ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜೀವನದ ಉದ್ದೇಶ ಸಂತೋಷವಾಗಿರುವುದು ಎಂದು ಕಿರುತೆರೆಯ ನಟ ಎಚ್. ಅಶ್ವಿನ್ ತಿಳಿಸಿದರು.ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಬಿಸಿಎ ಟೆಕ್ ಫೆಸ್ಟ್ ಸ್ಪಾರ್ಕ್ ಟೆಕ್ತ್ರ- 2025 ಪರಮ್ ಲೋಗೋವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಾಲೇಜು ಜೀವನವನ್ನು ಆನಂದಿಸಿ ಮತ್ತು ನಕರಾತ್ಮಕ ಶಕ್ತಿಗಳಿಂದ ಪ್ರಭಾವಿತರಾಗದೆ, ಸಕಾರಾತ್ಮಕ ಆಲೋಚನೆಗಳನ್ನು ರೂಢಿಸಿಕೊಂಡು ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಕಂಪ್ಯೂಟರ್ ವಿಜ್ಞಾನವು ಪ್ರಸ್ತುತ ಜಗತ್ತಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಕಂಪ್ಯೂಟರ್ ಕ್ಷೇತ್ರದಲ್ಲಿ ಪರಮ್ ಅತ್ಯುತ್ತಮ ಆವಿಷ್ಕಾರವಾಗಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ ಮಾತನಾಡಿ, ಇದು ಕಂಪ್ಯೂಟರ್ ಯುಗವಾಗಿದ್ದು, ಶಿಕ್ಷಣದ ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರ ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಬಿ. ಧ್ರುವಕುಮಾರ್, ಫೆಸ್ಟ್‌ಸಂಯೋಜಕ ಎಂ. ಸತೀಶ್ ಕುಮಾರ್, ಸಹ ಸಂಯೋಜಕ ಎಸ್. ಮಧು ಇದ್ದರು.ಎಸ್.ಎನ್. ಕೀರ್ತನಾ ತಂಡದವರು ಪ್ರಾರ್ಥಿಸಿದರು. ಸಾನ್ವಿ ರಾಘವೇಂದ್ರ ಉಡುಪ ಸ್ವಾಗತಿಸಿದರು. ಟಿ.ಎಂ. ಭೂಮಿಕಾ ವಂದಿಸಿದರು. ಆರ್. ಧನ್ಯಾ ಮತ್ತು ಪೂರ್ವಿ ರಾವ್ ನಿರೂಪಿಸಿದರು.
ಚಾರು ಮಂಜೂಷಾ-4 ಕಾರ್ಯಕ್ರಮ ಯಶಸ್ವಿಕನ್ನಡಪ್ರಭ ವಾರ್ತೆ ಮೈಸೂರು
ಚಾರು ಸಾಂಸ್ಕೃತಿಕ ಪ್ರತಿಷ್ಠಾನವು ತನ್ನ ಚಾರುಮಂಜೂಷಾ -4 ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಿತ್ತು.ವರ್ತುಲ ರಸ್ತೆಯ ಎಸ್.ಬಿ.ಎಂ. ಮತ್ತು ಇತರ ಬ್ಯಾಂಕ್ ನೌಕರರ ಕ್ಷೇಮಾಭಿವೃದ್ಧಿ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನಿ ಕೊಳ್ಳೇಗಾಲ ಶರ್ಮ ಪಾಲ್ಗೊಂಡಿದ್ದರು.
ಪ್ರತಿಷ್ಠಾನದ ಅಧ್ಯಕ್ಷೆ ಡಿ. ಶೀಲಾ ಕುಮಾರಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಅತಿಥಿಗಳನ್ನು ಪರಿಚಯಿಸಿದರು. ವಿಜ್ಞಾನ ಎಂದರೇನು? ಎಂಬ ವಿಷಯದ ಕುರಿತು ಅರಿವು ಮೂಡಿಸಿದ ಕೊಳ್ಳೇಗಾಲ ಶರ್ಮ ಅವರು, ಪುರಾಣದ ಕಥೆಗಳಿಗೂ, ಮೂಢನಂಬಿಕೆಗಳಿಗೂ, ವಿಜ್ಞಾನದ ಅರಿವಿಗೂ ಇರುವ ಅಂತರಗಳನ್ನು ಸರಳವಾದ ದೃಷ್ಟಾಂತಗಳ ಮೂಲಕ ಮನವರಿಕೆ ಮಾಡಿಕೊಟ್ಟರು.ಹಾಗೆಯೇ ವಿಜ್ಞಾನವು ಬೆಳೆದುಬಂದ ಹಾದಿಯನ್ನು ತಿಳಿಸುತ್ತಾ, ಪ್ರತಿಯೊಂದನ್ನು ಪ್ರಶ್ನಿಸುವ, ಅದರ ಆಗುಹೋಗನ್ನು ಪ್ರಾಯೋಗಿಕವಾಗಿ ಪರಿಶೀಲಿಸುವ ಮನೋಭಾವ, ಬುದ್ಧಿ ನಮ್ಮಲ್ಲಿ ದೃಢವಾಗಿ ಬೆಳೆಯಬೇಕು ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಪ್ರತಿಷ್ಠಾನದೊಂದಿಗೆ ವೈಜ್ಞಾನಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ನಾಗೇಶ್ವರ್ ಪ್ರಾರ್ಥಿಸಿದರು. ರಕ್ಷಾ ನಿರೂಪಿಸಿದರು.