ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಕುಟುಂಬ ಮಾಲೀಕರು, ಸಮಾಜವಾದಿ ಪಕ್ಷಕ್ಕೆ ಮುಲಾಯಂ ಸಿಂಗ್ ಕುಟುಂಬ ಮಾಲೀಕರಾಗಿದ್ದರೆ. ಬಿಜೆಪಿಗೆ ಕಾರ್ಯಕರ್ತರೇ ಮಾಲೀಕರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಕುಟುಂಬ ಮಾಲೀಕರು, ಸಮಾಜವಾದಿ ಪಕ್ಷಕ್ಕೆ ಮುಲಾಯಂ ಸಿಂಗ್ ಕುಟುಂಬ ಮಾಲೀಕರಾಗಿದ್ದರೆ. ಬಿಜೆಪಿಗೆ ಕಾರ್ಯಕರ್ತರೇ ಮಾಲೀಕರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.

ಬಿಜೆಪಿ ಚಿಕ್ಕಮಗಳೂರು ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ಸಖರಾಯಪಟ್ಟಣದಲ್ಲಿ ಸೋಮವಾರ ನಡೆದ ಸಖರಾಯ ಪಟ್ಟಣ, ದೇವನೂರು, ಲಕ್ಯಾ ಮಹಾಶಕ್ತಿ ಕೇಂದ್ರದ ಗ್ರಾಮಾಂತರ ಮಂಡಲ ಮಟ್ಟದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಬಿಜೆಪಿ ಕೌಟುಂಬಿಕ ಸಂಬಂಧ ಹೊಂದಿದೆ. ಆದರೆ, ಯಾವುದೇ ಕುಟುಂಬದ ನಿಯಂತ್ರಣದಲ್ಲಿರುವ ಪಕ್ಷವಲ್ಲ ಎಂದು ಹೇಳಿದರು.

1988ರಲ್ಲಿ ನಾನೊಬ್ಬ ಬೂತ್‌ ಕಮಿಟಿ ಅಧ್ಯಕ್ಷನಾಗಿದ್ದೆ, ಯಡಿಯೂರಪ್ಪ ಮಂಡ್ಯದ ಬೂಕನಕೆರೆಯಿಂದ ಶಿಕಾರಿಪುರಕ್ಕೆ ಹೋದ ಸ್ವಯಂ ಸೇವಕ, ಪ್ರಧಾನಿ ನರೇಂದ್ರ ಮೋದಿ, ಎಲ್‌ ಕೆ ಅಡ್ವಾಣಿ, ದೇವೇಂದ್ರ ಫಡ್ನವಿಸ್ ಅವರೆಲ್ಲ ಕಾರ್ಯಕರ್ತರು, ಸ್ವಯಂ ಸೇವಕರು. ಪಕ್ಷದ ವ್ಯವಸ್ಥೆ ಕಾರ್ಯಕರ್ತರಲ್ಲಿ ಕ್ಷಮತೆ ತುಂಬಿ ನಾಯಕರನ್ನಾಗಿಸುತ್ತದೆ. ಒಂದಷ್ಟು ಅಪವಾದಗಳನ್ನು ಹೊರತು ಪಡಿಸಿದರೆ, ಬಿಜೆಪಿ ಕಾರ್ಯಕರ್ತರೇ ನಾಯಕರಾಗಿರುವ ಪಕ್ಷವಾಗಿದೆ. ಅಪವಾದಗಳನ್ನು ಗಮನಿಸಿ, ಪಕ್ಷವೇ ಹೀಗೆ ಎನ್ನುವ ತೀರ್ಮಾನಕ್ಕೆ ಬರಬಾರದು ಎಂದರು.

