ಸಾರಾಂಶ
ಸಿರವಾರದಿಂದ ಮುನಿರಾಬಾದಿಗೆ ಸಾಗಿರುವ ಪಾದಯಾತ್ರೆ ಸಿಂಧನೂರಿಗೆ ಬಂದ ಸಮಯದಲ್ಲಿ ಗಾಂಧಿವೃತ್ತದಲ್ಲಿ ರೈತನೊಬ್ಬ ಮಲಗಿ ಪ್ರತಿಭಟಿಸುತ್ತಿರುವುದು.
ಕನ್ನಡಪ್ರಭ ವಾರ್ತೆ ಸಿಂಧನೂರು
ನೀರಾವರಿ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷತೆಯೇ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿಯಲು ಪ್ರಮುಖ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ದೊಡ್ಡಮನೆ ಆರೋಪಿಸಿದರು.ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದ ಹಿನ್ನೆಲೆಯಲ್ಲಿ ಸಿರವಾರದಿಂದ ರಾಜ್ಯ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಮಂತ್ರಿ ನೇತೃತ್ವದಲ್ಲಿ ಮುನಿರಾಬಾದಿಗೆ ಕೈಗೊಂಡಿರುವ ಪಾದಯಾತ್ರೆ ಶುಕ್ರವಾರ ಸಾಯಂಕಾಲ ಸಿಂಧನೂರಿಗೆ ತಲುಪಿತು.
ಮಹಾತ್ಮಗಾಂಧಿ ವೃತ್ತದಲ್ಲಿ ಸಭಿಕರನ್ನು ಉದ್ಧೇಶಿಸಿ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ದೊಡ್ಡಮನೆ ಮಾತನಾಡಿ, ಕ್ರಸ್ಟ್ ಗೇಟ್ ಮುರಿದ ಹಿನ್ನೆಲೆಯಲ್ಲಿ ಅಪಾರ ನೀರು ಪೋಲಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಲಾಶಯಕ್ಕೆ ನೀರು ಬರುವ ಪೂರ್ವದಲ್ಲಿಯೇ ಎಲ್ಲಾ ಕ್ರಸ್ಟ್ ಗೇಟ್‌ಗಳನ್ನು ಸರಿಪಡಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಲಾಗಿತ್ತು. ಆದಾಗ್ಯೂ ಯಾವ ಅಧಿಕಾರಿಗಳು ಸಹ ಈ ಬಗ್ಗೆ ಗಮನಹರಿಸಿರುವುದಿಲ್ಲ. ಆದ್ದರಿಂದ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕ್ರಸ್ಟ್ ಗೇಟ್ ಮುರಿದ ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಜಲಾಶಯದ ನಿರ್ವಹಣೆಗೆ ಪ್ರತಿ ವರ್ಷ 67 ಕೋಟಿ ರು.ಹಣ ಬಿಡುಗಡೆಯಾಗುತ್ತಿದ್ದು, ಅದನ್ನು ಚುನಾಯಿತ ಪ್ರತಿನಿಧಿಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿ ಜಲಾಶಯ ನಿರ್ವಹಣೆಗೆ ಬಿಡುಗಡೆಯಾಗುವ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆಪಾದಿಸಿದರು.
ಅನಿತಾ ಮಂತ್ರಿ ಮಾತನಾಡಿ, ಅನ್ನದಾತರಿಗೆ ಅನ್ಯಾಯ ಮಾಡಿದ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.ಈ ವೇಳೆ ಮುಖಂಡರಾದ ಬಸವರಾಜ್ ಗೋಡಿಹಾಳ, ಕೆ.ಮರಿಯಪ್ಪ ಸುಕಾಲಪೇಟೆ, ಅಮರೇಗೌಡ ಮಲ್ಲಾಪುರ, ಉಮೇಶ್ಗೌಡ ಅರಳಹಳ್ಳಿ ಅನೇಕರು ಉಪಸ್ಥಿತರಿದ್ದರು.