ಸಾರಾಂಶ
ಓರಿಯಂಟೇಶನ್ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾವೇರಿನೊಂದ ಮಹಿಳೆಗೆ ಶೀಘ್ರ ನ್ಯಾಯ ಒದಗಿಸುವುದು ಕಾನೂನಿನ ಉದ್ದೇಶವಾಗಿದೆ. ಕಾಲಕಾಲಕ್ಕೆ ಕಾಯ್ದೆಗಳ ಪುನರ್ ಮನನಕ್ಕೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಹಾಗೂ ನಿಯಮಗಳ ಅನುಷ್ಠಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ ಕುರಿತು ಎರಡು ದಿನಗಳ ಓರಿಯಂಟೇಶನ್ ತರಬೇತಿ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಹಾಗೂ ರಾಜ್ಯ ಪ್ರತಿ ಕಾನೂನು ಜಾರಿಗೆ ಮಾಡಿದಾಗಲೂ ಆ ಕಾನೂನಿನ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ವಸತಿ, ಜೀವನಾಂಶ ಸೇರಿದಂತೆ ಅಗತ್ಯ ನೆರವು ಒದಗಿಸುವುದು ಅಗತ್ಯ. ದೌರ್ಜನ್ಯ ಪ್ರಕರಣಗಳಲ್ಲಿ ಕೂಡಲೇ ಎಫ್‌ಐಆರ್ ದಾಖಲಿಸಬಾರದು.ಪ್ರಕರಣಗಳ ಮಾಹಿತಿ ಕಲೆ ಹಾಕಬೇಕು. ಸಣ್ಣ-ಪುಟ್ಟ ಕಾರಣಗಳಿದ್ದರೆ ಕೌನ್ಸಲಿಂಗ್ ಮೂಲಕ ಮನವೋಲಿಸಿ ರಾಜಿಸಂಧಾನದ ಮಾಡಿಸುವ ಮೂಲಕ ಜೀವನ ನಡೆಸಲು ಸಲಹೆ ನೀಡಬೇಕು ಎಂದು ಹೇಳಿದರು.
ನ್ಯಾಯಾಲಯಗಳಲ್ಲಿ ೬೦ದಿನಗಳಲ್ಲಿ ಯಾಕೆ ಪ್ರಕರಣಗಳು ಮುಗಿಯುದುವುದಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದಿಂದ ಸಮನ್ಸ್ ಕಳುಹಿಸಿದಾಗ ಸಂಬಂಧಿಸಿ ವ್ಯಕ್ತಿಗಳು ಸಮನ್ಸ್ ಸ್ವೀಕರಿಸಲು ಹಿಂದೇಟು ಹಾಕುತ್ತಾರೆ.ಹಾಗಾಗಿ ಪ್ರಕರಣ ವಿಲೇವಾರಿಗೆ ವಿಳಂಬವಾಗುತ್ತದೆ. ಮಹಿಳಾ ಕಾಯ್ದೆಗಳ ಕುರಿತು ಅರಿತುಕೊಳ್ಳಬೇಕು ಹಾಗೂ ಇತರರಿಗೂ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್.ರಾಘವೇಂದ್ರಸ್ವಾಮಿ ಮಾತನಾಡಿ, ಭ್ರೂಣ ಲಿಂಗಪತ್ತೆ ಹಾಗೂ ಭ್ರೂಣ ಹತ್ಯೆ ನಿಷೇಧಿಸಲಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿ ಮಾತ್ರ ಸ್ಕ್ಯಾನಿಂಗ್ ಮಾಡಿಸಬೇಕು. ಪಾಲಕರಲ್ಲಿ ಗಂಡು -ಹೆಣ್ಣು ಎಂಬ ಬೇಧ ಮನೋಭಾವ ಹೋಗಬೇಕು. ಜಿಲ್ಲೆಯ ಲಿಂಗಾನುಪಾತ ಒಂದು ಸಾವಿರ ಪುರುಷರಿಗೆ ೯೫೬ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ೭೧ ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಭ್ರೂಣ ಲಿಂಗಪತ್ತೆ ಪ್ರಕರಣಗಳು ಕಂಡುಬಂದಿಲ್ಲ. ಎಲ್ಲರೂ ಹೆಣ್ಣು