ಆಳಂದ ತಾಲೂಕಿನ ಧುತ್ತರಗಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಬಾಲಕಿಯರ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಆಳಂದ ತಾಲೂಕಿನ ಧುತ್ತರಗಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಬಾಲಕಿಯರ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಈ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಅರ್ಹತೆ ಪಡೆದಿದ್ದರೆ, ಇನ್ನಿಬ್ಬರು ದ್ವಿತೀಯ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ. ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದವರು.37 ಕೆ.ಜಿ. ವಿಭಾಗ: ಲಕ್ಷ್ಮಿ ಭೀಮರಾಯ, 41 ಕೆ.ಜಿ. ವಿಭಾಗ: ಸುಂದರಬಾಯಿ ಶಂಭುಲಿಂಗ, 47 ಕೆ.ಜಿ. ವಿಭಾಗ: ಸೋನಿಲಾ ಶರಣಪ್ಪ, 65 ಕೆ.ಜಿ. ವಿಭಾಗ: ಲಕ್ಷ್ಮಿ ಅಂಬರೀಶ ಪ್ರಥಮಸ್ಥಾನ ಪಡೆದು ರಾಜ್ಯಕ್ಕೆ ಆಯ್ಕೆಯಾಗಿದ್ದಾರೆ.
44 ಕೆ.ಜಿ. ವಿಭಾಗ: ಧನಿಕ ಸಿದ್ದರಾಮ, 48 ಕೆ.ಜಿ. ವಿಭಾಗ: ಅಂಬರೀಶ ಮಾಳಪ್ಪ ಮೇತ್ರಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಮುಖ್ಯ ಗುರುಗಳ ಹರ್ಷ: ನಮ್ಮ ಗ್ರಾಮೀಣ ಪ್ರತಿಭೆಗಳು ಜಿಲ್ಲಾಮಟ್ಟದಲ್ಲಿ ಮಿಂಚಿ, ರಾಜ್ಯಮಟ್ಟದ ಅಖಾಡಕ್ಕೆ ಕಾಲಿರಿಸುತ್ತಿರುವುದು ಶಾಲೆಗೆ ಮಾತ್ರವಲ್ಲ, ಇಡೀ ಊರಿಗೇ ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಗ್ರಾಮಸ್ಥರ ಪ್ರೋತ್ಸಾಹದ ಫಲವೇ ಈ ಸಾಧನೆ. ರಾಜ್ಯಮಟ್ಟದಲ್ಲೂ ಇವರು ಜಯ ಗಳಿಸಿ ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಮುಖ್ಯ ಶಿಕ್ಷಕ ಮರೆಪ್ಪ ಬಡಿಗೇರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಜಾವಳಿ ಹಾಗೂ ಸದಸ್ಯರು, ಸಿಬ್ಬಂದಿ, ದೈಹಿಕ ಶಿಕ್ಷಣ ಶಿಕ್ಷಕಿ ಡಾ. ನೂರ್ಜಹಾನ್ ಸೇರಿ ಗ್ರಾಮದ ಶಿಕ್ಷಣ ಪ್ರೇಮಿಗಳು ಶುಭ ಕೋರಿ ಹರ್ಷ ವ್ಯಕ್ತಪಡಿಸಿದ್ದಾರೆ.