ಸಾರಾಂಶ
ಮಾರುತಿ ಶಿಡ್ಲಾಪುರಕನ್ನಡಪ್ರಭ ವಾರ್ತೆ ಹಾನಗಲ್ಲ ನೇರಲ ಹಣ್ಣು ಬೇಕೇನ್ರಿ... ನೇರಳೆ ಹಣ್ಣು... ಎಂದು ಮುಂಗಾರಿನ ಹೊತ್ತಿಗೆ ಬೀದಿ ಬೀದಿಗಳಲ್ಲಿ ನೇರಳೆ ಹಣ್ಣು ಹೊತ್ತು ಮಾರುತ್ತಿರುವ ಮಹಿಳೆಯರ ಸಂಖ್ಯೆ ಈಗ ತೀರ ವಿರಳವಾಗುತ್ತಿದೆ. ಅಲ್ಲೊಬ್ಬ ಇಲ್ಲೊಬ್ಬ ಮಹಿಳೆಯರು ಹಣ್ಣು ಮಾರುವುದು ಕಂಡು ಬರುತ್ತಿದೆಯಾದರೂ ಕೊಳ್ಳುವವರೂ ವಿರಳವೇ ಆಗಿದೆ.ಮಲೆನಾಡಿನಿಂದ ಕೂಡಿದ್ದ ಹಾನಗಲ್ಲ ತಾಲೂಕು ಈಗ ಮರಗಳ ಮಾರಣ ಹೋಮದಿಂದ ಬಯಲುಸೀಮೆಯಾಗಿದೆ. ಊರೂರಲ್ಲಿ ನೇರಳೆ ಗಿಡಗಳು ಮುಂಗಾರು ಮಳೆಯ ಹೊತ್ತಿನಲ್ಲಿ ದಾರಿ ಹೋಕರಿಗೆ ರುಚಿಯಾದ ಹಣ್ಣು ನೀಡುತ್ತಿದ್ದವು. ರಸ್ತೆ ಪಕ್ಕದಲ್ಲಿ ದೊಡ್ಡ ದೊಡ್ಡ ನೇರಳೆ ಮರಗಳಿರುತ್ತಿದ್ದವು. ಆದರೆ ರಸ್ತೆ ಅಗಲೀಕರಣದಲ್ಲಿ ಅವೆಲ್ಲವನ್ನು ಕತ್ತರಿಸಿ ಹಾಕಲಾಗಿದೆ. ಆದರೂ ಕೆಲವೆಡೆ ಅರಣ್ಯ ಇಲಾಖೆ ನೇರಳೆ ಮರಗಳನ್ನು ನೆಟ್ಟಿದ್ದರೂ ಅನ್ಯ ಕಾರಣಕ್ಕೆ ಆ ಗಿಡಗಳೂ ಈಗ ಇಲ್ಲದಾಗಿವೆ. ವಿರಳವಾಗಿ ಅಲ್ಲಲ್ಲಿ ಸಿಗುತ್ತವೆ ಅಷ್ಟೇ.ನೇರಳೆ ಹಣ್ಣು ಋತುಮಾನದ ಬೆಳೆ. ಇದು ಮುಂಗಾರು ಮಳೆ ಹೊತ್ತಿಗೆ ಮಾವಿನ ಹಣ್ಣಿಗಿಂತ ಸ್ವಲ್ಪ ತಡವಾಗಿ ಸಿಗುತ್ತದೆ. ಜಂಬು ನೇರಳೆ, ನೀಲಾಂಜನಚ್ಛರ, ಸುರಭಿ, ಮೇಘ ಮೋದಿನಿ, ನೀಲಾಫಲ ಮುಂತಾದ ಹೆಸರಿನಲ್ಲಿ ಕರೆಯುವ ಹಣ್ಣು ಇದಾಗಿದೆ. ಇಲ್ಲಿನ ಗ್ರಾಮಗಳಲ್ಲಿ ನೀರಲ ಹಣ್ಣು