ಕಾರ್ಯಕರ್ತರಿಗೆ ಜವಾಬ್ದಾರಿಗಳನ್ನು ನೀಡಿ, ಅವರಲ್ಲಿ ಪಕ್ಷ ಕ್ಷಮತೆ ತುಂಬುತ್ತದೆ. ಅದಕ್ಕಾಗಿ ಅವರಿಗೆ ಸಣ್ಣ ಪುಟ್ಟ ಜವಾಬ್ದಾರಿ ಗಳನ್ನು ನೀಡಿ ಅವರನ್ನು ಬೆಳೆಸಲಾಗುತ್ತದೆ. ಇದು ಬಿಜೆಪಿ ಕಾರ್ಯಪದ್ಧತಿ ಭಿನ್ನಾಭಿಪ್ರಾಯಗಳನ್ನು ಒಪ್ಪುತ್ತಲೇ ಸಮನ್ವಯ ಸಾಧಿಸುವುದು ನಮ್ಮಕಾರ್ಯ ವಿಧಾನ ಎಂದು ತಿಳಿಸಿದರು.

ಪಕ್ಷ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ನೀಡುವ ತನಕ ನನಗೆ ಹಿಂದಿಯ ಅರಿವಿರಲಿಲ್ಲ. ಏಕವಚನ ಬಹುವಚನಗಳ ಅರಿವಿ ರಲಿಲ್ಲ. ಪಕ್ಷ ಜವಾಬ್ದಾರಿ ನೀಡಿದ್ದರಿಂದ ನಾನು ಅದನ್ನು ನಿರ್ವಹಿಸುವಂತಾಯಿತು. ಜವಾಬ್ದಾರಿ ನೀಡಿ, ಕಾರ್ಯಕರ್ತರ ಸಾಮರ್ಥ್ಯ ವೃದ್ಧಿಸುವುದು ಬಿಜೆಪಿ ಕಾರ್ಯಾಚರಿಸುವ ರೀತಿ. ಕಾರ್ಯಕರ್ತರನ್ನು ಸಿದ್ಧಾಂತಕ್ಕೆ ಅನುಗುಣವಾಗಿಯೇ ಪಕ್ಷ ಬೆಳೆಸುತ್ತದೆ. ‘ದೇಶವೇ ಮೊದಲು’ ಎನ್ನುವುದು ಸಿದ್ಧಾಂತ. ಇದರ ಜೊತೆಗೆ, ಹಿಂದುತ್ವ, ಸಾಮೂಹಿಕ ನಿರ್ಣಯಗಳು, ವೈಚಾರಿಕ ಸ್ಪಷ್ಟತೆ, ನಿರ್ದಿಷ್ಟ ಗುರಿಯೊಡನೆ ಕಾರ್ಯಾಚರಿಸುವುದು ನಮ್ಮ ವಿಧಾನ ಎಂದು ವಿವರಿಸಿದರು.

ಇದೆಲ್ಲದರೊಡನೆ, ಕಾರ್ಯಾಗಾರಗಳ ಮೂಲಕವೂ ಕಾರ್ಯಕರ್ತರನ್ನು ಸಿದ್ಧಪಡಿಸಲಾಗುತ್ತದೆ. ಇದರ ಜೊತೆಗೆ, ಒಂದು ಮೇಲ್ಪಂಕ್ತಿ ಹಾಕಿಕೊಡಲಾಗುತ್ತದೆ. ಅಂದರೆ, ಏನಾದರೂ ಕೆಲಸ ಮಾಡಿ ಎಂದು ಆದೇಶ ನೀಡುವ ಬದಲು, ನಾವೇ ಕೆಲಸ ಮಾಡಿ, ಅದರಿಂದ ಕಾರ್ಯಕರ್ತರಿಗೆ ಸ್ಫೂರ್ತಿ ನೀಡುವುದು ಪಕ್ಷದ ವಿಧಾನ. ಎಲ್ಲೋ ಕಸ ಇದ್ದಾಗ, ಗುಡಿಸು ಎನ್ನುವ ಬದಲು, ನಾವೇ ಪೊರಕೆಯಿಂದ ಗುಡಿಸಿದರೆ, ಆಗ ಎಲ್ಲರೂ ಕೆಲಸಕ್ಕೆ ಕೈ ಜೋಡಿಸುತ್ತಾರೆ. ಇದು ಬಿಜೆಪಿ ಕಾರ್ಯ ಪದ್ಧತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್. ಸಿ ಕಲ್ಮರುಡಪ್ಪ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ. ಎನ್. ವಿಜಯಕುಮಾರ್ ಹಾಜರಿದ್ದರು.