ಸಾರಾಂಶ
ಕಳೆದ ಕೆಲವು ತಿಂಗಳಿಂದ ತಾಲೂಕಿನ ಮೀರಸಾಬಿಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದಿನಗಟ್ಟಲೇ ನಿಂತು ಕಾದರೂ ಸರಿಯಾಗಿ ಪಡಿತರ ನೀಡುತ್ತಿಲ್ಲ. ತಡವಾಗಿ ಬಂದವರಿಗೆ ಹೆಬ್ಬೆಟ್ಟು ಹಾಕಿಸಿಕೊಂಡು ಮುಂದಿನ ತಿಂಗಳು ನೀಡುವುದಾಗಿ ಹೇಳುತ್ತಾರೆ. ತಿಂಗಳಲ್ಲಿ ಕೇವಲ ಎರಡು ದಿನ ಮಾತ್ರ ಪಡಿತರ ನೀಡುತ್ತಾರೆಂದು ಪಡಿತರದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕನ್ನಡಪ್ರಭವಾರ್ತೆ ಚಳ್ಳಕೆರೆ
ಕಳೆದ ಕೆಲವು ತಿಂಗಳಿಂದ ತಾಲೂಕಿನ ಮೀರಸಾಬಿಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದಿನಗಟ್ಟಲೇ ನಿಂತು ಕಾದರೂ ಸರಿಯಾಗಿ ಪಡಿತರ ನೀಡುತ್ತಿಲ್ಲ. ತಡವಾಗಿ ಬಂದವರಿಗೆ ಹೆಬ್ಬೆಟ್ಟು ಹಾಕಿಸಿಕೊಂಡು ಮುಂದಿನ ತಿಂಗಳು ನೀಡುವುದಾಗಿ ಹೇಳುತ್ತಾರೆ. ತಿಂಗಳಲ್ಲಿ ಕೇವಲ ಎರಡು ದಿನ ಮಾತ್ರ ಪಡಿತರ ನೀಡುತ್ತಾರೆಂದು ಪಡಿತರದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಗ್ರಾಮದ ಕರಿಯಣ್ಣ, ತಿಪ್ಪೇಸ್ವಾಮಿ, ಚಂದ್ರಪ್ಪ ಈ ಬಗ್ಗೆ ಮಾಹಿತಿ ನೀಡಿ, ಪ್ರತಿ ತಿಂಗಳು ಪಡಿತರವನ್ನು ಪಡೆಯಲು ನಾವು ಬೆಳಗ್ಗೆಯಿಂದ ಸಂಜೆವರೆಗೂ ಕೆಲಸಕಾರ್ಯ ಬಿಟ್ಟು ಕಾದರೂ ಅಕ್ಕಿ ದೊರೆಯುತ್ತಿಲ್ಲ. ಕಾರಣ, ನ್ಯಾಯಬೆಲೆ ಅಂಗಡಿ ಪಡಿತರ ವಿತರಕರು ಬರುವುದಿಲ್ಲ. ಯಾಕೆ ಬಂದಿಲ್ಲ ಎಂದು ಕೇಳಿದರೆ ಯಾವುದೇ ಮಾಹಿತಿ ನೀಡುವುದಿಲ್ಲ. ಸಂಜೆ ವರೆಗೂ ಕಾದರೂ ವಾಪಾಸ್ ಹೋಗಿ ಮಾರನೆ ದಿನ ಬಂದರೆ ಪಡಿತರವಿಲ್ಲ ಹೆಬ್ಬೆಟ್ಟು ಹಾಕಿಹೋಗಿ ಮುಂದಿನ ಬಾರಿ ನೀಡಲಾಗುತ್ತದೆ ಎಂದು ಉದಾಸೀನದ ಮಾತನಾಡುತ್ತಾರೆ ಎಂದು ದೂರಿದರು.
ಕೇವಲ ಎರಡು ದಿನ ಪಡಿತರ ವಿರತರಿಸಿ ನಂತರ ಯಾರಿಗೂ ಪಡಿತರ ನೀಡುತ್ತಿಲ್ಲ. ಸರ್ಕಾರ ಕೊಡುವ ಉಚಿತ ಅಕ್ಕಿ, ರಾಗಿ ಸಿಗುವುದಿಲ್ಲ. ನ್ಯಾಯಬೆಲೆ ಅಂಗಡಿ ತೆರೆದ ಕೂಡಲೇ ಹೆಬ್ಬೆಟ್ಟು ಹಾಕಿದವರು ಪಡಿತರ ಪಡೆಯಲು ಬಂದವರು ನಾಮುಂದೆ, ತಾಮುಂದೆ ಎಂದು ಅಂಗಡಿ ಮುಂದೆ ಜಗಳಕ್ಕೆ ನಿಲ್ಲುತ್ತಾರೆ. ಪ್ರತಿ ತಿಂಗಳು ಇದೇ ರೀತಿ ಆಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.ಗ್ರಾಮದಲ್ಲಿ ಬಿಪಿಎಲ್ ಕಾರ್ಡ್ ದಾರರು ಹೆಚ್ಚಿದ್ದು, ಪ್ರತಿನಿತ್ಯ ಕೂಲಿ ಕೆಲಸದಿಂದಲೇ ಜೀವನ ನಡೆಸಬೇಕಿದೆ. ಸುಮಾರು 1500ಕ್ಕೂ ಹೆಚ್ಚು ಬಿಪಿಎಲ್ ಪಡಿತರದಾರರು ಇದ್ದಾರೆ. ಆದರೆ ಕೆಲವೇ ಜನರಿಗೆ ಮಾತ್ರ ಪಡಿತರ ಭಾಗ್ಯ ದೊರೆಯುತ್ತಿದೆ. ಅಧಿಕಾರಿಗಳು ಈ ಬಗ್ಗೆ ತುರ್ತು ಗಮನಹರಿಸಿ ಪ್ರತಿ ತಿಂಗಳು ಎಲ್ಲರಿಗೂ ಪಡಿತರ ವಿತರಣೆಯಾಗುವಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.
ವಿಪರ್ಯಾಸವೆಂದರೆ ಪ್ರತಿ ತಿಂಗಳು ಸಾರ್ವಜನಿಕರು ನ್ಯಾಯಬೆಲೆ ಅಂಗಡಿ ಮುಂದೆ ಸೇರಿ ವಾಗ್ವಾದ ನಡೆಸಿ, ಪಡಿತರ ಸಿಗುತ್ತಿಲ್ಲವೆಂದು ಆರೋಪಿಸಿದರೂ ಸಹ ನ್ಯಾಯಾಬೆಲೆ ಅಂಗಡಿ ಮಾಲೀಕರು ಮಾತ್ರ ಈ ಬಗ್ಗೆ ಯಾವುದೇ ಸಮಜಾಯಿಸಿ ನೀಡುತ್ತಿಲ್ಲ. ನಾವು ಪಡಿತರವನ್ನು ವಿತರಿಸಿದಾಗ ಮಾತ್ರ ತೆಗೆದುಕೊಳ್ಳಬೇಕು ಎಂಬ ಭಾವನೆ ಅವರಲ್ಲಿದೆ ಎನ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.