ಕೆರೆ, ಕಟ್ಟೆಗಳಿಗೆ ನೀರು ತುಂಬಿಸದೇ ಸಚಿವರ ಕಾಲಹರಣ: ಡಿ.ಸಿ.ತಮ್ಮಣ್ಣ ಆಕ್ರೋಶ

| Published : Aug 17 2024, 12:52 AM IST

ಕೆರೆ, ಕಟ್ಟೆಗಳಿಗೆ ನೀರು ತುಂಬಿಸದೇ ಸಚಿವರ ಕಾಲಹರಣ: ಡಿ.ಸಿ.ತಮ್ಮಣ್ಣ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ತಡೆಗೋಡೆಯು 90 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಕಳಪೆ ಕಾಮಗಾರಿಯಿಂದ ನದಿಯಲ್ಲಿ ನೀರು ಹೆಚ್ಚು ಬಂದಾಗ ತಡೆಗೋಡೆ ಕುಸಿದು ಲಕ್ಷಾಂತರ ರು. ವ್ಯರ್ಥವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಲು ಹಾಗೂ ನಾಲೆಗಳಿಗೆ ನೀರು ಹರಿಸುವಲ್ಲಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಶಾಸಕರು ಯಾವುದೇ ಕ್ರಮ ಕೈಗೊಳ್ಳದೇ ಕಾಲಹರಣ ಮಾಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಶುಕ್ರವಾರ ರೈತರೊಂದಿಗೆ ಆಗಮಿಸಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು ಅವರನ್ನು ದೂರವಾಣಿ ಕರೆ ಮೂಲ ತರಾಟೆಗೆ ತೆಗೆದುಕೊಂಡು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ನಾನು ಶಾಸಕ, ಸಚಿವರಾಗಿದ್ದ ವೇಳೆ ರೈತರ ಅನುಕೂಲಕ್ಕಾಗಿ ಹಲವು ಹೊಸ ಯೋಜನೆಗಳ ಪಟ್ಟಿಮಾಡಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಗಮನಕ್ಕೆ ತಂದು ತುರ್ತಾಗಿ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದ್ದೆ, ಈಗ ಇದುವರೆಗೂ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಸಿದ್ದರಾಮಯ್ಯನವರೇ ಮತ್ತೆ ಸಿಎಂ ಆದರೂ ಕಾಮಗಾರಿ ಪ್ರಾರಂಭ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉತ್ತಮ ಮಳೆಯಾಗಿ ಕೆಆರ್ ಎಸ್ ತುಂಬಿ ತಮಿಳುನಾಡಿಗೆ ನೀರು ಹೋಗುತ್ತಿದೆ. ಜಿಲ್ಲೆ ಸೇರಿದಂತೆ ತಾಲೂಕಿನ ಕೆರೆ,ಕಟ್ಟೆಗಳಿಗೆ ನೀರು ಹರಿಸಿದ್ದರೆ 6 ಟಿಎಂಸಿ ನೀರು ಸಾಕಾಗುತ್ತಿತ್ತು, ತಮಿಳುನಾಡಿಗೆ 80 ಟಿಎಂಸಿ ಹರಿದು ಹೋದರೂ ಯಾರೂ ಕೇಳಲಿಲ್ಲ. ನಮ್ಮ ರೈತರ ಬಗ್ಗೆ ಇವರಿಗೆ ಕಾಳಜಿ ಇದ್ದಿದ್ದರೆ ಎಲ್ಲಾ ಕೆರೆ- ಕಟ್ಟೆಗಳಿಗೆ ಮೊದಲು ನೀರು ತುಂಬಿಸುವ ಕೆಲಸ ಮಾಡುತ್ತಿದ್ದರು ಎಂದರು.

ಸರ್ಕಾರ ಕೆರೆಗೆ ನೀರು ತುಂಬಿಸಲು ಯಾವುದೇ ಯೋಜನೆ ತಂದಿಲ್ಲ. ಜಿಲ್ಲೆಗೆ 90 ಕೋಟಿ ರು ವೆಚ್ಚದಲ್ಲಿ ನಾಲೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಪ್ರತ್ಯೇಕವಾಗಿ ಪೈಪ್ ಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು ಎಂದು ತಿಳಿಸಿದರು.

ತಾಲೂಕಿಗೆ 8.22 ಕೋಟಿ ರು. ಅನುದಾನದಲ್ಲಿ ಪೈಪ್ ಲೈನ್ ಅಳವಡಿಸಿ ಅಭಿವೃದ್ಧಿಗೊಳಿಸಬೇಕೆಂಬ ಹೊಸ ಯೋಜನೆಯನ್ನು ಕೈಗೊಂಡಿತಾದರೂ ಹಣ ಬಿಡುಗಡೆಯಾಗದೆ ಧೂಳು ಹಿಡಿಯುತ್ತಿದೆ. ಎನ್.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಾಗಿದ್ದು, ಹಲವು ಯೋಜನೆಗಳನ್ನು ಜಾರಿಗೆ ತರಲಿ. ನಮ್ಮ ಸಹಕಾರವೂ ಇರುತ್ತದೆ. ಅದರೆ, ಅವರು ಸರ್ಕಾರ ಉಳಿಸಿಕೊಳ್ಳಲು ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.ಅಸ

ತನಿಖೆಗೆ ಆಗ್ರಹ:

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ತಡೆಗೋಡೆಯು 90 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಕಳಪೆ ಕಾಮಗಾರಿಯಿಂದ ನದಿಯಲ್ಲಿ ನೀರು ಹೆಚ್ಚು ಬಂದಾಗ ತಡೆಗೋಡೆ ಕುಸಿದು ಲಕ್ಷಾಂತರ ರು. ವ್ಯರ್ಥವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ಮತ್ತೆ 3 ಕೋಟಿ ರು. ಹಣ ಬಿಡುಗಡೆಯಾಗಿ ಕೆಲಸ ನಡೆಯುತ್ತಿದೆ. ಈ ಹಿಂದೆ ಕಳಪೆ ಕಾಮಗಾರಿ ಬಗ್ಗೆ ತನಿಖೆ ಮಾಡಿಸಿ ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದರು. ಇದರ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದರು

ಮುಖಂಡರಾದ ಮಾಲಗಾರನಹಳ್ಳಿ ಗ್ರಾಮದ ರಾಮಲಿಂಗಯ್ಯ, ಪ್ರಸನ್ನ, ಸುರೇಶ, ಕೆಂಪಣ್ಣ, ಸುಧೀರ್, ರಾಜೇಶ, ಶೇಖರ, ಶಿವಣ್ಣ, ಮರಿಯಂಕ, ಕೃಷ್ಣಸ್ವಾಮಿ, ಮಲ್ಲವರಾಜು, ಶಂಕರ್, ಅಮರ್ದೇವರಾಜು, ಕಾಳಿರಯ್ಯ, ನಾಗರಾಜು, ಹಾಜರಿದ್ದರು.