ಸಾರಾಂಶ
ದುರ್ಗಾಕುಮಾರ್ ನಾಯರ್‌ಕೆರೆ
ಕನ್ನಡಪ್ರಭ ವಾರ್ತೆ ಸುಳ್ಯಸಾಹಿತ್ಯದ ಉದ್ದೇಶ ಚೆನ್ನಾಗಿದೆ. ಉದ್ದೇಶ ಸಾಧನೆಯ ಮಾರ್ಗ ತುಂಬಾ ಕಷ್ಟವಿದೆ ಎಂದು ದ.ಕ.ಜಿಲ್ಲಾ ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಪ್ರಭಾಕರ ಶಿಶಿಲ ಹೇಳಿದ್ದಾರೆ.
ಫೆ. ೨೧ ಮತ್ತು ಫೆ.೨೨ರಂದು ಮಂಗಳೂರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದರು.ಸಾಹಿತ್ಯದ ಉದ್ದೇಶ ನಮ್ಮ ಸುತ್ತಲಿನ ಜಗತ್ತನ್ನು ಸ್ಪಷ್ಟಗೊಳಿಸುವುದು ಮತ್ತು ಸುಂದರಗೊಳಿಸುವುದು. ಅದಕ್ಕೆ ಅಜ್ಞಾನ ಮತ್ತು ಅಸಮಾನತೆಗಳು ನಿವಾರಣೆಯಾಗಬೇಕು. ಆದರೆ ಬೃಹತ್ ತಲೆಗಳೆದುರು ಸಾಹಿತ್ಯ ದುರ್ಬಲವಾಗಿ ಬಿಡುತ್ತದೆ. ವರ್ತಮಾನದ ಸಮಸ್ಯೆಗಳಿಗೆಲ್ಲಾ ಸಾಹಿತ್ಯದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ, ಎಲ್ಲಾ ದೇಶಗಳಲ್ಲಿ ಬಹುತ್ವವನ್ನು ಗೌರವಿಸಿ , ಆಯಾ ದೇಶಗಳ ಸಂವಿಧಾನಗಳ ಆಶಯಗಳಿಗೆ ತಕ್ಕಂತೆ ನಡೆದುಕೊಂಡರೆ ಸಮಸ್ಯೆಗಳು ಇರುವುದಿಲ್ಲ. ಕಾರ್ಪೊರೆಟ್ ಸಂಸ್ಕೃತಿಗೆ ಒಗ್ಗಿಕೊಂಡವರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ ಎನ್ನುತ್ತಾರೆ ಅವರು. * ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದೀರಿ. ಮೊದಲ ಪ್ರತಿಕ್ರಿಯೆ?ತುಂಬಾ ಖುಷಿಯಾಗಿದೆ. ನನ್ನ ಸಾಹಿತ್ಯಿಕ ಅನಿಸಿಕೆಗಳನ್ನು ಹಂಚಿಕೊಳ್ಳಲು ಸರಿಯಾದ ವೇದಿಕೆ ಸಿಕ್ಕಿದೆ. ಆದರೆ ಸಮಯ ಸಾಕಷ್ಟು ಸಿಗುತ್ತದೆಯೇ ಇಲ್ಲವೇ ತಿಳಿಯದು. ಸಿಗುವ ಸಮಯದಲ್ಲಿ ಸಂಕ್ಷಿಪ್ತವಾಗಿ ಒಂದಷ್ಟು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಬೇಕೆಂದಿದ್ದೇನೆ. * ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಪ್ರಕಾರ ಯಾವುದು ? ಯಾಕೆ ?ಆರಂಭದಲ್ಲಿ ನಾನು ಕವಿತೆಗಳಿಂದಲೇ ಸಂತೃಪ್ತನಾಗುತ್ತಿದ್ದವ. ನವ್ಯ ಕವನದ ಭರಾಟೆಯಲ್ಲಿ ನನ್ನ ಕವನಗಳಿಗೆ ಮೌಲ್ಯ ಬರಲಿಲ್ಲ. ಮನಸ್ಸಿನಲ್ಲೊಂದು ಅತೃಪ್ತಿ. ಆದುದರಿಂದ ಸಣ್ಣ ಕತೆಗಳನ್ನು ಬರೆಯತೊಡಗಿದೆ. ಇದೇ ನನ್ನ ಅಭಿವ್ಯಕ್ತಿ ಮಾಧ್ಯಮ ಅಂದುಕೊಂಡೆ. ನನ್ನ ‘ಕಪಿಲಳ್ಳಿಯ ಕತೆಗಳು’ ಕೃತಿ ಓದಿದ ಕತೆಗಾರ ದಿ. ಜನಾರ್ದನ ಎರ್ಪಕಟ್ಟೆ ನೀವಿನ್ನು ಕಾದಂಬರಿ ಬರೆಯಬಹುದು ಎಂದಿದ್ದರು. ನನ್ನ ಯಕ್ಷಗಾನದ ಅನುಭವ ಮತ್ತು ಮಹಾಭಾರತದ ಓದು ಸೇರಿ ‘ಪುಂಸ್ತ್ರೀ’ ರೂಪುಗೊಂಡಿತು. ಸುಳ್ಯದ ಅರೆಭಾಷಿಕ ಗೌಡರ ಸಂಸ್ಕೃತಿಯನ್ನು ಆಧರಿಸಿ ‘ಇರುವುದೆಲ್ಲವ ಬಿಟ್ಟು ಕಾದಂಬರಿಯನ್ನು ಬರೆದೆ. ಸಾಹಿತ್ಯಿಕವಾಗಿ ಮತ್ತು ವ್ಯಾವಹಾರಿಕವಾಗಿ ಇವು ಯಶಸ್ವಿ ಕೃತಿಗಳು. ೨೦೦೯ರಲ್ಲಿ ನನ್ನ ಕೃತಿ ನದಿ ಎರಡರ ನಡುವೆ ಮಾಸ್ತಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಗಳಿಸಿತು. ಅಲ್ಲಿಂದ ಕಾದಂಬರಿಯೇ ನನ್ನ ಇಷ್ಟದ ಅಭಿವ್ಯಕ್ತಿ ಮಾಧ್ಯಮವಾಯಿತು.ರಾಮಾಯಣದ ಬಗ್ಗೆ ವಿನೂತನ ಕಾದಂಬರಿ ಬರೆಯಬೇಕೆಂದಿದ್ದೇನೆ.* ಅನೇಕ ಬಾರಿ ಶಿಶಿಲ ಮತ್ತು ವಿವಾದ ಜತೆ ಜತೆಗೆ. ಯಾಕೆ ?
