ಮಕ್ಕಳ ಪ್ರತಿಭೆ ಗುರುತಿಸುವುದೇ ಶಿಕ್ಷಣದ ಉದ್ದೇಶ

| Published : Jan 08 2024, 01:45 AM IST

ಮಕ್ಕಳ ಪ್ರತಿಭೆ ಗುರುತಿಸುವುದೇ ಶಿಕ್ಷಣದ ಉದ್ದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಪ್ರತಿಭೆ ಗುರುತಿಸುವುದೇ ಶಿಕ್ಷಣದ ಉದ್ದೇಶ

ಕನ್ನಡಪ್ರಭ ವಾರ್ತೆ ಜಮಖಂಡಿ

ಮಕ್ಕಳಲ್ಲಿ ಸೂಪ್ತವಾಗಿ ಹುದುಗಿರುವ ದೈಹಿಕ, ಬೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರತಿಭೆ ಗುರುತಿಸುವುದೇ ಶಿಕ್ಷಣದ ಮೂಲ ಉದ್ದೇಶವಾಗಿದೆ ಎಂದು ವಿಶ್ರಾಂತ ಡಿಡಿಪಿಐ ಎಂ.ಜಿ. ದಾಸರ ಹೇಳಿದರು.

ಸ್ಥಳೀಯ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಬಸವ ಸಂಭ್ರಮ-2024ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವ ಪ್ರಭೆ ಜ್ಞಾನ ಪ್ರಭೆಯಾಗಬೇಕಾದರೆ ಪಾಲಕರು ತಮ್ಮ ಮಕ್ಕಳಿಗೆ ಆದರ್ಶವಾಗಬೇಕು. ಮಕ್ಕಳು ಶಾಲಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳಿಗೆ ಪಾಲಕರು ಜೋತು ಬೀಳದೇ ಮಾನವೀಯ ಮೌಲ್ಯಗಳನ್ನು ಬೆಳೆಸುವತ್ತ ಗಮನ ಹರಿಸಬೇಕು. ಮಕ್ಕಳು ತಮ್ಮ ಗುರಿ ಮುಟ್ಟುವ ಶಿಕ್ಷಣಕ್ಕೆ ಪಾಲಕರು ಆದ್ಯತೆ ನೀಡಬೇಕು ಎಂದರು.

ಪ್ರಾಚಾರ್ಯ ಡಾ.ಟಿ.ಪಿ.ಗಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಕೌಶಲ, ಶೈಕ್ಷಣಿಕ ಪ್ರಗತಿ, ಧನಾತ್ಮಕ ವರ್ತನೆ ಹಾಗೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳಲು ವಾರ್ಷಿಕ ಸ್ನೇಹ ಸಮ್ಮೇಳನ ಮಕ್ಕಳಿಗೆ ಪೂರಕವಾಗಿದೆ. ಮಕ್ಕಳಲ್ಲಿ ಭಾವನಾತ್ಮಕ ಸಂಬಂಧಗಳು ಗಟ್ಟಿಯಾಗಲು, ಸಾಮಾಜಿಕ ಪರಿಸರದ ವಿಸ್ತರಣೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಅವಕಾಶ ನೀಡುತ್ತದೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಬಿ.ವಿ. ಬುದ್ನಿ ಮಾತನಾಡಿ, ವಾರ್ಷಿಕ ಸ್ನೇಹ ಸಮ್ಮೇಳನ ಮಗುವಿಗೆ ಕೇವಲ ಮನರಂಜನೆಯಾಗದೆ ಮಗುವಿನ ಪ್ರತಿಭೆ ಗುರುತಿಸುವ ವೇದಿಕೆಯಾಗಬೇಕು ಎಂದರು.

ಸುಮಾ ಮಠಪತಿ, ಶಬಾನಾ ನದಾಫ ಪ್ರಾರ್ಥನೆ ಗೀತೆ ಹಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಗಿರೀಶ ಕಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆರ್.ಎಂ. ಶೇಖ ವರದಿ ವಾಚನ ಮಾಡಿದರು. ಶಿಕ್ಷಕಿ ಸುನಿತಾ ಕುಮಕಾಳೆ ಕ್ರೀಡಾ ವರದಿ ಸಾದರ ಪಡಿಸಿದರು. ಅಕ್ಷರಾ ತೇಲಿ ನಿರೂಪಿಸಿದರು. ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ವಂದಿಸಿದರು. ನಂತರ ಮಕ್ಕಳಿಂದ ವೈವಿದ್ಯಮಯ ಸಾಂಸ್ಕೃತಿಕ, ಪರಿಸರ ಸ್ನೇಹಿ ಮತ್ತು ಮನರಂಜನೆ ಕಾರ್ಯಕ್ರಮಗಳು ಜರುಗಿದವು.