಾತಿಯ ಗಿಡಮರಗಳು ಇವೆ. ಇಲ್ಲಿ ಚಿರತೆ, ಚಿಪ್ಪುಹಂದಿ, ನವಿಲು, ಕೊಂಡಕುರಿ, ಕರಡಿ ಮುಂತಾದ ಪ್ರಾಣಿಗಳು ವೈವಿಧ್ಯಮಯ ಪಕ್ಷಿಸಂಕುಲವನ್ನೂ ಕಾಣಬಹುದಾಗಿದೆ.
ಗಣಿಗಾರಿಕೆಯ ಹೊಡೆತದ ಮಧ್ಯೆಯೂ ಅಲ್ಲಲ್ಲಿ ಇನ್ನೂ ತನ್ನ ಅಸ್ತಿತ್ವ ಉಳಿಸಿಕೊಂಡು, ಪ್ರಕೃತಿ ಪ್ರಿಯರನ್ನು, ಚಾರಣಿಗರನ್ನು ಆಕರ್ಷಿಸುತ್ತಿರುವ, ಪರಿಸರ ಸಮತೋಲನವನ್ನು ಕಾಪಾಡುತ್ತಾ ವೈವಿಧ್ಯಮಯ ಪ್ರಾಣಿ ಪಕ್ಷಿ ಸಂಕುಲಕ್ಕೆ ಆಶ್ರಯ ತಾಣವಾಗಿದ್ದ ರಾಮನಮಲೈನ ಅರಣ್ಯಕ್ಕೆ ಹೊಸದಾಗಿ ಗಣಿಗಾರಿಕೆ ಆರಂಭಿಸುವ ಪ್ರಸ್ತಾವದಿಂದಾಗಿ ಸಂಕಷ್ಟ ಎದುರಾಗಿದೆ. ಇದು ಪರಿಸರವಾದಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಸಿ.ಕೆಟಗರಿಯಲ್ಲಿರುವ ಗಣಿ ಪ್ರದೇಶಗಳಲ್ಲಿ ಅನುಮತಿ ನೀಡಬೇಕು. ಇಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡಬಾರದೆಂಬ ಮಾತುಗಳು ಪರಿಸರಾಸಕ್ತರಿಂದ ಕೇಳಿಬಂದಿದೆ.೨೦೧೬ರ ತೀರ್ಮಾನಕ್ಕೆ ಅರಣ್ಯ ಇಲಾಖೆ ಬದ್ಧವಾಗುವುದೇ?:
೨೦೧೬ರ ಮಾರ್ಚ್ ೨೮ರಂದು ಪ್ರಿನ್ಸಿಪಲ್ ಚೀಫ್ ಕನ್ಸರ್‌ವೇಟರ್ ಆಫ್ ಫಾರೆಸ್ಟ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನಕ್ಕೆ ಅರಣ್ಯ ಇಲಾಖೆ ಬದ್ಧವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಈ ತೀರ್ಮಾನಕ್ಕೆ ಅರಣ್ಯ ಇಲಾಖೆ ಬದ್ಧವಾದಲ್ಲಿ ಈ ಭಾಗದಲ್ಲಿ ಹೊಸದಾಗಿ ಗಣಿಗಾರಿಕೆಗೆ ಬ್ರೇಕ್ ಬೀಳಲಿದೆ ಹಾಗೂ ಅರಣ್ಯವೂ ಉಳಿಯಲಿದೆ ಎಂಬ ಆಶಾಭಾವನೆ ಪರಿಸರಾಸಕ್ತರಲ್ಲಿ ಮೂಡಿದೆ.ಹೊಸದಾಗಿ ಗಣಿಗಾರಿಕೆಗೆ ಪರವಾನಿಗೆಗೆ ಶಿಫಾರಸು ಮಾಡದಂತೆ ಮನವಿ:
ಪರಿಸರದ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಜನ ಸಂಗ್ರಾಮ ಪರಿಷತ್ ಮುಖಂಡರು ಇತ್ತೀಚೆಗೆ ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವರಿಗೆ ಪತ್ರವನ್ನು ಬರೆದು, ೨೦೦೦-೨೦೧೦ರವರೆಗೆ ಅವ್ಯಾಹತವಾಗಿ ನಡೆದಿದ್ದ ಅವೈಜ್ಞಾನಿಕ ಗಣಿಗಾರಿಕೆಯಿಂದಾಗಿ ಸಂಡೂರು ಭಾಗದ ಜನಜೀವನ, ಕೃಷಿ, ಆರೋಗ್ಯ ಸೇರಿದಂತೆ ಎಲ್ಲ ವಲಯಗಳ ಮೇಲೆ ಗಂಭೀರವಾದ ದುಷ್ಪರಿಣಾಮ ಬೀರಿತ್ತು. ಈಗಾಗಲೇ ತಾಲೂಕಿನಲ್ಲಿಯ ಎ, ಬಿ ಹಾಗೂ ಸಿ ಕೆಟಗರಿಯ ಗಣಿಗಳಿಂದ ವಾರ್ಷಿಕ ಅಂದಾಜು ೪೫ ಮಿಲಿಯನ್ ಟನ್ ಅದಿರನ್ನು ಉತ್ಪಾದಿಸಲಾಗುತ್ತಿದೆ ಎಂದಿದೆ.