ಆಧುನಿಕ ಸಮಾಜದಲ್ಲಿ ಅಸಹನೆ, ಹಿಂಸೆ ವಿಜೃಂಭಿಸುತ್ತಿದೆ. ಮನುಷ್ಯ ಕೇಂದ್ರಿತ ಹಿಂಸೆಯನ್ನು ಮೊದಲು ವಿರೋಧಿಸಬೇಕು. ಶರಣ ಸಾಹಿತ್ಯಕ್ಕೆ ಜೀವಪರ ನಿಲುವುಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ಸಲ್ಲುತ್ತದೆ ಎಂದು ದಾವಣಗೆರೆಯ ಹಿರಿಯ ಲೇಖಕ ದಾದಾಪೀರ್ ನವಿಲೇಹಾಳು ಅಭಿಪ್ರಾಯಪಟ್ಟರು.

ಬಳ್ಳಾರಿ: ಆಧುನಿಕ ಸಮಾಜದಲ್ಲಿ ಅಸಹನೆ, ಹಿಂಸೆ ವಿಜೃಂಭಿಸುತ್ತಿದೆ. ಮನುಷ್ಯ ಕೇಂದ್ರಿತ ಹಿಂಸೆಯನ್ನು ಮೊದಲು ವಿರೋಧಿಸಬೇಕು. ಶರಣ ಸಾಹಿತ್ಯಕ್ಕೆ ಜೀವಪರ ನಿಲುವುಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ಸಲ್ಲುತ್ತದೆ ಎಂದು ದಾವಣಗೆರೆಯ ಹಿರಿಯ ಲೇಖಕ ದಾದಾಪೀರ್ ನವಿಲೇಹಾಳು ಅಭಿಪ್ರಾಯಪಟ್ಟರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸೆಯ ಕೋಶ ಹಾಗೂ ಕನ್ನಡ ವಿಭಾಗದಿಂದ ಆಯೋಜಿಸಿದ್ದ ‘ವಚನ ಸಾಹಿತ್ಯ ಮತ್ತು ವೈಚಾರಿಕತೆ ’ ವಿಷಯದ ಕುರಿತು ಮಾತನಾಡಿದರು.

ಸಾಮಾಜಿಕ ಜಾಲತಾಣಗಳು ವಿಕೃತಿಯನ್ನು ಮೆರೆಯುತ್ತಿವೆ. ಹೊಸ ತಲೆಮಾರನ್ನು ದಾರಿ ತಪ್ಪಿಸುತ್ತಿವೆ. ಇದನ್ನು ಕುಗ್ಗಿಸಲು, ನೈತಿಕತೆಯನ್ನು ಉಳಿಸಲು ಶರಣ ಸಾಹಿತ್ಯವನ್ನು ಬಳಸುವುದು ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಹನ್ನೆರಡನೆಯ ಶತಮಾನದ ಶರಣರು ತಮ್ಮ ಜೀವನಾನುಭವಗಳ ಸೃಜನಶೀಲ ಅಭಿವ್ಯಕ್ತಿಗೆ ವಚನ ರೂಪವನ್ನು ಬಳಸಿದರು. ದೇಸಿಯ ನುಡಿಗಟ್ಟುಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದು ಅವರ ಹೆಚ್ಚುಗಾರಿಕೆ. ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಬರೆದರಲ್ಲದೆ ಅದರಂತೆ ಬದುಕಿದರು. ದುಡಿಯುವ ವರ್ಗವನ್ನು ಸಮಾನ ನೆಲೆಯಲ್ಲಿ ಗೌರವಿಸಿದರು. ಕಾಯಕಕ್ಕೆ ಘನತೆಯನ್ನು ತಂದು ಕೊಟ್ಟರು. ಕಾಯಕದಿಂದ ಬಂದ ಉತ್ಪನ್ನವನ್ನು ದಾಸೋಹಕ್ಕೆ ಬಳಸಿದರು. ಬಹಳ ಮುಖ್ಯವಾಗಿ ಸಮಾಜದಲ್ಲಿನ ತಾರತಮ್ಯ ನಾಶವಾಗಿ ಒಟ್ಟಿಗೆ ಕೂತು ಉಣ್ಣುವ ಸಂಸ್ಕೃತಿಯನ್ನು ಎತ್ತಿ ಹಿಡಿದರು ಎಂದು ವಿಶ್ಲೇಷಿಸಿದರು.

ವಚನಕಾರರು ಅಸಮಾನತೆ, ಮೂಢನಂಬಿಕೆ, ಗೊಡ್ಡು ಸಂಪ್ರದಾಯಗಳನ್ನು ಪ್ರತಿರೋಧಿಸಿ ವೈಚಾರಿಕತೆಯ ಶೋಧ ನಡೆಸಿದರು. ಸಾಮರಸ್ಯ, ಸಹಬಾಳ್ವೆಯ ಬದುಕಿಗೆ ತೆರೆದುಕೊಂಡರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ ಪ್ರಗತಿಪರ ಚಿಂತನೆ, ವೈಜ್ಞಾನಿಕ ಮನೋಭಾವದ ವಿಚಾರಗಳನ್ನು ತೀವ್ರವಾಗಿ ತುಂಬಿಕೊಂಡ ಶರಣ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತ. ಅದು ಸಮಾಜದ ಪರಿವರ್ತನೆಗೆ ನೆರವಾಗುತ್ತಲೇ ಬದುಕಿಗೆ ಅರ್ಥವನ್ನು, ಹೊಸ ಅರಿವನ್ನು ತುಂಬುವ ಶಕ್ತಿಯನ್ನು ಪಡೆದಿದೆ. ಮಾನವೀಯ ಮೌಲ್ಯಗಳನ್ನು, ಸಮಾನತೆಯನ್ನು ಸಾರಿದ ವಚನ ಸಾಹಿತ್ಯವನ್ನು ನಾವೆಲ್ಲರೂ ಹೆಚ್ಚೆಚ್ಚು ಓದಬೇಕಾಗಿದೆ ಎಂದರು.ವೇದಿಕೆಯ ಮೇಲೆ ಕನ್ನಡ ವಿಭಾಗದ ಮುಖ್ಯಸ್ಥರಾದ ದಸ್ತಗೀರಸಾಬ್ ದಿನ್ನಿ, ಸಹಾಯಕ ಪ್ರಾಧ್ಯಾಪಕರಾದ ಬಿ. ರಾಮಸ್ವಾಮಿ, ಎಂ. ಎನ್. ಪ್ರವೀಣಕುಮಾರ್ ಇದ್ದರು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಮಂಜುನಾಥ್, ಗೋವಿಂದಪ್ಪ, ಅಜ್ಜಪ್ಪ, ಚಂದ್ರಶೇಖರ್, ಹನುಮಂತರಾಯ, ಲೇಖಕರಾದ ವೀರೇಂದ್ರ ರಾವಿಹಾಳ ಉಪಸ್ಥಿತರಿದ್ದರು.