ಮಕ್ಕಳನ್ನು ಉಳಿಸಿಸುವ ಕಾರ್ಯ ಕೈಜೋಡಿಸೋಣ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ ನೋಂದವರಿಗೆ ನ್ಯಾಯ ಒದಗಿಸುವುದು ಅವಶ್ಯವಾಗಿದೆ. ಕಾನೂನು ನಿಯಮಗಳ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು. ಅಪ್ರಾಪ್ತರನ್ನು ಪೊಲೀಸ್ ಠಾಣೆಗೆ ಕರೆತರುವಂತಿಲ್ಲ ಹಾಗೂ ಯುನಿಫಾರ್ಮನಲ್ಲಿ ವಿಚಾರಣೆ ನಡೆಸುವಂತಿಲ್ಲ. ದೌರ್ಜನ್ಯಕ್ಕೊಳದ ಮಕ್ಕಳ ಹಾಗೂ ಮಹಿಳೆಯರಿಗೆ ಮುಕ್ತ ವಾತಾವರಣ ಒದಗಿಸಿಕೊಡಬೇಕು ಹಾಗೂ ಅವರಿಗೆ ಆತ್ಮಸ್ಥರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಸಾಧಕ ಮಹಿಳೆಯರಿಗೆ ಸನ್ಮಾನ:
"ಮಗಳನ್ನು ಉಳಿಸಿ, ಮಗಳನ್ನು ಓದಿಸಿ " ಕಾರ್ಯಕ್ರಮದ ಅಂಗವಾಗಿ ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಅಫ್ರಿದಾಬಾನು,ರೇಣುಕಾ ಬುಶೆಟ್ಟಿ, ಇಂಟರನ್ಯಾಷನಲ್ ಕ್ರಿಕೆಟ್‌ನಲ್ಲಿ ಭಾಗವಹಿಸಿದ ಗಂಗಮ್ಮ ಹರಿಜನ ಅವರನ್ನು ಸನ್ಮಾನಿಸಲಾಯಿತು.ಭ್ರೂಣ ಹತ್ಯೆ ತಡೆದ ಪರಿಮಳಾ ಜೈನ್, ಬಾಲ್ಯ ವಿವಾಹ ತಡೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಇಲಾಖೆಯ ರೇಣುಕಾ, ಗಿರಿಜಾ ಹಾಗೂ ಶಾಂತಮ್ಮ, ಆಶಾ ಕಾರ್ಯಕರ್ತರಾದ ಶಿಲ್ಪಾ ಮುದಿಗೌಡ್ರ, ರತ್ನ ಮಾಳಗಿ, ಉತ್ತಮ ಕಾರ್ಯನಿರ್ವಹಿಸಿದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ರೇಖಾ ನಾಯಕ, ಸ್ಕ್ಯಾನಿಂಗ್ ಸೆಂಟರ್ ಸಹಾಯಕಿ ರತ್ನ, ಅರ್ಪಿತಾ ಉಪ್ಪಾರ ಹಾಗೂ ಸ್ಪಂದನಾ ದತ್ತು ಕೇಂದ್ರದಿಂದ ಹೆಣ್ಣು ಮಗು ದತ್ತು ಪಡೆದ ಮಂಜುನಾಥ ದಂಪತಿ ಹಾಗೂ ದೇವರಾಜ ತಿಪ್ಪಣ್ಣವರ ದಂಪತಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್. ರಂಗನಾಥ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಎಸ್. ಮಜೀದ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲ ರೇಹನಾ ಚನ್ನಪ್ಪಟ್ಟಣ ಹಾಗೂ ಇಡಾರಿ ಸಂಸ್ಥೆ ಅಧ್ಯಕ್ಷೆ ಪರಿಮಳಾ ಜೈನ್ ಉಪಸ್ಥಿತರಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ ಸ್ವಾಗತಿಸಿದರು. ಸೋಮನಗೌಡ್ರ ಗಾಳಿಗೌಡ್ರ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಹೆಗಡೆ ವಂದಿಸಿದರು.