ಮಿತಿಮೀರಿದ ಅರಣ್ಯ ನಾಶದಿಂದಾಗಿ ವನ್ಯಜೀವಿ ಸಂಕುಲಗಳು ಅವಸಾನದ ಅಂಚಿಗೆ ಬಂದಿವೆ. ಹವಮಾನ ಬದಲಾವಣೆಯಂತಹ ಕ್ಲಿಷ್ಟವಾದ ವಾತಾವರಣದ ಹಂತದಲ್ಲಿ ತಾಲೂಕು ಸೇರಿದಂತೆ ರಾಜ್ಯದ ಅರಣ್ಯ ಪ್ರದೇಶದಲ್ಲಿ ಗಣಿ ಚಟುವಟಿಕೆಗೆ ಸಂಬಂಧಿಸಿದಂತೆ ಬರುವ ಪ್ರಸ್ತಾವನೆಗಳನ್ನು ಆರಂಭದಲ್ಲಿಯೇ ತಿರಸ್ಕರಿಸಬೇಕು ಎಂದು ಮನವಿ ಮಾಡಿದೆ.
ಸಂಡೂರಿನ ದಟ್ಟ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡದೇ ಇಲ್ಲಿನ ಸುಂದರ ಪರಿಸರ, ಅಲ್ಲಿನ ಜೀವ ವೈವಿಧ್ಯ ಸಂರಕ್ಷಿಸಿ ಪೋಷಿಸಿದಲ್ಲಿ, ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್ ಎಂಬ ಮಾತು ಶಾಶ್ವತವಾಗಿ ಉಳಿಯುತ್ತದೆ. ಇದರಿಂದ ಪರಿಸರ ಸಮತೋಲನಕ್ಕೂ ದಾರಿ ಮಾಡಿಕೊಟ್ಟಂತಾಗುತ್ತದೆ. ಇಲ್ಲಿನ ಪರಿಸರ ವೈವಿಧ್ಯಮಯ ಜೀವ ಸಂಕುಲಕ್ಕೂ ಆಹಾರ ಹಾಗೂ ಆಶ್ರಯ ಒದಗಿಸಲಿದೆ ಎಂಬುದು ಪರಿಸರಾಸಕ್ತರ ಆಶಯವಾಗಿದೆ.ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮವು ಈಗಾಗಲೇ ತಾಲೂಕಿನ ಎರಡು ಅರಣ್ಯ ಬ್ಲಾಕ್‌ಗಳಲ್ಲಿ ಅರಣ್ಯ ಅಭಿವೃದ್ಧಿಗೆ ₹೧೩೫ ಕೋಟಿ ಅನುದಾನ ನೀಡಿದೆ. ಈಗ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ಕಲ್ಪಿಸುವ ಪ್ರಕ್ರಿಯೆ ನಡೆದಿರುವುದು ಸರ್ಕಾರದ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಸರ್ಕಾರ ಅವಕಾಶ ನೀಡಬಾರದು. ಇಲ್ಲಿನ ಉತ್ತಮ ಪರಿಸರವನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೂ ತಲುಪಿಸುವ ಅಗತ್ಯವಿದೆ ಎನ್ನುತ್ತಾರೆ ಜನ ಸಂಗ್ರಾಮ ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಶೈಲ ಆಲ್ದಳ್ಳಿ.