ಹನೂರು ಪಪಂ ಮುಖ್ಯಾಧಿಕಾರಿ ಕುರ್ಚಿಗಾಗಿ ಕಿತ್ತಾಟ

| Published : Jan 22 2025, 12:32 AM IST

ಹನೂರು ಪಪಂ ಮುಖ್ಯಾಧಿಕಾರಿ ಕುರ್ಚಿಗಾಗಿ ಕಿತ್ತಾಟ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಹಿಂದಿನ ಮುಖ್ಯ ಅಧಿಕಾರಿ ಮೂರ್ತಿ ಹಾಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅಶೋಕ್ ನಡುವೆ ಕುರ್ಚಿಗಾಗಿ ವಾಕ್ಸಮರ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ನಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಮಟ್ಟಿಗೆ ಘಟನೆ ನಡೆದಿದೆ. ಹನೂರು ಪಪಂ ಮುಖ್ಯಾಧಿಕಾರಿಯಾಗಿದ್ದ ಮೂರ್ತಿ ಅವರು ಕರ್ತವ್ಯ ಲೋಪವೆಸಗಿದ್ದಾರೆ ಎಂದು ಕಡ್ಡಾಯ ನಿವೃತ್ತಿಗೊಳಿಸಿ 2023 ಡಿ.14ರಂದು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದರು. ಅದರಂತೆ ಮೂರ್ತಿ ಅವರು ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದರು. ಇವರ ರಿಟ್ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌ ಕಡ್ಡಾಯ ನಿವೃತ್ತಿಗೊಳಿಸಿರುವ ಆದೇಶವನ್ನು ರದ್ದುಗೊಳಿಸಿ ಸರ್ಕಾರ ಮರುನೇಮಕಕ್ಕೆ ಆದೇಶ ಹೊರಡಿಸಿತ್ತು. ಹೈಕೋರ್ಟ್‌ ಆದೇಶ ಪ್ರತಿ ಹಾಗೂ ಕರ್ತವ್ಯಕ್ಕೆ ಹಾಜರಾಗುವ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಾರ್ಯಾಲಯ, ನಗರ ಅಭಿವೃದ್ಧಿ ಕೋಶದ ಕಚೇರಿಗೆ ಜ.20 ರಂದು ನೀಡಿ ಮಂಗಳವಾರ ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಹಾಲಿ ಮುಖ್ಯಾಧಿಕಾರಿ ಅಶೋಕ್ ಅವರು ನಿಮಗೆ ಹೈಕೋರ್ಟ್‌ನಲ್ಲಿ ಆದೇಶವಾಗಿರುವುದು ಸತ್ಯ. ಆದರೆ ಆದೇಶದಲ್ಲಿ ಹನೂರು ಪಟ್ಟಣ ಪಂಚಾಯಿತಿಗೆ ಮರು ನೇಮಕ ಮಾಡಿರುವ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಇದಲ್ಲದೆ ಜಿಲ್ಲಾಧಿಕಾರಿಗಳಿಂದ ಯಾವುದೇ ಆದೇಶ ಬಾರದೆ ಇರುವ ಹಿನ್ನೆಲೆಯಲ್ಲಿ ನಿಮಗೆ ಅಧಿಕಾರ ಹಸ್ತಾಂತರ ಮಾಡಲು ಬರುವುದಿಲ್ಲ ಎಂದರು. ಇದೇ ವೇಳೆ ಹಿಂದಿನ ಮುಖ್ಯಾಧಿಕಾರಿ ಮೂರ್ತಿ ಮಾತನಾಡಿ, ನಾನು ಹೈಕೋರ್ಟ್‌ ಆದೇಶದಂತೆ ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದೇನೆ. ಹಾಗಾಗಿ ನಾನು ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ತಿಳಿಸಿದರು. ಇದೆ ವೇಳೆ ಮುಖ್ಯಾಧಿಕಾರಿ ಅಶೋಕ್ ಅವರಿಗೆ ನಗರಾಭಿವೃದ್ಧಿ ಕೋಶದ ಯೋಜನೆ ನಿರ್ದೇಶಕಿ ಸುಧಾ ಕರೆ ಮಾಡಿ ನೀವು ಯಾವುದೇ ಕಾರಣಕ್ಕೂ ಅಧಿಕಾರ ಹಸ್ತಾಂತರ ಮಾಡುವುದು ಬೇಡ. ಒಂದೊಮ್ಮೆ ನಿಯಮ ಪಾಲನೆ ಮಾಡದಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಂದು ಮೌಖಿಕ ಆದೇಶ ನೀಡಿದರು. ಮುಖ್ಯಾಧಿಕಾರಿ ಅಶೋಕ್ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ನೀವು ಯಾವುದೇ ಕಾರಣಕ್ಕೂ ಕರ್ತವ್ಯ ಮಾಡಲು ಬರುವುದಿಲ್ಲ ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿದರೆ ನಿಮ್ಮ ಮೇಲೆ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಬೇಕಾಗುತ್ತದೆ ಎಂದು ತಿಳಿಸಿ ಇದೇ ವೇಳೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಮೂರ್ತಿ ಅವರು ನನಗೆ ಲಿಖಿತವಾಗಿ ತಿಳಿಸಿ. ನಾನು ಎಲ್ಲಿ ನೋಡಿಕೊಳ್ಳಬೇಕು ಅಲ್ಲಿ ನೋಡಿಕೊಳ್ಳುತ್ತೇನೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು. ಅಸಮಾಧಾನ ವ್ಯಕ್ತಪಡಿಸಿದ ಪಪಂ ಸದಸ್ಯರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಹದಿಮೂರು ವಾರ್ಡ್ ಗಳ ಸಮಸ್ಯೆಯ ಬಗ್ಗೆ ಮಾಹಿತಿ ನೀಡಲು ಯೋಜನಾ ನಿರ್ದೇಶಕಿ ಸುಧಾ ಅವರಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ, ಒಬ್ಬ ಅಧಿಕಾರಿಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಂದು ತಿಳಿಸುತ್ತಾರೆ. ಅದೇ ರೀತಿ ಪಪಂ ಸದಸ್ಯರ ಕರೆಗೂ ಸ್ಪಂದಿಸಬೇಕಾದ ಅಧಿಕಾರಿ ಕರ್ತವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇವರು ಪಪಂ ಸದಸ್ಯರ ಮನವಿಗಳಿಗೆ ಸ್ಪಂದಿಸದಿದ್ದರೆ ಇವರ ವಿರುದ್ಧ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡುವುದಾಗಿ ಪಪಂ ಸದಸ್ಯರು ಪತ್ರಿಕೆಗೆ ತಿಳಿಸಿದರು. ಸಿಬ್ಬಂದಿಗೆ ಪೀಕಲಾಟ:ಹಿಂದಿನ ಮುಖ್ಯ ಅಧಿಕಾರಿ ಮೂರ್ತಿ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತೇನೆ ಎಂದು ಕಚೇರಿಗೆ ಆಗಮಿಸಿದ್ದ ವೇಳೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಅಧಿಕಾರಿ ಅಶೋಕ್ ನಡುವೆ ವಾಕ್ ಸಮರ ನಡೆದ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಏನು ಮಾಡುವುದು ಎಂದು ತಿಳಿಯದೆ ಇರಿಸು ಮುರಿಸು ಉಂಟಾಗುವುದರ ಜೊತೆಗೆ ಸಾರ್ವಜನಿಕರು ಸಹ ಇದೆ ವೇಳೆ ಕೆಲಸ ಕಾರ್ಯಗಳಿಗೆ ಬಂದಂತ ವೇಳೆಯಲ್ಲಿ ಇಬ್ಬರು ಅಧಿಕಾರಿಗಳ ಜಟಾಪಟಿ ನೋಡಿ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಕಿತ್ತಾಟ ನಡೆಸುತ್ತಿರುವುದು ಜಿಲ್ಲಾಧಿಕಾರಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮವಹಿಸಬೇಕು ಜೊತೆಗೆ ನ್ಯಾಯಾಲಯದಲ್ಲಿ ಆದೇಶಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದರು.