ಮಳೆ ಆರಂಭವಾಗಿದ್ದು, ಹತ್ತಿ ಬಿತ್ತಲು ಈಗ ಸಕಾಲ

| Published : May 19 2024, 01:55 AM IST / Updated: May 19 2024, 01:33 PM IST

ಸಾರಾಂಶ

ಮಳೆ ಆರಂಭಗೊಂಡಿದ್ದು, ಹತ್ತಿಬೀಜ ಬಿತ್ತಲು ಈಗ ನೆಲದ ಫಲವತ್ತತೆ ಸೂಕ್ತವಾಗಿರುತ್ತದೆ. ರೈತರು ಹತ್ತಿ ಬಿತ್ತನೆ ಮಾಡಬಹುದು ಎಂದು ಕೃಷಿತಜ್ಞ ಆರ್.ಜಿ.ಗೊಲ್ಲರ್ ತಿಳಿಸಿದ್ದಾರೆ.

  ದಾವಣಗೆರೆ  : ಮಳೆ ಆರಂಭಗೊಂಡಿದ್ದು, ಹತ್ತಿಬೀಜ ಬಿತ್ತಲು ಈಗ ನೆಲದ ಫಲವತ್ತತೆ ಸೂಕ್ತವಾಗಿರುತ್ತದೆ. ರೈತರು ಹತ್ತಿ ಬಿತ್ತನೆ ಮಾಡಬಹುದು ಎಂದು ಕೃಷಿತಜ್ಞ ಆರ್.ಜಿ.ಗೊಲ್ಲರ್ ತಿಳಿಸಿದ್ದಾರೆ.

ಕ್ಲೋರ್ ಪೈರಿಫಾಸ್ 3 ಮಿಲೀ, ಕಾರ್ಬೆಂಡೆಜಿಂ 3 ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಉಪಚರಿಸಿ ಬಿತ್ತಬೇಕು. ಕನಕಾ ತರಹದ ತಳಿಗಳಿಗೆ 4''''*3'''' ಮತ್ತು ಡಿಸಿಎಚ್ 32 ತರಹದ ತಳಿಗಳಿಗೆ 4''''*2'''' ಅಂತರಗಳಲ್ಲಿ ಬಿತ್ತನೆ ಮಾಡಬಹುದು. 3ರಿಂದ 5 ಎಕರೆಗೆ ಒಂದು ತಳಿ ಬಳಸಬಹುದು. ಕ್ಷೇತ್ರ ಹೆಚ್ಚಾದಂತೆ (ಅವುಗಳನ್ನು ಬಳಸಿದ ಬಗ್ಗೆ ಕ್ಷೇತ್ರಾನುಭವ ಇರುವಂತಹ) ಬೇರೆ ಬೇರೆ ತಳಿ ಬಳಸಬೇಕು. ಸುತ್ತಲೂ 4-6 ಸಾಲು ಗೋವಿನಜೋಳ/ ಹೈಬ್ರಿಡ್ ಜೋಳ/ ಮೇವಿನ ಜೋಳ ಬೆಳೆಯುವುದು ಸೂಕ್ತ ಎಂದು ತಿಳಿಸಿದ್ದಾರೆ.

ಕಳೆ ಕಸ ಇರದಿರಲಿ:

ಹೊಲದಲ್ಲಿ, ಬದುಗಳಲ್ಲಿ ಪಾರ್ಥೇನಿಯಂ ಅಥವಾ ಇತರೆ ಕಳೆ ಕಸ ಇರಬಾರದು. ಬಿತ್ತುವಾಗ ಪ್ರತಿ ಗುಣಿಗೆ ಟ್ರೈಕೋಡರ್ಮಾ ಬೆರೆಸಿದ ಕೊಟ್ಟಿಗೆ ಗೊಬ್ಬರ ಕೊಡುವುದು ಸೂಕ್ತ. ಉತ್ತಮ ಹಸಿ ಮಳೆಯಾಗಿದ್ದಲ್ಲಿ ಮತ್ತು ನೀರಿನ ಅನುಕೂಲ ಇದ್ದಲ್ಲಿ ಪ್ರತಿ ಎಕರೆಗೆ 30-40 ಕೆಜಿ 10:26:26 ಸಾರಂಪೊ ಕೊಡಬಹುದು. ಬೆಳೆಯು 20-25 ದಿನಗಳು ಆದ್ದಾದಾಗ ಇದೇ ಗೊಬ್ಬರವನ್ನು, ಯೂರಿಯಾದೊಂದಿಗೆ ಮಳೆಯ ಪ್ರಮಾಣ ನೋಡಿಕೊಂಡು ಕೊಡಬಹುದು. ಬೆಳೆ 25 ದಿನಗಳ ಹಂತದಲ್ಲಿ ಇರುವಾಗ, 2- 3 ಗ್ರಾಂ 13:0:45, 2-3 ಗ್ರಾಂ 19:19:19, 1 ಗ್ರಾಂ ಲಿಬರಲ್ ಟಿಎಂಎಕ್ಸ್ 2 (ಅಥವಾ ತತ್ಸಮಾನವಾದ ಮತ್ತು ಅದೇ ಪ್ರಮಾಣದ ಲಘು ಪೋಷಕಾಂಶಗಳ ಮಿಶ್ರಣ) ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಪೈರೆಥ್ರಾಯಿಡ್ ಕೀಟನಾಶಕ ಬಳಸಬೇಡಿ:

ರಸಗೊಬ್ಬರ ಮಣ್ಣಿಗೆ ಕೊಡುವಾಗ, ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವಾಗ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರಲೇಬೇಕು. ಗೊಬ್ಬರಗಳನ್ನು ಮಣ್ಣಿನಲ್ಲಿ 4-6 " ಆಳದಲ್ಲಿ, ಬುಡದಿಂದ 4-6” ದೂರದಲ್ಲಿ ಬಳೆ ಆಕಾರದಲ್ಲಿ ಕೊಡುವುದು ಸೂಕ್ತ. ರಸ ಹೀರುವ ಕೀಟಗಳ ಬಾಧೆ ಇದ್ದಲ್ಲಿ 3 ಮಿಲಿ ಅಜಾಡಿರಕ್ಟಿನ್ (1500 ಪಿಪಿಎಂ) ಬೆರೆಸಿ ಸಿಂಪಡಿಸಬಹುದು. ಯಾವುದೇ ಕಾರಣಕ್ಕೆ ತಜ್ಞರ ಶಿಫಾರಸು ಇಲ್ಲದೇ ಪೈರೆಥ್ರಾಯಿಡ್ ಕೀಟನಾಶಕ ಬಳಸಬಾರದು ಎಂದು ಮಾಹಿತಿ ನೀಡಿದ್ದಾರೆ.

ಹುಳುಗಳ ನಾಶಪಡಿಸಿ:

ಕಾಂಡದ ಮೂತಿ ಹುಳು ಬಾಧೆ ತಪ್ಪದೇ ಬರುವ ಪ್ರದೇಶಗಳಲ್ಲಿ 25-50 ದಿನಗಳ ಹಂತದಲ್ಲಿ ಕೀಟನಾಶಕ ಬಳಕೆ ಅನಿವಾರ್ಯ. ಮತ್ತು ಬಿತ್ತನೆಯಾದ 15 ದಿನಗಳ ನಂತರ, ಪ್ರತಿ ದಿನ 7 ಗಂಟೆಯೊಳಗೆ ಹೊಲಗಳಲ್ಲಿ ಕಂಡುಬರುವ ಪ್ರೌಢ ಹುಳುಗಳನ್ನು ಕೈಯಿಂದ ಆಯ್ದು ಸಂಗ್ರಹಿಸಿ ನಾಶಪಡಿಸಬೇಕು. ಬಿತ್ತನೆ ನಂತರ 30 ದಿವಸ ಅವಧಿಯಲ್ಲಿ ತೇವಾಂಶ ತಕ್ಕಮಟ್ಟಿಗೆ ಇದ್ದರೆ, ಇಳುವರಿ ಚೆನ್ನಾಗಿ ಪಡೆಯಲು ಸಾಧ್ಯ. ಬಿತ್ತನೆ ತಡವಾದಂತೆ ಇಳುವರಿ ಕಡಿಮೆಯಾಗುವುದು ಎಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪರಿಣಿತರ / ತಜ್ಞರ ಸಲಹೆ ಪಡೆಯಲು ಮರೆಯಬಾರದು ಎಂದು ಸಲಹೆ ನೀಡಿದ್ದಾರೆ.