ಸಾರಾಂಶ
ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಚುರುಕಾಗಿದ್ದು, 2-3 ದಿನಗಳಿಂದ ಜಿಲ್ಲೆಯ ವಿವಿಧೆಡೆ ಸುರಿದ ಪರಿಣಾಮ ಸಮೀಪದ ಕವಲಗೇರಿ ಗ್ರಾಮದಲ್ಲಿ ಬೆಳೆಯಲಾದ ಅಡಕೆ ಬೆಳೆ ನೆಲಕಚ್ಚಿದೆ. ಏಕಾಏಕಿ ಮಳೆಯಿಂದಾಗಿ ನೀರಿನ ರಭಸಕ್ಕೆ ಅಡಿಕೆ ಬೆಳೆಯು ಬಿದ್ದು ಹೋಗಿದ್ದು, ಮನ ಕಲಕುವಂತಿತ್ತು.
ಧಾರವಾಡ: ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದ ಕೆಲವು ರೈತರು ಕಂಗಾಲಾಗಿದ್ದಾರೆ.
ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಚುರುಕಾಗಿದ್ದು, 2-3 ದಿನಗಳಿಂದ ಜಿಲ್ಲೆಯ ವಿವಿಧೆಡೆ ಸುರಿದ ಪರಿಣಾಮ ಸಮೀಪದ ಕವಲಗೇರಿ ಗ್ರಾಮದಲ್ಲಿ ಬೆಳೆಯಲಾದ ಅಡಕೆ ಬೆಳೆ ನೆಲಕಚ್ಚಿದೆ. ಏಕಾಏಕಿ ಮಳೆಯಿಂದಾಗಿ ನೀರಿನ ರಭಸಕ್ಕೆ ಅಡಿಕೆ ಬೆಳೆಯು ಬಿದ್ದು ಹೋಗಿದ್ದು, ಮನ ಕಲಕುವಂತಿತ್ತು.ಕವಲಗೇರಿ ಗ್ರಾಮದ ಬಳಿ ಮೂರು ಎಕರೆಯಲ್ಲಿ ಅಡಕೆ ಬೆಳೆದ ರೈತ ಅಡಿವಯ್ಯ ಚಿಕ್ಕಮಠ ₹5 ಲಕ್ಷ ವೆಚ್ಚ ಮಾಡಿದ್ದರು. ಸದ್ಯ ಅಡಕೆ ಗಿಡಗಳಿಗೆ ಹನಿ ನೀರಾವರಿ ಮಾಡಿಸಿದ್ದು, ಗಿಡಗಳು ಬೆಳೆಯುವ ಹಂತದಲ್ಲಿದ್ದವು. ಮಳೆಯ ನೀರಿನ ತೀವ್ರತೆಗೆ ಹನಿ ನೀರಾವರಿ ವ್ಯವಸ್ಥೆ ಸೇರಿದಂತೆ ಗಿಡಗಳು ಬಿದ್ದು ಹೋಗಿವೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅಡವಯ್ಯ, ಗ್ರಾಮದ ಬಳಿ ಇರುವ ಚಿಕ್ಕಹಳ್ಳ ಏಕಾಏಕಿ ತುಂಬಿ ಹರಿದ ಹಿನ್ನೆಲೆಯಲ್ಲಿ ಕೆಲ ಹೊಲಗಳು-ತೋಟಗಳಿಗೆ ನೀರು ನುಗ್ಗಿ ಈ ಅವಾಂತರ ಸೃಷ್ಟಿಯಾಗಿದೆ. ಹಳ್ಳದ ಹೂಳು ಎತ್ತಿದ್ದರೆ ಈ ಪ್ರಸಂಗ ಬರುತ್ತಿಲ್ಲ. ಈಗ ₹5 ಲಕ್ಷ ಹಾನಿಯಾಗಿದ್ದು, ಸರ್ಕಾರ ಪರಿಹಾರ ನೀಡಲಿ ಎಂದು ಮನವಿ ಮಾಡಿಕೊಂಡರು. ಇದಲ್ಲದೇ ಬೇಸಿಗೆಯಲ್ಲಿ ನೀರಾವರಿ ವ್ಯವಸ್ಥೆ ಹೊಂದಿದ ಬಾಳೆ, ಮಾವು ಮಳೆಯಿಂದಾಗಿ ತುಸು ಪ್ರಮಾಣದಲ್ಲಿ ಹಾನಿಯಾಗಿದೆ.