ಬಂಡಾಯ ಧೋರಣೆಯವನಾದ ನನ್ನ ದೃಷ್ಟಿಕೋನಗಳು ಅನೇಕರಿಗೆ ಹಿಡಿಸಿರಲಿಕ್ಕಿಲ್ಲ. ನಾನು ದಲಿತರೊಡನೆ ಸೇರಿಕೊಂಡು ಯಕ್ಷಗಾನ ವೇಷ ಹಾಕಿ ಕುಣಿದವ. ನಿಷ್ಠುರವಾಗಿ ಇದನ್ನು ಸಹಿಸದ ಕೆಲವರು ವಿವಾದ ಎಬ್ಬಿಸಿದ್ದಿದೆ. ಇವೆಲ್ಲಾ ವ್ಯಾವಹಾರಿಕ ಮಟ್ಟದಲ್ಲಿ ಸದ್ದು ಮಾಡಿದರೂ ಸಾಹಿತ್ಯಿಕವಾಗಿ ಅಂತಿಮವಾಗಿ ನನ್ನ ಅನಿಸಿಕೆಗಳೇ ಸರಿಯೆಂದು ಅನೇಕರು ಒಪ್ಪಿಕೊಂಡಿದ್ದಾರೆ. * ಆರಂಭದ ಬಂಡಾಯದ ಪ್ರಖರತೆ ಕಡಿಮೆ ಆಗಲು ಏನು ಕಾರಣ?ಆಂಗ್ಲಭಾಷೆಯಲ್ಲಿ ಒಂದು ಗಾದೆ ಇದೆ. ೨೮ರ ಹರೆಯದವರೆಗೆ ನೀನು ಕಮ್ಯುನಿಷ್ಟನಾಗಿರದಿದ್ದರೆ ಮನುಷ್ಯನಲ್ಲ. ೨೮ರ ನಂತರವೂ ನೀನು ಕಮ್ಯುನಿಷ್ಟನಾಗಿದ್ದರೂ ಮನುಷ್ಯನಲ್ಲ. ಹರೆಯದಲ್ಲಿ. ಬಿಸಿರಕ್ತದ ಕಾಲದಲ್ಲಿ ಬಂಡಾಯದ ಪರವಾಗಿಯೇ ಯೋಚಿಸುತ್ತಿದ್ದೆ. ವ್ಯವಸ್ಥೆ ಬದಲಾಯಿಸಬಹುದೆಂಬ ಕನಸು ಕಂಡಿದ್ದೆ. ಆದರೆ ನಮ್ಮ ಸುತ್ತಮುತ್ತಲಿನ ಜಾತೀಯತೆ, ಭ್ರಷ್ಟಾಚಾರ, ಸಣ್ಣತನ, ಅಸಮಾನತೆ ಕಂಡಾಗ ನಾನು ಕಂಡ ಕನಸುಗಳು ನಿಜವಾಗಲಿಲ್ಲವಲ್ಲ ಎಂಬ ಹತಾಶೆ ಮೂಡಿತು. ನನ್ನ ವೈಯಕ್ತಿಕ ಜೀವನದಲ್ಲೂ ಕೆಲವು ಆಘಾತಗಳು ಸಂಭವಿಸಿದವು. ಈಗ ವಯಸ್ಸಾದ ಮೇಲೆ ರಕ್ತವೂ ತಣ್ಣಗಾಯಿತು. ಹಾಗೆ ನೋಡಿದರೆ ಕರ್ನಾಟಕದಲ್ಲಿ ಬಂಡಾಯ ಮತ್ತು ದಲಿತ ಚಳವಳಿಗಳು ಸ್ತಬ್ಧವಾಗಿವೆ. ಇವೆಲ್ಲಾ ಬಂಡಾಯ ಪ್ರವೃತ್ತಿ ಕಡಿಮೆ ಆಗಲು ಕಾರಣಗಳು.* ಅಧ್ಯಕ್ಷೀಯ ಭಾಷಣದಲ್ಲಿ ಯಾವ ವಿಚಾರಗಳಿಗೆ ಒತ್ತು ನೀಡುತ್ತೀರಿ?ಆ ಗುಟ್ಟನ್ನು ಪೂರ್ತಿ ಬಿಟ್ಟು ಕೊಡುವುದಿಲ್ಲ. ಆದರೂ ನಿಮ್ಮ ಕುತೂಹಲ ತಣಿಯಲು ಸ್ವಲ್ಪ ಹೇಳುತ್ತೇನೆ. ಬಹುತ್ವಕ್ಕೆ ಗೌರವ ಮತ್ತು ಸಂವಿಧಾನ ರಕ್ಷಣೆ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆ ಈ ಮೂರು ವಿಷಯಗಳಿಗೆ ಅಧ್ಯಕ್ಷೀಯ ಭಾಷಣದಲ್ಲಿ ಒತ್ತುಕೊಡುತ್ತೇನೆ.