ಎಂದೇ ಖ್ಯಾತಿಯಾಗಿದೆ. ಈ ಮರ ನಿತ್ಯ ಹರಿದ್ವರ್ಣದ ಮರ. ಇದು ಅತ್ಯಂತ ಆಯುರ್ವೇದ ಶಕ್ತಿ ಹೊಂದಿದ ಮರ ಹಾಗೂ ಹಣ್ಣು. ಇದರ ಬೀಜವೂ ಔಷಧವಾಗಿ ಬಳಕೆಯಾಗುತ್ತದೆ. ಮಧುಮೇಹ, ಹೃದಯರೋಗ, ವಾಕರಿಕೆ-ವಾಂತಿ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆದು ಇವನ್ನು ಬಳಸಲಾಗುತ್ತದೆ. ಪಟ್ಟಣಗಳಲ್ಲಿ ಈಗ ಕಸಿ ಮಾಡಿದ ಹೈಬ್ರಿಡ್ ಗಿಡದ ಹಣ್ಣುಗಳು ಕೂಡ ಮಾರಾಟಕ್ಕೆ ಲಭ್ಯ. ಹೊಸ ತಳಿಗಳನ್ನು ಮಾರುಕಟ್ಟೆಗೆ ತರಲಾಗಿದೆ. ಸಣ್ಣ ದೊಡ್ಡ ಗಾತ್ರದ ನೇರಳೆ ಹಣ್ಣುಗಳಿವೆ. ಇದರ ಕೃಷಿಯಿಂದ ಉತ್ತಮ ಲಾಭ ಪಡೆದ ರೈತರು ಕೂಡ ಇದ್ದಾರೆ.ಹಳ್ಳಿಗಳಲ್ಲಿ ಮಕ್ಕಳು ಬತ್ತ, ರಾಗಿ, ಅಕ್ಕಿ, ಜೋಳ ಸೇರಿದಂತೆ ವಿವಿಧ ಬೇಳೆ ಕಾಳುಗಳನ್ನು ಕೊಟ್ಟು ನೇರಳೆ ಹಣ್ಣು ಖರೀದಿಸುವ ದೃಶ್ಯಗಳು ಕಾಣುತ್ತಿದ್ದವು. ಹಳ್ಳಿಗಳಲ್ಲಿ ರೊಟ್ಟಿ, ಅನ್ನ ಕೊಟ್ಟು ಕೂಡ ನೇರಳೆ ಹಣ್ಣನ್ನು ಹಣ್ಣು ಮಾರುವವರಿಂದ ಪಡೆಯುತ್ತಿದ್ದ ಕಾಲವಿತ್ತು. ಆದರೀಗ ಎಲ್ಲವೂ ಕಾಂಚಾಣಮಯ. ವಿಶೇಷವಾಗಿ ಲಂಬಾಣಿ ಸಮುದಾಯದ ಮಹಿಳೆಯರು ಕಾಡು ಪ್ರದೇಶಕ್ಕೆ ಹೋಗಿ ಹಣ್ಣು ಹರಿದು ತಂದು ಹಳ್ಳಿ ಹಳ್ಳಿಗಳಿಗೆ ಕಾಲ್ನಡಿಯಲ್ಲಿ ನಡೆದು ಹಣ್ಣು ಮಾರುತ್ತಿದ್ದರು. ಆದರೀಗ ಅಲ್ಲೊಬ್ಬ ಇಲ್ಲೊಬ್ಬ ಮಹಿಳೆಯರು ನೇರಳೆ ಹಣ್ಣು ಮಾರುವುದು ಕಾಣುತ್ತದೆ.ಈಗ ನೇರಳೆ ಮರಗಳ ಸಂಖ್ಯೆ ತೀರ ಕಡಿಮೆಯಾಗಿದೆ. ಮರ ಹತ್ತಿ ಹರಿಯುವುದು ಕೂಡ ಅಷ್ಟೇ ಕಷ್ಟದ ಕೆಲಸ. ನೇರಳೆ ಹಣ್ಣು ಮಾರುವವರ ಮನೆಯ ಗಂಡಸರು ಕಾಡಿಗೆ ಹೋಗಿ ಮರ ಹತ್ತಿ ಹಣ್ಣು ಹರಿದು ತಂದು ಕೊಡುತ್ತಾರೆ. ಅವನ್ನು ಮಹಿಳೆಯರು ಮಾರುತ್ತಾರೆ. ಇಡೀ ದಿನ ಒಂದು ಬುಟ್ಟಿ ಹಣ್ಣು ಮಾರಿದರೆ ಐದಾರು ನೂರು ರು. ಉಳಿಯುತ್ತಿದೆ ಅಷ್ಟೇ. ಹತ್ತಾರು ವರ್ಷಗಳಿಂದ ಈ ಹಣ್ಣು ಮಾರುವ ವೃತ್ತಿ ಮಾಡುತ್ತಲೇ ಬಂದವರು ಈ ಸಮಯದಲ್ಲಿ ನೇರಳೆ ಹಣ್ಣು ಮಾರಲು ಮುಂದಾಗುತ್ತಾರೆ. ಉಳಿದೆಲ್ಲ ದಿನಗಳಲ್ಲಿ ಕೂಲಿ ಕಾರ್ಯ ಮಾಡಿಕೊಂಡಿರುತ್ತಾರೆ. ನಮ್ಮ ಪರಿಸರದ ಆರೋಗ್ಯಕ್ಕೆ ಅನುಕೂಲವಾದ ಇಂತಹ ಹಣ್ಣುಗಳ ಗಿಡಗಳನ್ನು ಉಳಿಸಬೇಕಾಗಿದೆ.ಆರೇಳು ವರ್ಷಗಳಿಂದ ನೀರಲ ಹಣ್ಣು ಮಾರುತ್ತಿದ್ದೇನೆ. ಊರಿನ ಜಮೀನಿನಲ್ಲಿ ಗಿಡ ಸಿಗುತ್ತಿದ್ದವು. ಆದರೆ ಈಗ ಕಾಡಿಗೆ ಹೋಗಿ ಹಣ್ಣು ಹರಿದು ತರಬೇಕು. ಕಾಡಿನಲ್ಲಿ ಕೂಡ ಮಂಗ ಸೇರಿದಂತೆ ವಿವಿಧ ಪಕ್ಷಿಗಳು ತಿಂದುಳಿದ ಹಣ್ಣು ಆಯ್ಕೆ ಮಾಡಿ ತರಬೇಕು. ಕೊಳ್ಳುವ ಜನರೂ ಕಡಿಮೆ. ಭಾರೀ ಚೌಕಾಸಿ ಮಾಡುತ್ತಾರೆ. ಒಂದು ದಿನಕ್ಕೆ ಒಂದು ಬುಟ್ಟಿ ಹಣ್ಣು ಮಾರಿದರೆ ಬಹಳ ಎಂದರೆ ಐದಾರು ನೂರು ರುಪಾಯಿ ಉಳಿಯುತ್ತದೆ. ಸೀಜನ್‌ನಲ್ಲಿ ನೀರಲ ಹಣ್ಣು ಮಾರಿ ಉಳಿದ ದಿನಗಳಲ್ಲಿ ಕೃಷಿ ಕೆಲಸಕ್ಕೆ ಹೋಗುತ್ತೇವೆ ಎಂದು ಓಣಿಕೇರಿಯ ಹಣ್ಣು ಮಾರುವ ಮಹಿಳೆ
ಗಿರಿಜಮ್ಮ ಕೃಷ್ಣಮತ ಹೇಳುತ್ತಾಳೆ.